ಹೊಸಿಲ ಒಳಗೆ-ಹೊರಗೆ | ಶಿಳ್ಳೆ ಹಾಕುವ ಆನಂದ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಉಡುಪಿಯಲ್ಲಿ ನಡೆಸಲಿದ್ದ ‘ಮಹಿಳಾ ಚೈತನ್ಯ ದಿನ’ದ ಪೂರ್ವಭಾವಿ ಸಭೆ. ಉದ್ಘಾಟನೆಯ ಸ್ವರೂಪದ ಬಗ್ಗೆ ಮಾತುಕತೆ ನಡೆಯುವಾಗ ಒಬ್ಬ ಮಹಿಳೆ, “ಶಿಳ್ಳೆ ಹೊಡೆಯೋಣ,” ಎಂಬ ಸಲಹೆ ಕೊಟ್ಟರು. ಸಲಹೆ ಬಂದಿದ್ದು ಅತ್ಯಂತ ಸಾಂಪ್ರದಾಯಿಕ ಉಡುಪು ತೊಟ್ಟ ಒಬ್ಬ ಯುವ ಮಹಿಳೆಯಿಂದ. ನಂತರ ನಡೆದದ್ದೆಲ್ಲ ಮ್ಯಾಜಿಕ್…

ಮಹಿಳಾ ಚೈತನ್ಯ ದಿನದ ವಿಚಾರ ಸಂಕಿರಣಕ್ಕೆ ವೇದಿಕೆ ಸಿದ್ಧವಾಗಿದೆ. ನಾಲ್ಕಾರು ಹೆಣ್ಣುಮಕ್ಕಳು, ಸೀರೆ ಉಟ್ಟವರು, ಬುರ್ಕಾ ಹಾಕಿದವರು, ಚೂಡಿದಾರಿನಲ್ಲಿ ಇದ್ದವರು, ಗ್ರಾಮೀಣ ಮತ್ತು ಪಟ್ಟಣದ ಹಿನ್ನೆಲೆಯವರು, ಬೇರೆ ಬೇರೆ ವಯಸ್ಸಿನವರು ವೇದಿಕೆಯ ಮುಂಭಾಗದಲ್ಲಿ ಬಂದು ನಿಂತರು. “ಇದೀಗ ಮಹಿಳಾ ಚೈತನ್ಯ ದಿನದ ಉದ್ಘಾಟನೆ ನಡೆಯಲಿದೆ,” ಅಂದ ತಕ್ಷಣ ವೇದಿಕೆ ಮೇಲೆ ನಿಂತವರು ಜೋರಾಗಿ ಶಿಳ್ಳೆ ಹಾಕಿದರು. ಒಬ್ಬರಾದ ಮೇಲೆ ಒಬ್ಬರು ಶಿಳ್ಳೆ ಹೊಡೆದರು. ಸಭೆಯಲ್ಲಿ ಕುಳಿತ ಮಂದಿಯೂ ಶಿಳ್ಳೆ ಹೊಡೆದು ಪ್ರತಿಕ್ರಿಯಿಸಿದರು. ಉಳಿದ ಮಂದಿ “ಹೋ…” ಅಂತ ಕೂಗಿದರು. ಕೆಲವೇ ಕ್ಷಣಗಳ ಉದ್ಘಾಟನೆ. ಸಭಾಂಗಣದಲ್ಲಿ ಹೊಸ ಸಂಚಲನ ಮೂಡಿತ್ತು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು, 2024ರ ಮಾರ್ಚ್ 8, 9ರಂದು ಉಡುಪಿಯಲ್ಲಿ 12ನೇ ವರುಷದ ಮಹಿಳಾ ಸಮಾವೇಶವನ್ನು ಆಯೋಜಿಸಿತ್ತು. ಮೊದಲ ದಿನ ವಿಚಾರ ಸಂಕಿರಣ. ಮಹಿಳೆಯರು ವೇದಿಕೆ ಮೇಲೆ, ಸಭಾಂಗಣದಲ್ಲಿ ಶಿಳ್ಳೆ ಹೊಡೆಯುವುದರ ಮೂಲಕ ಈ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಲಾಗಿತ್ತು. ‘ಮಹಿಳಾ ಪ್ರಾತಿನಿಧ್ಯ – ಆಶಯ ಮತ್ತು ವಾಸ್ತವ’ ಎಂಬ ವಿಚಾರದ ಮೇಲೆ ಅತ್ಯಂತ ಗಹನವಾದ ಚಿಂತನೆ ಮುಂದೆ ನಡೆಯಲಿತ್ತು. ಪ್ರಾತಿನಿಧ್ಯ ಶಿಳ್ಳೆ ಹೊಡೆಯುವುದರಲ್ಲಿ ಕೂಡ ಇಲ್ಲ ಎಂಬುದನ್ನು ಅಭಿವ್ಯಕ್ತಿಸುತ್ತ, ಅದರ ಸೊಗಸನ್ನು ಆಸ್ವಾದಿಸುತ್ತ, ಆನಂದಿಸುತ್ತ ಗಂಭೀರ ಚಿಂತನೆಯತ್ತ ಮನಸ್ಸು ಸಾಗುವಂತೆ ಆಯಿತು. ಒಂದು ಸಣ್ಣ ಥ್ರಿಲ್ ಅನುಭವಿಸುವ ಹಾಗೆ ಆಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಉದ್ಘಾಟನೆಯ ಸ್ವರೂಪದ ಬಗ್ಗೆ ಮಾತುಕತೆ ನಡೆಯುವಾಗ ಒಬ್ಬ ಮಹಿಳೆ, “ಶಿಳ್ಳೆ ಹೊಡೆಯೋಣ…” ಎಂಬ ಸಲಹೆ ಕೊಟ್ಟರು. ಸಲಹೆ ಬಂದಿದ್ದು ಅತ್ಯಂತ ಸಾಂಪ್ರದಾಯಿಕ ಉಡುಪು ತೊಟ್ಟ ಒಬ್ಬ ಯುವ ಮಹಿಳೆಯಿಂದ. ಎಲ್ಲರೂ ಒಂದು ಕ್ಷಣ ಮುಖ-ಮುಖ ನೋಡಿಕೊಂಡರು. ಸಭೆಯಲ್ಲಿದ್ದ ಪುರುಷರಿಂದ ಚಕಚಕ ಪ್ರತಿಕ್ರಿಯೆಗಳು ಬಂದವು. “ಇದು ಸ್ವಲ್ಪ ಜಾಸ್ತಿಯಾಯಿತು… ಸೀಟಿ ಹೊಡೆಯಲು ಬರಬೇಕಲ್ಲ… ಆಮೇಲೆ ಟ್ರೋಲ್ ಮಾಡಿದರೆ ಕೌಂಟರ್ ಕೊಡಲು ರೆಡಿಯಾಗಬೇಕು… ಸ್ಟೇಜ್‍ಗೆ ಸೀಮಿತವಾಗಿರಲಿ… ಆಮೇಲೆ ಎಲ್ಲ ಕಡೆ ಬೇಡ…” ಇತ್ಯಾದಿ-ಇತ್ಯಾದಿ. ಅಷ್ಟರಲ್ಲಿ ಅಲ್ಲೇ ಇದ್ದ ಒಬ್ಬ ಹಿರಿಯ ಚಿಂತಕರು (ಪುರುಷರು) ಎದ್ದು ನಿಂತು, “ಈ ಹೆಣ್ಣುಮಕ್ಕಳಿಗೆ ಹಾಗೆ ಮಾಡಬೇಕು ಅನಿಸಿದೆ; ಮಾಡಲಿ ಅಲ್ಲಾ, ಏನೀಗ? ಶಿಳ್ಳೆ ಹಾಕಬಾರದು ಅನ್ನುತ್ತಾರೆ, ಇವರಿಗೆ ಹಾಕಬೇಕು ಅನಿಸಿದೆ,” ಅಂತ ದೃಢವಾಗಿ ಹೇಳಿದರು. “ಗುರುಗಳು ಹೇಳಿದ ಮೇಲೆ ಆಯಿತು…” ಅಂತ ಉಳಿದವರು ಸುಮ್ಮನಾದರು. ರೂಢಿಗತವಾಗಿರುವ ಒಂದು ಚಿಕ್ಕ ವಿಷಯವನ್ನೂ ಮುರಿಯಬೇಕೆಂದರೆ ಎಷ್ಟು ತಳಮಳಗಳು, ಆತಂಕಗಳು ಇರುತ್ತವೆ. ಶಿಳ್ಳೆ ಹೊಡೀತೇವೆ ಅಂತ ಹೇಳಿ ಶಿಳ್ಳೆ ಹೊಡೆಯುವ ಹೆಣ್ಣುಮಕ್ಕಳೇ ಸಿಗದೆಹೋದರೆ ಎಂಬ ಆತಂಕ ಆಯೋಜನೆ ಮಾಡುವವರನ್ನು ಕಾಡಿತ್ತು. ಹುಡುಕುತ್ತ-ಹುಡುಕುತ್ತ ಕೊನೆಗೆ ಭರ್ಜರಿಯಾಗಿ ಶಿಳ್ಳೆ ಹೊಡೆಯುವವರು ಸಿಕ್ಕೇಬಿಟ್ಟರು. ಒಂದೆರಡು ಕ್ಷಣ ಸಭಾಂಗಣದಲ್ಲಿ ಹೊಸ ವಾತಾವರಣ ಅರಳಿತ್ತು.

