ತಾರತಮ್ಯದ ‘ಸಿಎಎ’ಯಿಂದ ಮಾನವ ಹಕ್ಕುಗಳ ಉಲ್ಲಂಘನೆ; ವಿಶ್ವಸಂಸ್ಥೆ ಕಳವಳ

Date:

Advertisements

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬರುವ ಹಿಂದುಗಳು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಸಿಖ್ಖರಿಗೆ ಪೌರತ್ವವನ್ನು ನೀಡುತ್ತೇವೆ ಎನ್ನುತ್ತಿರುವ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ತಾರತಮ್ಯದಿಂದ ಕೂಡಿದೆ ಎಂದು ವಿಶ್ವಸಂಸ್ಥೆ ಮತ್ತು ಅಮೆರಿಕಾ ಸರ್ಕಾರ ಕಳವಳ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಪ್ರಮುಖ ಮೂರು ರಾಷ್ಟ್ರಗಳಲ್ಲಿಯೂ ಶಿಯಾ ಮತ್ತು ಅಹ್ಮದೀಯ ಮುಸ್ಲಿಂ ಸೇರಿದಂತೆ ಹಲವು ಮುಸ್ಲಿಂ ಸಮುದಾಯಗಳು ಕೂಡ ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದಾರೆ. ಆದರೂ, ಸಿಎಎಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಮೂಲಭೂತವಾಗಿ ತಾರತಮ್ಯ ಧೋರಣೆಯನ್ನು ಹೊಂದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

“ವಿಶ್ವದಲ್ಲಿ ಅಂತ್ಯಂತ ಕಿರುಕುಳಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರೆಂದು ರೋಹಿಂಗ್ಯಾ ಮುಸ್ಲಿಮರನ್ನು ಕರೆಯಲಾಗುತ್ತದೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರು ಜನಾಂಗೀಯ ಮತ್ತು ಧಾರ್ಮಿಕವಾಗಿ ದೌರ್ಜನ್ಯಗಳಿಗೆ ತುತ್ತಾಗಿದ್ದಾರೆ. ಅಂತೆಯೇ, ಶ್ರೀಲಂಕಾ ತಮಿಳರು ಕೂಡ ಶ್ರೀಲಂಕಾದಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಎರಡೂ ಸಮುದಾಯಗಳನ್ನೂ ಕಾನೂನು ಹೊರಗಿಟ್ಟಿದೆ” ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

Advertisements

“ನಾವು 2019ರಲ್ಲಿ ಹೇಳಿದಂತೆ, ಸಿಎಎ ಮೂಲಭೂತವಾಗಿ ತಾರತಮ್ಯ ಸ್ವಭಾವವನ್ನು ಹೊಂದಿದೆ. ಭಾರತವು  ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಿದೆ. ಈ ಉಲ್ಲಂಘನೆಯ ಬಗ್ಗೆ ಅಧ್ಯಯನ ನಡೆಯುತ್ತಿದೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಕಾನೂನಿನ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಸರ್ಕಾರದ ವಕ್ತಾರರು, “ಮಾರ್ಚ್ 11 ರಂದು ಹೊರಡಿಸಿರುವ ಸಿಎಎ ಅಧಿಸೂಚನೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಈ ಕಾಯ್ದೆಯನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಮತ್ತು ಕಾನೂನಿನಡಿಯಲ್ಲಿ ಎಲ್ಲ ಸಮುದಾಯಗಳಿಗೆ ಮನ್ನಣೆ ನೀಡುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾಗಿವೆ” ಎಂದು ಹೇಳಿದ್ದಾರೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಿಎಎಯನ್ನು ಅಂಗೀರಿಸಿತ್ತು. ಆಗ ದೇಶಾದ್ಯಂತ ಸಿಎಎ ವಿರುದ್ಧ ಹೋರಾಟಗಳು ಭುಗಿಲೆದ್ದಿದ್ದವು. ಪರಿಣಾಮ, ಸಿಎಎ ಜಾರಿಯಿಂದ ಸರ್ಕಾರ ಹಿಂದೆ ಸರಿದಿತ್ತು. ಇದೀಗ, ನಾಲ್ಕು ವರ್ಷಗಳ ಬಳಿಕ, ಚುನಾವಣಾ ಸಮಯದಲ್ಲಿ ಮತ್ತೆ ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿದೆ.

ಸಿಎಎ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಮೌನವಾಗಿದೆ. ಸಿಎಎ ಮತ್ತು ಎನ್‌ಆರ್‌ಸಿ ದೇಶದ ಪ್ರತಿಯೊಬ್ಬ ಭಾರತೀಯನೂ ‘ತಾನು ಅಕ್ರಮ ವಲಸಿಗನಲ್ಲ’ ಎಂದು ಸಬೀತುಪಡಿಸುವಂತೆ ಒತ್ತಾಯಿಸುತ್ತದೆ. ದೇಶದ ಜನರೇ ತಾವು ಅಕ್ರಮವಾಗಿ ದೇಶಕ್ಕೆ ಬಂದಿಲ್ಲ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಇನ್ನು, ಸಿಎಎ ಅಡಿಯಲ್ಲಿ ಮುಸ್ಲಿಮರನ್ನು ಹೊರಗಿಡಲಾಗಿದ್ದು, ಬಳಿಕ, ಎನ್‌ಆರ್‌ಸಿ ಜಾರಿಗೆ ತಂದರೆ, ಅವರು ಪೌರತ್ವವನ್ನು ಕಳೆದುಕೊಳ್ಳುವ ಹೆಚ್ಚಿನ ಅಪಾಯವಿರುತ್ತದೆ.

