ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಆದಷ್ಟು ಶೀಘ್ರವಾಗಿ ಬೇಧಿಸಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಈ ಪ್ರಕರಣವನ್ನು ಬೇಧಿಸಲು ಏಳೆಂಟು ಮಂದಿ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಸಿಸಿಬಿ ಜತೆಗೆ ಎನ್‌ಐಎನವರು ಸೇರಿಕೊಂಡು ಆರೋಪಿಯ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ” ಎಂದು ಮಾಹಿತಿ ನೀಡಿದರು.
“ಆರೋಪಿಯನ್ನು ಟ್ರ್ಯಾಕ್ ಮಾಡಲಾಗುತ್ತಿದ್ದು, ಆತ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾನೆಂಬ ಮಾಹಿತಿ ಇದೆ. ಹಾಗಾಗಿ ಯಾವ ಯಾವ ದಿಕ್ಕಿನಲ್ಲಿ, ಮಾರ್ಗದಲ್ಲಿ ಹೋಗಿದ್ದಾನೆ ಎಂಬುದನ್ನು ಕಂಡು ಹಿಡಿಯಬೇಕಾಗಿದೆ. ಹಾಗಾಗಿ ಪೊಲೀಸರು ತುಮಕೂರಿನಲ್ಲಿಯೂ ಶೋಧ ಕಾರ್ಯ ನಡೆಸಿದ್ದಾರೆ” ಎಂದು ಹೇಳಿದರು.
“ತುಮಕೂರಿನ ಮೂಲಕ ಮುಂದೆ ಹೋಗಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಎನ್‌ಐಎ ತಂಡದವರು ಸಿಸಿಟಿವಿ ಫೋಟೇಜ್ ಪರಿಶೀಲನೆ ನಡೆಸಿದ್ದು, ತನಿಖಾ ಕಾರ್ಯವನ್ನು ಮುಂದುವರೆಸಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಾಮರಸ್ಯ, ಸಂವಿಧಾನ ಉಳಿಯಬೇಕಾದರೆ ಬಿಜೆಪಿಯ ಹೆಡೆಮುರಿ ಕಟ್ಟಬೇಕು: ಮಲ್ಲಿಗೆ ಸಿರಿಮನೆ
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಿಲ್ಲ, ಬದಲಾಗಿ ಅವರನ್ನು ಕರೆದು ವಿಚಾರಣೆ ನಡೆಸಲಾಗಿದೆ ಅಷ್ಟೇ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.