ಇದೊಂದು ಮಹಾ ವಿಷಯ ಅಂತ ಅಲ್ಲ. ಆದರೆ, ಯಾವುದನ್ನು ಹೆಣ್ಣುಮಕ್ಕಳು ಮಾಡಲೇಬಾರದು ಅನ್ನಲಾಗಿದೆಯೋ, ಯಾವುದನ್ನು ಮಹಿಳೆಯರು ಮಾಡುವಾಗ ಅವರ ಘನತೆಯನ್ನು ಅವಮಾನಿಸಲಾಗಿದೆಯೋ, ಅದನ್ನು ಮುರಿಯುವುದು ಒಂದು ತರಹದ ಖುಶಿ ಕೊಡುತ್ತದೆ. ಗೆಳತಿಯೊಬ್ಬಳು ಹೇಳುತ್ತಿದ್ದಳು, “ಈವತ್ತು ದುಪಟ್ಟಾ ಹಾಕಿಕೊಳ್ಳದೆ ಮೊದಲ ಬಾರಿಗೆ ನಡೆಯುತ್ತಿರುವೆ, ಬಿಡುಗಡೆಯ ಅನುಭವ ಆಗುತ್ತಿದೆ.” ತಮ್ಮ ಅಂಗಿಗೆ ಜೇಬು ಇಲ್ಲದಿರುವುದು, ಹುಡುಗರ ಜೋಬು ನೋಡುವಾಗ, “ಛೇ… ನಮಗೂ ಬೇಕಿತ್ತು,” ಅನಿಸುವುದು; ಆಮೇಲೆ ಒಮ್ಮೆ ಅಂಗಿಗೆ ಜೇಬು ಹಾಕಿಸಿಕೊಂಡು, ಜೇಬಿನೊಳಗೆ ಕೈ ಹಾಕಿ ನಡೆಯುವಾಗ ಅದೇನೋ ಒಂದು ಸಂಭ್ರಮ. ಒಳ್ಳೆಯದೋ ಕೆಟ್ಟದೋ ನಾವು ಹೇಳುವಂತಿಲ್ಲ. ಕುಡಿಯಬಾರದು, ಸಿಗರೇಟು ಸೇದಬಾರದು ಅಂತ ಬಲವಂತವಾಗಿ ಒಪ್ಪಿಸಿರುವುದನ್ನು ಹಟ ಹಿಡಿದು ಮುರಿಯುವುದು ಹೊಸ ಧೈರ್ಯವನ್ನು ತುಂಬುತ್ತದೆ. ಕೂದಲು ಉದ್ದವೇ ಇರಬೇಕು ಅಂದಾಗ ಕತ್ತರಿಸಿ ಸುಖಪಡುವವರೂ ಇದ್ದಾರೆ. ಜುಂಯ್ ಅಂತ ಕಾರು, ಬೈಕು ಓಡಿಸಿ ಜಗತ್ತು ಗೆದ್ದ ಅನುಭವ ಹೊಂದಿದವರೂ ಇದ್ದಾರೆ. ಇವೆಲ್ಲವನ್ನೂ ಅನೇಕಾನೇಕ ಮಹಿಳೆಯರು ಮಾಡಲು ಸಾಧ್ಯವೂ ಆಗಿದೆ; ಸಾಧ್ಯವಾಗದೆ ಚಡಪಡಿಸುವ ಮಹಿಳೆಯರು ಇನ್ನೂ ಅನೇಕಾನೇಕ ಸಂಖ್ಯೆಯಲ್ಲಿ ಇದ್ದಾರೆ.