ಇತ್ತೀಚೆಗೆ ಗೃಹ ಸಚಿವಾಲಯವು ಒಂದು ಸುತ್ತೋಲೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಅದರೆ, ಕೆಲವೇ ಗಂಟೆಗಳಲ್ಲಿ ಅದನ್ನು ಅಳಿಸಿತು. ಅಳಿಸಲಾದ ಸುತ್ತೋಲೆಯಲ್ಲಿ, “ಯಾವುದೇ ಭಾರತೀಯ ನಾಗರಿಕರು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿಲ್ಲ. ಹೊಸ ಕಾನೂನಿನ ಅಡಿಯಲ್ಲಿ ಭಾರತೀಯ ಮುಸ್ಲಿಮರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ಭಯಪಡಬೇಕಾಗಿಲ್ಲ” ಎಂದು ಹೇಳಿತ್ತು. ಆದರೆ, ಅದನ್ನು ಅಳಿಸಲಾಗಿದೆ. ಇದು ನಾನಾ ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಧರ್ಮದ ಆಧಾರದ ಮೇಲೆ ಪೌರತ್ವದ ನಿಬಂಧನೆಗಳನ್ನು ರೂಪಿಸಿರುವುದನ್ನು ವಿರೋಧ ಪಕ್ಷಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಿಮರ್ಶಕರು ವಿರೋಧಿಸಿದ್ದಾರೆ. ಮುಸ್ಲಿಮರನ್ನು ಪೌರತ್ವ ನಿಬಂಧನೆಯಿಂದ ಹೊರಗಿಡುವುದು ಸ್ಪಷ್ಟವಾಗಿ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ.

ಈ ವರದಿ ಓದಿದ್ದೀರಾ?: ಬಿಜೆಪಿಯ ಲೋಕಸಭೆ ಟಿಕೆಟ್ ತಿರಸ್ಕರಿಸಿದ್ದಕ್ಕೆ ಇಡಿ ದಾಳಿ; ಕಾಂಗ್ರೆಸ್‌ ಶಾಸಕಿ ಆರೋಪ

“ನಾನು ಸಿಎಎಯನ್ನು  ಒಪ್ಪುವುದಿಲ್ಲ. ಕಾನೂನಿನಲ್ಲಿ ಐದು ಸಮುದಾಯಗಳನ್ನು ಪಟ್ಟಿ ಮಾಡಿದ್ದು, ಮುಸ್ಲಿಮರನ್ನು ಹೊರಗಿಡಲಾಗಿದೆ” ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ಹಾಗೂ ಸಿಪಿಐಎಂ ನಾಯಕ ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಈ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. “ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸುವ ಸಿಎಎಯನ್ನು ಕೇರಳದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಈ ಕೋಮು ವಿಭಜಕ ಕಾನೂನನ್ನು ವಿರೋಧಿಸಲು ಕೇರಳದ ಎಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತಾರೆ” ಎಂದು ಅವರು ಹೇಳಿದ್ದಾರೆ.

“ಈ ಕಾಯ್ದೆಯು ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತರಾಗಿರುವ ತಮಿಳನ್ನು ಹೊರಗಿಟ್ಟಿದೆ. ಶ್ರೀಲಂಕಾ ತಮಿಳು ನಿರಾಶ್ರಿತರು. ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವನ್ನು ಹೊಂದಿದೆ. ಬಹುತ್ವ, ಜಾತ್ಯತೀತತೆ, ಅಲ್ಪಸಂಖ್ಯಾತ ಸಮುದಾಯಗಳಿಗೆ ವಿರುದ್ಧವಾದ ಸಿಎಎಯನ್ನು ಜಾರಿಗೆ ತರಲು ತಮಿಳುನಾಡು ಸರ್ಕಾರ ಅವಕಾಶ ನೀಡುವುದಿಲ್ಲ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ,

ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಡಿಯಾ, “ಸಿಎಎ ತಾರತಮ್ಯದಿಂದ ಕೂಡಿದೆ. ಭಾರತೀಯ ಸಂವಿಧಾನ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದೆ.

“ಬಿಜೆಪಿ-ಆರ್‌ಎಸ್‌ಎಸ್ ಪೌರತ್ವವನ್ನು ಧರ್ಮದೊಂದಿಗೆ ಜೋಡಿಸುತ್ತಿವೆ. ನಮ್ಮ ಸಂವಿಧಾನವು ಧರ್ಮವನ್ನು ಪೌರತ್ವದ ಮಾನದಂಡವನ್ನಾಗಿ ಮಾಡಿಲ್ಲ.. ಈಗ ಚುನಾವಣೆಯ ಹೊಸ್ತಿಲಲ್ಲಿ ಏಕಾಏಕಿ ಈ ಸರ್ಕಾರ ಸಿಎಎಯನ್ನು ಜಾರಿಗೆ ತರಲು ಏಕೆ ನಿರ್ಧರಿಸಿದೆ? ಜನರನ್ನು ವಿಭಜಿಸಲು ನಿಯಮಗಳನ್ನು ರೂಪಿಸಲಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಜನರಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ,” ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಕ್ನೋ | ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡು ಸುಳ್ಳು ಆರೋಪ ಸೃಷ್ಟಿ: ವಕೀಲನಿಗೆ ಜೀವಾವಧಿ ಶಿಕ್ಷೆ

ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡ ಮತ್ತು ಸುಳ್ಳು ಆರೋಪಗಳನ್ನು ದಾಖಲಿಸಿದ ವಕೀಲರೊಬ್ಬರಿಗೆ...

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

Download Eedina App Android / iOS

X