ಲೋಕಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಆದರೆ, ಕರ್ನಾಟಕದಲ್ಲಿ ಇನ್ನೂ ಜೆಡಿಎಸ್-ಬಿಜೆಪಿ ನಡುವೆ ಸೀಟು ಹಂಚಿಕೆ ಪೂರ್ಣಗೊಂಡಿಲ್ಲ. ಹೀಗಾಗಿ, ಮಂಡ್ಯ ಲೋಕಸಭಾ ಕ್ಷೇತ್ರ ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಅಲ್ಲದೆ, ಮಂಡ್ಯ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಈ ನಡುವೆ, ಮಂಡ್ಯವನ್ನು ಬಿಜೆಪಿಯೇ ಪಡೆದುಕೊಳ್ಳುತ್ತದೆ. ನನಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂದು ಹೇಳುತ್ತಿದ್ದ ಸಂಸದೆ ಸುಮಲತಾ, ಈಗ ‘ನನ್ನನ್ನು ಒಂದು ಪಕ್ಷಕ್ಕೆ ಹೋಲಿಸಬೇಡಿ’ ಎಂದಿದ್ದಾರೆ. ಆ ಮೂಲಕ, ಕುತೂಹಲ ಹುಟ್ಟುಹಾಕಿದ್ದಾರೆ.
ಏನೇ ಆಗಲಿ ಮಂಡ್ಯ ಬಿಡುವುದಿಲ್ಲ. ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಂಡು, ತಮಗೆ ಟಿಕೆಟ್ ನೀಡಬೇಕೆಂದು ಸಮಲತಾ ಒತ್ತಾಯಿಸುತ್ತಿದ್ದರು. ಅದಕ್ಕಾಗಿ, ಪ್ರಧಾನಿ ಮೋದಿಯನ್ನೂ ಭೇಟಿ ಮಾಡಿದ್ದರು. ಆದರೆ, ಮಂಡ್ಯ ಬಿಜೆಪಿಗೆ ಪಾಲಿಗೆ ದೊರೆಯುವ ಯಾವುದೇ ಲಕ್ಷಣಗಳಿಲ್ಲ. ಹೀಗಾಗಿ, ಸುಮಲತಾ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಸಮಲತಾ ಕೂಡ ತಮ್ಮನ್ನು ಬಿಜೆಪಿಯೊಂದಿಗೆ ತಾಳೆ ಹಾಕಬೇಡಿ ಎಂಬ ಮಾತುಗಳನ್ನಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿದ ಸುಮಲತಾ, ನನಗೆ ಟಿಕೆಟ್ ಸಿಗುತ್ತದೆ ಎನ್ನುತ್ತಿದ್ದಾರೆ. ಅಲ್ಲದೆ, ನನ್ನನ್ನು ಯಾವುದೇ ಪಕ್ಷದೊಂದಿಗೆ ಕಂಪೇರ್ ಮಾಡಬೇಡಿ ಎಂದೂ ಹೇಳಿದ್ದಾರೆ.
“ಬಿಜೆಪಿ-ಜೆಡಿಎಸ್ ನಡುವೆ ಸೀಟು ಹಂಚಿಕೆ ಆಗಬೇಕು. ಮೈತ್ರಿ ಧರ್ಮ ಎಂಬುದು ಎರಡು ಪಕ್ಷಗಳ ನಡುವಿನ ಮಾತು. ನಾನು ಬಿಜೆಪಿ ಸಂಸದೆ ಆಗಬೇಕೆಂದು ಆಸೆ ಪಟ್ಟಿದ್ದೇನೆ. ಮಂಡ್ಯ ಟಿಕೆಟ್ ಯಾರಿಗೆ ಎಂಬುದನ್ನ ಹೈಕಮಾಂಡ್ ಹೇಳಬೇಕು. ಮಂಡ್ಯ ಬಿಟ್ಟು ನಾನು ಹೋಗಲ್ಲ. ಕೆಲವೇ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ” ಎಂದಿದ್ದಾರೆ.
“ಬಿಜೆಪಿ ಹೈಕಮಾಂಡ್ ವಿಶ್ವಾಸದ ಮಾತನ್ನಾಡಿದೆ. ಹಾಗಾಗಿ, ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ಏನಾಗುತ್ತದೆ ನೋಡೋಣ. ಟಿಕೆಟ್ ಸಿಗದಿದ್ದರೆ, ಮುಂದೆ ನೋಡೋಣ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಗಣಿಗ ರವಿ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ, “ಹನಕೆರೆ ಗ್ರಾಮದ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಹೆಚ್ಚುವರಿ ಹಣ ಬಿಡುಗಡೆಗೆ ಕ್ರಮ ವಹಿಸಲಾಗಿದೆ. ಅಂತಿಮವಾಗಿ ಕೇಂದ್ರ ಸಚಿವರ ಸಹಿ ಆಗಬೇಕಿದೆ. ಇಂತಹ ಸಂದರ್ಭದಲ್ಲಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ತಮ್ಮ ಹೋರಾಟದಿಂದ ಅಂಡರ್‌ಪಾಸ್ ಆಗಿದೆಯೆಂದು ಬಿಂಬಿಸಿಕೊಳ್ಳಲು ಗಣಿಗ ರವಿ ಯತ್ನಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.