- ಪಕ್ಷದ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂದ ಸಿದ್ದರಾಮಯ್ಯ
- ವರುಣಾದಲ್ಲಿ ಸ್ಪರ್ಧೆಗೆ ನಿಂತ ಸಚಿವ ವಿ ಸೋಮಣ್ಣ ಹರಕೆಯ ಕುರಿ
ರಾಜ್ಯ ಬಿಜೆಪಿಯಲ್ಲಿ ಪಕ್ಷಕ್ಕಾಗಿಯೇ ದುಡಿದ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅಲ್ಲಿದ್ದು ಅಪಮಾನ ಅನುಭವಿಸುವುದಕ್ಕಿಂತ ನಮ್ಮ ಪಕ್ಷಕ್ಕೆ ಬರುವುದು ಸೂಕ್ತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ಬಿಜೆಪಿ ಬಿ ಎಲ್ ಸಂತೋಷ್ ಕಪಿಮುಷ್ಠಿಯಲ್ಲಿದೆ. ಯಾವುದೇ ಗುರುತರ ಆರೋಪಗಳಿಲ್ಲದಿದ್ಧರೂ ಕೂಡ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ರಾಮದಾಸ್ ಸೇರಿದಂತೆ ಹಲವು ಬಿಜೆಪಿ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಬಿ ಎಲ್ ಸಂತೋಷ್ ರಿಂದ ಇವರೆಲ್ಲರಿಗೂ ಟಿಕೆಟ್ ತಪ್ಪಿದೆ. ಈಗಾಗಲೇ ಹಲವಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ಧಾರೆ. ಹಾಗೆಯೇ ಪಕ್ಷದ ಸಿದ್ದಾಂತ ಒಪ್ಪಿ ಬರುವ ಎಲ್ಲರಿಗೂ ಸ್ವಾಗತವಿದೆ ಎಂದರು.
ವರುಣಾದಲ್ಲಿ ವಿ ಸೋಮಣ್ಣ ಸ್ಪರ್ಧೆ ವಿಚಾರವಾಗಿ ತಮ್ಮ ಅಭಿಪ್ರಾಯ ಹೇಳಿದ ಸಿದ್ದರಾಮಯ್ಯ, ಸೋಮಣ್ಣ ಅವರನ್ನು ಇಲ್ಲಿಗೆ ಕರೆತಂದು ಹರಕೆಯ ಕುರಿ ಮಾಡಲಾಗಿದೆ.
ಸೋಮಣ್ಣ ಸ್ಪರ್ಧೆಗೆ ಬಿ ಎಲ್ ಸಂತೋಷ ಒತ್ತಡವೇ ಕಾರಣ. ದುಡ್ಡಿರುವ ಒಬ್ಬನು ಬೇಕು ಎಂದು ಇಲ್ಲಿಗೆ ತಂದು ಹಾಕಲಾಗಿದೆ. ಸೋಮಣ್ಣ ಹೊರ ಜಿಲ್ಲೆಯವರು. ಸೋಮಣ್ಣನಿಗೆ ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ.
ರಾಮನಗರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ರಾಜಕೀಯ ಮಾಡಿದವರು ಸೋಮಣ್ಣ. ಮೈಸೂರು ಉಸ್ತುವಾರಿ ಸಚಿವನಾಗಿದ್ದಾಗ ವರುಣಾಗೆ ಒಂದೇ ಒಂದು ಮನೆ ಕಟ್ಟಿಕೊಡದ ಅವರು ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? :ಗುರುಮಿಠಕಲ್ | ಆಸ್ಪತ್ರೆಯಿಂದಲೇ ಮತಯಾಚಿಸಿದ ಬಾಬುರಾವ್ ಚಿಂಚನಸೂರ್
ಕ್ಷೇತ್ರದ ಜನರ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ ಸಿದ್ದರಾಮಯ್ಯ ಹಣಕ್ಕೆ ಮರುಳಾಗಿ ತಮ್ಮವರನ್ನು ಕೈಬಿಡುವವರಲ್ಲ ನನ್ನ ಜನ. ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ, ಇಲ್ಲಿನ ಮಣ್ಣಿನ ಮಗ. ಇವ ನಮ್ಮವನೆಂಬ ಭಾವನೆ ಇಲ್ಲಿನ ಜನರಲ್ಲಿದೆ.
ಈ ಹಿಂದೆ ವರುಣಾವನ್ನು ಪ್ರತಿನಿಧಿಸಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ದುಡಿದಿದ್ದೇನೆ. ನನ್ನ ಸಾಧನೆಗಳು ಇಲ್ಲಿನ ಜನರ ಬದುಕಿನಲ್ಲಿದೆ. ನನ್ನ ಗೆಲುವಿಗೆ ಇದಕ್ಕಿಂತ ಹೆಚ್ಚೇನು ಬೇಕು? ಎಂದರು.