ಬೆಳಗಾವಿ ತಾಲೂಕಿನ ಕಾಳೇನಟ್ಟಿ ಗ್ರಾಮದ ಮಹಿಳೆಯರಿಗೆ ಮನರೇಗಾದಡಿ ಉದ್ಯೋಗ ನೀಡುವಂತೆ ಆಗ್ರಹಿಸಿ ಮಜ್ದೂರ್ ನವನಿರ್ಮಾಣ ಸಂಘದಿಂದ ಮಾರ್ಕಂಡೇಯನಗರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
“ಕಾಳೇನಟ್ಟಿ ಗ್ರಾಮದಲ್ಲಿ ದಲಿತ ಸಮುದಾಯದ ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿವೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ 2005ರಿಂದ ಈವರೆಗೆ ಅಂದರೆ 2024ರ ಮಾರ್ಚ್ ತಿಂಗಳು ಅರ್ಧ ಕಳೆದರೂ ಕೂಡಾ ಮಾರ್ಕಂಡೇಯನಗರ ಗ್ರಾಮ ಪಂಚಾಯಿತಿಯಿಂದ ಮನರೇಗಾ ಅಡಿಯಲ್ಲಿ ಮಹಿಳೆಯರಿಗೆ ಉದ್ಯೋಗ ದೊರೆತಿಲ್ಲ” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
“ಕಾಳೇನಟ್ಟಿ ಗ್ರಾಮದ ದಲಿತ ಸಮುದಾಯದಲ್ಲಿ ಬಡ ಮಹಿಳೆಯರು ಈ ಹಿಂದೆ ಎರಡು/ಮೂರು ಬಾರಿ ಪಂಚಾಯಿತಿಗೆ ದಾಖಲೆ ಪತ್ರಗಳನ್ನು ನೀಡಿ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದರು. ಆದರೆ ಸದರಿ ಪಂಚಾಯಿತಿ ಅಧಿಕಾರಿಗಳು ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದು, ಮಹಿಳೆಯರನ್ನು ಕೆಲಸದಿಂದ ವಂಚಿಸಿದ್ದಾರೆ. ಇದಕ್ಕೀಗ ಅವರೇ ಉತ್ತರ ನೀಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಕಾಳೇನಟ್ಟಿ ಗ್ರಾಮದ ಮಹಿಳೆಯರಿಗೆ ಪಂಚಾಯಿತಿಯಿಂದ ಅನ್ಯಾಯವಾಗಿರುವ ವಿಷಯ ತಿಳಿದ ಕೂಡಲೇ ‘ಮಜ್ದೂರ್ ನವನಿರ್ಮಾಣ ಸಂಘ’ದ ರಾಹುಲ್ ಪಾಟೀಲ ಕಾಳೇನಟ್ಟಿಗೆ ಭೇಟಿ ನೀಡಿ ಬಡ ಮಹಿಳೆಯರ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಪರಿಹರಿಸಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಚುನಾವಣಾ ವೆಚ್ಚ ₹95 ಲಕ್ಷ ಮೀರಿದರೆ ಅಭ್ಯರ್ಥಿ ಅನರ್ಹ: ಜಿಲ್ಲಾಧಿಕಾರಿ ರವೀಂದ್ರ
ಭರವಸೆಯ ಹಿನ್ನೆಲೆಯಲ್ಲಿ ʼಮಜ್ದೂರ್ ನವನಿರ್ಮಾಣ ಸಂಘ’ದ ನೇತೃತವದಲ್ಲಿ ಸೋಮವಾರ ಕಾಳೇನಟ್ಟಿ ಗ್ರಾಮದ ಮಹಿಳೆಯರನ್ನು ಒಗ್ಗೂಡಿಸಿ ಮಾರ್ಕಂಡೇಯನಗರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಈ ವೇಳೆ ಕಾರ್ಮಿಕರು ಘೋಷಣೆ ಕೂಗಿ ಕೂಡಲೇ ಉದ್ಯೋಗ ನೀಡುವಂತೆ ಒತ್ತಾಯಿಸಿದರು.
