ಮೈಸೂರಿನ ಮಾಜಿ ಕಾರ್ಪೊರೇಟರ್ ಅಯಾಝ್ ಪಾಷಾ (ಪಂಡು) ಸಹೋದರ ಧಾರ್ಮಿಕ ಗುರು ಹಾಗೂ ಎಸ್ಡಿಪಿಐ ಕಾರ್ಯಕರ್ತ ಮುಹಮ್ಮದ್ ಅಕ್ಮಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಬಶೀರ್ ಅಹ್ಮದ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಅಲ್ತಾಫ್ ಸೇರಿದಂತೆ 5 ಮಂದಿಯ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾಜಿ ಕಾರ್ಪೊರೇಟರ್ ಬಶೀರ್ ಅಹ್ಮದ್, ಈತನ ಪುತ್ರ ಫೈಝಾನ್ ಅಹ್ಮದ್, ಅಲ್ತಾಫ್ ಖಾನ್, ಪರ್ವೀಝ್ ಹಾಗೂ ಇಬ್ರಾಹಿಂ ಎಂಬವರ ವಿರುದ್ಧ ಕೊಲೆ ಮಾಡಿಸಿರುತ್ತಾರೆ ಎಂದು ಆರೋಪಿಸಿ ಕೊಲೆಗೀಡಾದ ಅಕ್ಮಲ್ರವರ ಪತ್ನಿ ನಾಝಿಯಾ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಮಾರ್ಚ್ 8 ರಂದು ರಾತ್ರಿ 8.30ರ ಸುಮಾರಿಗೆ ರಾಜೀವ್ ನಗರದ ಬೇಕರಿ ಬಳಿ ಮುಹಮ್ಮದ್ ಅಕ್ಮಲ್ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು.
ಶಾಂತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಪ್ಲೆಕ್ಸ್ ತೆರವುಗೊಳಿಸುವಂತೆ ಅಕ್ಮಲ್ ಅವರು ನಗರಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ನಂತರ ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಕೆಎಂಡಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಲ್ತಾಫ್ ಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಬಶೀರ್ ಹಾಗೂ ಅಲ್ತಾಫ್ ರವರು ಅಕ್ಮಲ್ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಬಗ್ಗದ ಮುಹಮ್ಮದ್ ಅಕ್ಮಲ್ ಅವರು, ಬಶೀರ್ ಹಾಗೂ ಅಲ್ತಾಫ್ ವಿರುದ್ದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಎನ್ನಲಾಗಿದೆ.
ಅಲ್ಲದೆ ಬಶೀರ್ ಹಾಗೂ ಅಲ್ತಾಫ್ ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ತನ್ನ ಪತಿ ಮುಹಮ್ಮದ್ ಅಕ್ಮಲ್ ಅವರ ಕೊಲೆಯ ಹಿಂದೆ ಬಶೀರ್ ಅಹ್ಮದ್, ಅಲ್ತಾಫ್ ಖಾನ್, ಪರ್ವೀಝ್, ಇಬ್ರಾಹಿಂ ಹಾಗೂ ಫೈಝಾನ್ ಅಹ್ಮದ್ ಅವರ ಕೈವಾಡ ಇದೆ ಎಂದು ಆರೋಪಿಸಿ ನಾಝಿಯಾ ಉದಯಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಎಸ್ಡಿಪಿಐಯಿಂದ ಪ್ರತಿಭಟನೆ
ಅಕ್ಮಲ್ ರವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
