ಹೇಮಾವತಿ ನಾಲೆಯಿಂದ ಬುಗುಡನಹಳ್ಳಿಯಲ್ಲಿ ಸಂಗ್ರಹವಾಗುವ ನೀರು ಮುಂಬರುವ ಸೆಪ್ಟೆಂಬರ್‌ವರೆಗೆ ತುಮಕೂರು ನಗರಕ್ಕೆ ಪೂರೈಕೆ ಮಾಡಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
“ಗೊರೂರು ಜಲಾಶಯದಿಂದ ಹೇಮಾವತಿ ನಾಲೆಗೆ ಮಾರ್ಚ್ 12ರಂದು ನೀರು ಹರಿಯಬಿಟ್ಟಿದ್ದು, ಗುರುವಾರ ರಾತ್ರಿ ಬುಗಡನಹಳ್ಳಿ ಕೆರೆಗೆ ನೀರು ತಲುಪಿದೆ. ನಗರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಐಸಿಸಿ ಸಮಿತಿ ಅಧ್ಯಕ್ಷ ಕೆ ಎನ್ ರಾಜಣ್ಣ ಅವರಿಗೆ ಕನಿಷ್ಟ 2 ಟಿಎಂಸಿ ನೀರನ್ನು ನೀಡಲು ಮನವಿ ಮಾಡಿದಾಗ ಸಚಿವರು ಒಪ್ಪಿ 2.5 ಟಿಎಂಸಿ ನೀರು ಬಿಡಲು ಅನುಮತಿ ನೀಡಿ ನೀರನ್ನು ಹರಿಯಲು ಬಿಟ್ಟಿದ್ದಾರೆ. ಜಿಲ್ಲೆಗೆ ನೀರು ಹರಿಸಲು ಸಹಕರಿಸಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಭಿನಂದನೆ” ಎಂದು ಹೇಳಿದರು.
“ಪಾಲಿಕೆಯಿಂದ 3 ದಿನಕ್ಕೊಮ್ಮೆ ನಗರಕ್ಕೆ ನೀರು ಸರಬರಾಜು ಮಾಡಿ ಮಿತವಾಗಿ ಬಳಸಿದ್ದರಿಂದ ಈವರೆಗೂ ನೀರು ಸರಬರಾಜು ಮಾಡಲು ಸಾಧ್ಯವಾಯಿತು. ಕೆರೆಯಲ್ಲಿ ಮುಂದಿನ 8ರಿಂದ 10 ದಿನಗಳಿಗೆ ಮಾತ್ರ ಪೂರೈಕೆ ಮಾಡುವಷ್ಟು ನೀರು ಲಭ್ಯವಿತ್ತು. ಮುಂದಾಲೋಚನೆಯಿಂದ ಹೇಮಾವತಿ ನೀರು ತರಿಸದೇ ಹೋಗಿದ್ದರೆ ತುಮಕೂರು ಸೇರಿದಂತೆ ಶಿರಾ, ಕೊರಟಗೆರೆ, ಮಧುಗಿರಿ, ಪಟ್ಟಣಗಳ ನಾಗರಿಕರಿಗೆ ನೀರಿನ ಅಭಾವ ಉಂಟಾಗುತ್ತಿತ್ತು. ನಗರದ ನಾಗರಿಕರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು” ಎಂದು ಮನವಿ ಮಾಡಿದರು.
“ಹೇಮಾವತಿ ನಾಲೆಗೆ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಹರಿಯ ಬಿಟ್ಟಿರುವುದರಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಬಳಸದಂತೆ ನಿಗಾ ವಹಿಸಲು ಪೊಲೀಸ್ ಗಸ್ತಿಗೆ ಸೂಚಿಸಲಾಗಿದೆ. ಜನರಿಗೆ ತೊಂದರೆ ಮಾಡುವ ಉದ್ದೇಶದಿಂದ ಪೊಲೀಸ್ ಗಸ್ತು ನಿಯೋಜನೆ ಮಾಡಿರುವುದಿಲ್ಲ. ನಾಲೆಯ ಮಾರ್ಗ ಮಧ್ಯದಲ್ಲಿ ನೀರು ಪೋಲಾದರೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರನ್ನು ತುಂಬಿಸಲು ಸಾಧ್ಯವಿಲ್ಲವೆಂಬ ಉದ್ದೇಶದಿಂದ ಪೊಲೀಸ್ ಗಸ್ತನ್ನು ನಿಯೋಜಿಸಲಾಗಿದ್ದು, ರೈತರು ಸಹಕರಿಸಬೇಕು” ಎಂದು ಮನವಿ ಮಾಡಿದರು.
“ಮಧುಗಿರಿ ತಾಲೂಕಿನ ಸುಮಾರು 65 ರಿಂದ 70 ಕೆರೆ ಹಾಗೂ ಕೊರಟಗೆರೆ ಕ್ಷೇತ್ರದ 66 ಕೆರೆಗಳಿಗೆ ನೀರು ತುಂಬಿಸುವ ಬೆಳ್ಳಾವಿ-ಕೋರ ಏತ ನೀರಾವರಿ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಸುಮಾರು 500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ: ಸಚಿವ ಪರಮೇಶ್ವರ್
ಕೆರೆ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ, ಮಹಾನಗರ ಪಾಲಿಕೆ ಆಯುಕ್ತ ಬಿ ವಿ ಆಶ್ವೀಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೇಮಾವತಿ ಯೋಜನೆಯ ಮುಖ್ಯ ಎಂಜಿನಿಯರ್ ಫಣಿರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
