ನಾಲ್ಕೂವರೆ ವರ್ಷ ಬೆಳಕಿಗೆ ಬಾರದ ಸಂಸದ ಅನಂತಕುಮಾರ್ ಹೆಗಡೆ ಚುನಾವಣೆ ಸಮಯದಲ್ಲಿ ಸಂವಿಧಾನ ಬದಲಾವಣೆಯ ಹುಚ್ಚು ಹೇಳಿಕೆ ನೀಡುತ್ತಾ ವಿಕೃತ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಹಿಂದೂ ರಾಷ್ಟ್ರ, ಸಂವಿಧಾನ ಬದಲಾವಣೆ ಇವೆರಡೂ ಅವರ ಹುಚ್ಚು ಚಾಳಿ ಬಿಂಬಿಸುತ್ತವೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ನೇರ ವಾಗ್ದಾಳಿ ನಡೆಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೋಣೆಮಾದೇನಹಳ್ಳಿ ಗ್ರಾಮದಲ್ಲಿ ₹69 ಲಕ್ಷ ವೆಚ್ಚದ ಜಲ ಜೀವನ್ ಮಿಷನ್ ಯೋಜನೆಯ ಮನೆ ಮನೆಗೆ ನೀರು ಒದಗಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
“ಸರ್ವ ಧರ್ಮ ಸಮನ್ವಯ ರೀತಿ ಬದುಕುವ ಹಕ್ಕು, ಸಮಾನತೆ ಒದಗಿಸಿದ ಸಂವಿಧಾನ ಬದಲಾವಣೆ ಮಾಡುವ ವಿಚಾರ ರಕ್ತಪಾತಕ್ಕೆ ನಾಂದಿ ಹಾಡುತ್ತದೆ. ಈ ರೀತಿ ಅಸಾಧ್ಯವಾದ ಮಾತುಗಳು ಹೇಳಿಕೊಂಡು ಅಧಿಕಾರಕ್ಕೆ ಬರಲು ಅವಣಿಸುವ ಬಿಜೆಪಿ ವಿವಾದಾತ್ಮಕ ಹೇಳಿಕೆ ನೀಡಲೆಂದು ಕೆಲವರನ್ನು ಸೃಷ್ಟಿಸಿಕೊಂಡಿದೆ” ಎಂದು ಕಿಡಿಕಾರಿದರು.
“ಕೆಎಸ್‌ಆರ್‌ಟಿಸಿ ನೂತನ ಬಸ್ಸುಗಳು ಜಿಲ್ಲೆಯಲ್ಲಿ ಈಗಾಗಲೇ ಸಂಚಾರ ಮಾಡುತ್ತಿವೆ. ತುಮಕೂರು ಡಿಪೋ 20 ಬಸ್ಸು ಪಡೆದಿದೆ. ಪಾವಗಡಕ್ಕೆ 7 ಬಸ್ಸು, ಮಧುಗಿರಿಗೆ 5 ಹಾಗೂ ತಿಪಟೂರು ಡಿಪೋಗೂ ಸಹ ಹೊಸ ಬಸ್ಸು ನೀಡಲಾಗಿದೆ. ಗುಬ್ಬಿಯಲ್ಲಿ ಶೀಘ್ರ ಡಿಪೋ ಕೆಲಸ ನಡೆಸಿ ಈ ತಾಲೂಕಿನಲ್ಲಿಯೂ ಹೊಸ ಬಸ್ಸು ಸಂಚರಿಸಲಿದೆ. ಶಾಲಾ ಕಾಲೇಜು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮೀಣ ಭಾಗಕ್ಕೆ ಬಸ್ಸು ಒದಗಿಸಲು ಡಿಪೋ ತುರ್ತಾಗಿ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ” ಎಂದರು.
“ಲೋಕಸಭಾ ಚುನಾವಣೆ ವಿಚಾರದಲ್ಲಿ ಭವಿಷ್ಯ ನಾನು ಹೇಳುವುದಿಲ್ಲ. ಮತದಾರರ ತೀರ್ಮಾನದ ಮೇಲೆ ನಿರ್ಧಾರ ಆಗಲಿದೆ. ನಾಲ್ಕು ಲೋಕಸಭಾ ಚುನಾವಣೆಯಲ್ಲಿ ನಾನು ನನ್ನ ಅಭ್ಯರ್ಥಿಗೆ ಲೀಡ್ ನೀಡಲಾಗಿಲ್ಲ. ಈ ಬಾರಿ ಪ್ರಯತ್ನ ನಡೆಸಿ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ” ಎಂದರು.
“ಗ್ರಾಮೀಣ ಭಾಗದ ಕೆರೆಗಳಲ್ಲಿ ಮಣ್ಣು ತೆಗೆಯುವ ಕೆಲಸಕ್ಕೆ ನಾನೇ ರೈತರಿಗೆ ಸೂಚಿಸಿದ್ದೆ. ಎರಡು ಅಡಿಗಳ ಹೂಳು ತೆಗೆಯಲು ತಿಳಿಸಿದ್ದು, ಅವರ ತೋಟಗಳಿಗೆ ಮಣ್ಣು ಹಾಕಿಕೊಂಡರೆ ನಮಗೆ ಕೆರೆಯ ಹೂಳು ಎತ್ತುವ ಕೆಲಸವಾಗುತ್ತದೆ. ಇದನ್ನು ದಂಧೆ ಎಂದು ಹೇಳಲಾಗದು. ತುಂಗಭದ್ರಾ ಡ್ಯಾಂ ನಲ್ಲಿರುವ ಹೂಳು ತೆಗೆಯಲು ತಗಲುವ ವೆಚ್ಚಕ್ಕೆ ಹೊಸ ಡ್ಯಾಂ ನಿರ್ಮಾಣ ಮಾಡುವ ಆಲೋಚನೆ ಮಾಡಿದ ಉದಾಹರಣೆ ಎಲ್ಲರೂ ಯೋಚಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ನೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿ; ಗೃಹ ಸಚಿವ ಪರಮೇಶ್ವರ್ ಚಾಲನೆ
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಕಲಾವತಿ, ಸದಸ್ಯರುಗಳಾದ ರಮೇಶ್, ಮಹಮದ್ ಅಲಿ, ಪಾಂಡುರಂಗಪ್ಪ, ಮಹಾಲಕ್ಷ್ಮಮ್ಮ, ಮುಖಂಡರುಗಳಾದ ಪಣಗಾರ್ ವೆಂಕಟೇಶ್, ಆಲಂ, ಅಲಿಸಾಬ್, ರಾಮಣ್ಣ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ನಟರಾಜ್, ಎಇ ಲಿಂಗರಾಜ್ ಶೆಟ್ಟಿ, ಪಿಡಿೊ ಮಂಜುಳಾದೇವಿ ಸೇರಿದಂತೆ ಇತರರು ಇದ್ದರು.