ಹೀಗೆ ಹೇಳುವಾಗ – ಶಿಳ್ಳೆ ಹೊಡೆಯುವುದು ಅಷ್ಟೊಂದು ಮುಖ್ಯವೇ, ಶಿಳ್ಳೆ ಹೊಡೆದು ಬದಲಾವಣೆ ತರಲು ಸಾಧ್ಯವೇ, ಕೂದಲು ಕತ್ತರಿಸುವುದೇ ಸಬಲೀಕರಣವೇ, ತಲೆವಸ್ತ್ರ ತೆಗೆದುಹಾಕಿದರೆ ಸಬಲೀಕರಣ ಆದಂತೆಯೇ, ಸಿಗರೇಟು ಸೇದಿ ಅಧಿಕಾರ ಪಡೆಯುವುದು ಸಾಧ್ಯವೇ ಎಂಬ ಪ್ರಶ್ನೆಗಳು ಬಂದೇ ಬರುತ್ತವೆ. ಖಂಡಿತವಾಗಿಯೂ ಇವೆಲ್ಲ ಮಹಿಳೆಯರ ಮೂಲ ಇಶ್ಯೂಗಳು ಅಲ್ಲ. ಅನೇಕರ ಮಟ್ಟಿಗೆ ಇದು ಮೂಲ ಇಶ್ಯೂ ಕಡೆ ನಡೆಯಲು ಕಿರುದಾರಿಗಳು; ಸೃಜನಶೀಲ ಅನುಭವಗಳು, ಬೇಲಿ ಮುರಿಯುವ ತಂತ್ರಗಳು… ಏನೋ ಒಂದು ತರಹದ ಪವರ್ ಸಿಗುವ ಹಾಗೆ ಅನಿಸುವ ಚಿಕ್ಕ-ಚಿಕ್ಕ ಆನಂದಗಳು.

ಇದಕ್ಕೆ ವ್ಯತಿರಿಕ್ತವಾಗಿಯೂ ಕೆಲವೊಮ್ಮ ನಡೆಯುತ್ತದೆ. ಈ ದೈನಂದಿನ ವಿಷಯಗಳನ್ನು ಮಹಿಳೆಯರು ಮುರಿಯುವ ಸೂಚನೆ ಸಿಕ್ಕ ತಕ್ಷಣ ಅತ್ಯಂತ ತೀವ್ರವಾಗಿ ಸದೆಬಡಿಯುವ ಅಪಾಯವೂ ಇರುತ್ತದೆ. ಅದಕ್ಕೆ ಬಲಿಯಾಗದ ಹಾಗೆ ತಂತ್ರಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಜಾಣತನದಿಂದ, ವಿವೇಕದಿಂದ ಎದುರಿಸುವ ದಾರಿಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ಒಂದಷ್ಟು ಮಂದಿ ನೇರವಾಗಿ ಮೂಲ ಇಶ್ಯೂ ಮೇಲೆ ಕೆಲಸ ಮಾಡಲು ಬಯಸುತ್ತಾರೆ. ಮೇಲೆ ಹೇಳಿದ ಎಲ್ಲ ವಿಚಾರಗಳು ಅವರಿಗೆ ಕ್ಷುಲ್ಲಕ ಅನಿಸುತ್ತಿರುತ್ತದೆ. ಮಹಿಳಾ ದಿನದಂದು ಸಂಗಾತಿ ಒಬ್ಬರು ಹೇಳಿದರು. “ಈ ಚಿಕ್ಕ ಕೂದಲು, ತಲೆಗೆ ವಸ್ತ್ರ ಹಾಕದಿರುವುದು ಯಾವುದೂ ನನಗೆ ಮುಖ್ಯವಾಗುವುದಿಲ್ಲ; ಅದರ ಬಗ್ಗೆ ಯೋಚನೆಯೇ ಬರುವುದಿಲ್ಲ; ನನಗೆ ಬೇಕಾಗಿರುವುದು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ. ನಮ್ಮ ಬದುಕನ್ನು ಬದಲಿಸಬಲ್ಲ ಅಧಿಕಾರ.” ಅದೆಷ್ಟೋ ಮಂದಿ ಗ್ರಾಮೀಣ ಮಹಿಳೆಯರು, ತಳಸಮುದಾಯದ ಮಹಿಳೆಯರು ನೇರವಾಗಿ ತರತಮದ ಗಂಭೀರ ಪ್ರಶ್ನೆಗಳನ್ನು ಎತ್ತಿಕೊಂಡು ಹೋರಾಟ ಮಾಡುತ್ತಾರೆ. ತಲೆ ಮೇಲೆ ಸೆರಗು ಹಾಕಿಕೊಂಡೇ ಗಾಡಿ ಓಡಿಸುತ್ತಾರೆ; ತಮಗೆ ಮಾಡಬೇಕಾಗಿರುವುದನ್ನು ಮಾಡುತ್ತಾರೆ. ನೇರವಾಗಿ ಗಟ್ಟಿ ದನಿಯೊಂದಿಗೆ ಹಕ್ಕುಗಳ ಪ್ರಸ್ತಾಪ ಮಾಡುತ್ತಾರೆ. ಮಾರ್ಗಗಳು ಹತ್ತು ಹಲವು. ಆಶಯ ಒಂದೇ. ಘನತೆಯ ಬದುಕು ಪಡೆಯುವುದು.

