ಚುನಾವಣಾ ಬಾಂಡ್‌ನ ಸಂಪೂರ್ಣ ಮಾಹಿತಿಯನ್ನು ನೀಡಲು ಜೂನ್ ಅಂತ್ಯದವರೆಗೂ ಅಂದರೆ ನಾಲ್ಕು ತಿಂಗಳುಗಳ ಕಾಲಾವಕಾಶವನ್ನು ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.
ಕಳೆದ ತಿಂಗಳು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದು, ಎಸ್‌ಬಿಐಗೆ ಚುನಾವಣಾ ಬಾಂಡ್ ಖರೀದಿಸಿದವರ ಹೆಸರು, ಮೊತ್ತ, ಯಾವ ಪಕ್ಷಕ್ಕೆ ದೇಣಿಗೆ ನೀಡಲಾಗಿದೆ ಎಂಬ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಮಾರ್ಚ್ 6ರವರೆಗೆ ಸಮಯ ನೀಡಿತ್ತು.
ಹಾಗೆಯೇ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಈ ವಿವರ ಪ್ರಕಟಿಸಲು ಮಾರ್ಚ್ 13ರವರೆಗೆ ಸಮಯ ನೀಡಿದೆ. ಆದರೆ ಎಸ್‌ಬಿಐ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಜೂನ್ 30ರವರೆಗೆ ಸಮಯವಕಾಶವನ್ನು ಕೋರಿದ್ದು, ಲೋಕಸಭೆ ಚುನಾವಣೆ ಮುಗಿಯುವವರೆಗೂ ಎಸ್‌ಬಿಐ ಅವಕಾಶ ಕೇಳಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಐದು ನ್ಯಾಯಾಧೀಶರನ್ನೊಳಗೊಂಡ ಪೀಠವು ಈ ಅರ್ಜಿ ವಿಚಾರಣೆಯನ್ನು ಇಂದು 10:30ಕ್ಕೆ ನಡೆಸಲಿದೆ. ಈ ಪೀಠದಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ, ಬಿಆರ್ ಗವಾಯ್, ಜೆಬಿ ಪಾರ್ದಿವಾಲಾ, ಮನೋಜ್ ಮಿಶ್ರಾ ಇರಲಿದ್ದಾರೆ.
ಇನ್ನು ಆಸೋಸಿಷಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ಎನ್‌ಜಿಒ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದು ಇದರ ವಿಚಾರಣೆಯೂ ನಡೆಯಲಿದೆ. ಮಾರ್ಚ್ 6ರವರೆಗೆ ಎಸ್‌ಬಿಐಗೆ ಸುಪ್ರೀಂ ಗಡುವು ನೀಡಿದ್ದು, ಇದನ್ನು ಎಸ್‌ಬಿಐ ಉಲ್ಲಂಘಿಸಿದೆ ಎಂದು ಸಿಪಿಐಎಂ ಮತ್ತು ಎಡಿಆರ್ ಆರೋಪಿಸಿದೆ.
ಪ್ರಸ್ತುತ ಎಲ್ಲವೂ ಕಂಪ್ಯೂಟರೀಕರಣವಾಗಿದ್ದು ಮಾಹಿತಿ ಶೀಘ್ರವೇ ಲಭ್ಯವಾಗುತ್ತದೆ. ಹಾಗಿರುವಾಗ ಎಸ್‌ಬಿಐ ನಾಲ್ಕು ತಿಂಗಳುಗಳ ಸಮಯ ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ. “ಎಸ್‌ಬಿಐ 48 ಕೋಟಿ ಬ್ಯಾಂಕ್ ಖಾತೆಗಳು, 66,000 ಎಟಿಎಂಗಳು ಮತ್ತು 23,000 ಬ್ರ್ಯಾಂಚ್‌ಗಳನ್ನು ನಿರ್ವಹಿಸುತ್ತದೆ. ಆದರೆ ಬರೀ 22,217 ಚುನಾವಣಾ ಬಾಂಡ್‌ಗಳ ಮಾಹಿತಿ ನೀಡಲು ಎಸ್‌ಬಿಐ ನಾಲ್ಕು ತಿಂಗಳು ಸಮಯ ಕೇಳುತ್ತದೆ” ಎಂದು ಕಾಂಗ್ರೆಸ್ ಹೇಳಿದೆ.