ನಮ್ಮ ಅನೇಕ ಪುರುಷ ಸಂಗಾತಿಗಳ ಬದುಕಿನಲ್ಲೂ ಇಂತಹ ಒಂದು ಪ್ರಕ್ರಿಯೆ ನಡೆಯುತ್ತದೆ. ಅನೇಕರಿಗೆ ಗಂಡು ಪ್ರತೀಕಗಳನ್ನು ಸದಾ ಹೊತ್ತುಕೊಂಡು ಇರುವುದಕ್ಕೆ ಇಷ್ಟವಾಗುವುದಿಲ್ಲ. ಉದ್ದ ಕೂದಲು ಬೇಕು ಅನಿಸುತ್ತದೆ. ಬಣ್ಣಬಣ್ಣದ ಬಟ್ಟೆ ತೊಡಬೇಕು ಅನಿಸುತ್ತದೆ. ಅಡುಗೆ ಮಾಡಿ ಬಡಿಸಬೇಕು ಅನಿಸುತ್ತದೆ. ಅಧಿಕಾರ ಚಲಾಯಿಸುತ್ತ ಇರಬೇಕು ಅನಿಸುವುದಿಲ್ಲ. ಯಾವುದು ಅಧಿಕಾರದ ಪ್ರತೀಕವಾಗಿ ಹೇರಲ್ಪಟ್ಟಿದೆಯೋ ಅದರಿಂದ ಕಳಚಿಕೊಳ್ಳುವ ಹೆಜ್ಜೆಗಳನ್ನಿಡುತ್ತ ಹಗುರಾಗಲು ಬಯಸುತ್ತಾರೆ. ಅಧಿಕಾರ ಭಾರ ಅನಿಸಿದವರಿಗೆ ಮಾತ್ರ ಹಗುರಾಗುವ ಆಸೆ. ಅಧಿಕಾರದ ಅಮಲು ತುಂಬಿಕೊಂಡಾಗ ಈ ದಾರಿ ಕಾಣುವುದೇ ಇಲ್ಲ. ಯಾರಿಗೇ ಆಗಲಿ ಬಿಡುಗಡೆ ಬೇಕು, ನಿರಾಳವಾಗಬೇಕು ಅಂದರೆ ಮನಸ್ಸು ಮುಕ್ತವಾಗಿ ತೆರೆದುಕೊಳ್ಳಬೇಕು.

ಅಂತೂ ಶಿಳ್ಳೆ ಹೊಡೆಯುವುದರಿಂದ ಶುರುವಾದ ಮಹಿಳಾ ದಿನಾಚರಣೆಯು ಮಹಿಳಾ ಪ್ರಾತಿನಿಧ್ಯದ ವಿವಿಧ ಮಜಲುಗಳನ್ನು ಅರ್ಥ ಮಾಡಿಕೊಳ್ಳುತ್ತ ಮುಂದುವರಿಯಿತು. ಮರುದಿನ ಉಡುಪಿಯ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಸುಡುವ ಬಿಸಿಲಿಗೆ ಸವಾಲು ಹಾಕುತ್ತ, ಮಹಿಳೆಯರು – ನಾನಾ ಹಿನ್ನೆಲೆಯ ಮಹಿಳೆಯರು ಕುಣಿದು ಕುಪ್ಪಳಿಸುತ್ತ ಸಂಭ್ರಮಿಸಿದ್ದು ಚಂದವೇ ಚಂದ. ಶಿಳ್ಳೆ ಹೊಡೆಯುವ ಆಸೆಯಂತೆಯೇ ಬೀದಿಯಲ್ಲಿ ಬಿಂದಾಸಾಗಿ ಕುಣಿಯುವುದು ಆನಂದವೇ ಆನಂದ. ಜೊತೆಜೊತೆಗೆ ಕುಣಿಯುತ್ತ ಬಂಧುತ್ವದ ಭಾವ ಅನುಭವಿಸಿದ್ದು ಮಹದಾನಂದ ನೀಡಿತ್ತು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...