ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ

Date:

Advertisements
ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ. ಹಾಗಾಗಿ ಟಿಕೆಟ್ ವಿಚಾರದಲ್ಲಿ ಅಪ್ಪ-ಮಕ್ಕಳು ಆಟ ಆಡಿದರು. ಆಟದಲ್ಲಿ ಗೆಲ್ಲುವುದು ಕಷ್ಟವಾದಾಗ ಬಿಕ್ಕಟ್ಟು ಸೃಷ್ಟಿಸಿದರು. ಬಿಜೆಪಿಯ ಅಪ್ಪ-ಮಕ್ಕಳು ಮುಲಾಮು ಹಚ್ಚಿ ಶಮನ ಮಾಡಿದರು. ಹಾಗಾಗಿ ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಬದಲಿಗೆ ಅಪ್ಪ-ಮಕ್ಕಳ ಆಟ ಎನ್ನುವುದನ್ನು ಕರ್ನಾಟಕದ ಮತದಾರರು ಅರಿತರೆ, ಒಳ್ಳೆಯದು.

ಬಿಜೆಪಿ ಮತ್ತು ಜೆಡಿಎಸ್ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಮೈತ್ರಿ ಮುರಿದುಬೀಳುವ ಸೂಚನೆಗಳು ಕಾಣುತ್ತಿವೆ ಎಂದು ಬೊಬ್ಬೆ ಹಾಕುತ್ತಿವೆ ಸುದ್ದಿ ಮಾಧ್ಯಮಗಳು.

ಮಾ. 18ರಂದು ಲೋಕಸಭಾ ಚುನಾವಣೆ ಕುರಿತು ಜೆಡಿಎಸ್ ರಾಜ್ಯ ಘಟಕದ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸದಸ್ಯರು, ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ, ‘ಬಿಜೆಪಿಯವರು ನಮ್ಮನ್ನು ಎರಡನೇ ದರ್ಜೆ ಜನರಂತೆ ಕಾಣುತ್ತಿದ್ದಾರೆ’, ‘ಕಲಬುರ್ಗಿ ಮತ್ತು ಶಿವಮೊಗ್ಗಕ್ಕೆ ಮೋದಿ ಬಂದರೂ, ನಮ್ಮನ್ನು ಕರೆಯದೆ ಕಡೆಗಣಿಸಿದ್ದಾರೆ,’ ಎಂದು ಅಳಲು ತೋಡಿಕೊಂಡಿದ್ದಾರೆ. ಕೆಲವರಂತೂ ನೇರವಾಗಿ, ‘ನಾವು ಕೂಡ ರಾಜಕಾರಣಿಗಳೇ, ನಮಗೂ ಪಕ್ಷವಿದೆ, ರಾಜಕಾರಣ ಗೊತ್ತಿದೆ’ ಎಂದು ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಮರ್ಮಕ್ಕೆ ತಾಕುವಂತೆ ಮಾತನಾಡಿದ್ದಾರೆ. ಆ ಮೂಲಕ ತಮ್ಮ ಒಡಲಾಳದ ನೋವನ್ನು ಹೊರಹಾಕಿದ್ದಾರೆ.

ಸಭೆಯ ನಂತರ, ಸ್ವತಃ ಎಚ್.ಡಿ. ಕುಮಾರಸ್ವಾಮಿಯವರೇ, ‘ಬಿಜೆಪಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ನಾವು ಬಿಜೆಪಿಯಿಂದ ಆರೇಳು ಕ್ಷೇತ್ರ ಕೇಳಿಲ್ಲ. ಕೇಳಿರುವುದೇ ಮೂರ್‍ನಾಲ್ಕು. ನಮ್ಮ ಶಕ್ತಿ ಅವರಿಗೂ ಗೊತ್ತು. ಮೂರರಿಂದ ನಾಲ್ಕು ಕ್ಷೇತ್ರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳಲು ನಾನು ಇಷ್ಟು ಪ್ರಯತ್ನಪಡಬೇಕಿತ್ತಾ, ಈ ಹೊಂದಾಣಿಕೆ ಬೇಕಿತ್ತಾ’ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಆ ಪತ್ರಿಕಾ ಹೇಳಿಕೆಯನ್ನು, ಫೋಟೋಗಳನ್ನು, ವಿಡಿಯೋ ತುಣುಕನ್ನು ತಾವೇ ಖುದ್ದು ಸುದ್ದಿ ಮಾಧ್ಯಮಗಳಿಗೆ ಹಂಚಿ, ಎಲ್ಲಿಗೆ ಮುಟ್ಟಬೇಕೋ ಅಲ್ಲಿಗೆ ಮುಟ್ಟುವಂತೆ ನೋಡಿಕೊಂಡಿದ್ದಾರೆ.

Advertisements

ಇದು ಮೇಲ್ನೋಟಕ್ಕೇ, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮುರಿದುಬೀಳಬಹುದೆಂದು ಕಂಡರೂ, ಇದರ ಹಿಂದೆ ಬೆದರಿಸುವ ತಂತ್ರ ಮತ್ತು ವಶೀಲಿಬಾಜಿ ಅಡಗಿದೆ ಎಂಬ ಸತ್ಯವನ್ನು ಜೆಡಿಎಸ್ ಕಾರ್ಯಕರ್ತರೇ ಹೊರಹಾಕಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆಗ ಕಾಂಗ್ರೆಸ್, 8 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆಗ ಅವರದೇ ಸರ್ಕಾರವಿತ್ತು, ಹಣದ ಹರಿವಿತ್ತು ಮತ್ತು ಆಡಳಿತ ಯಂತ್ರಾಂಗ ಅವರ ಪರವಾಗಿ ಕೆಲಸ ಮಾಡಿತ್ತು. ಆದರೂ ಜೆಡಿಎಸ್ ಗೆದ್ದದ್ದು ಒಂದೇ ಒಂದು ಸ್ಥಾನ, ಅದೂ ಹಾಸನ ಮಾತ್ರ. ವರಿಷ್ಠ ದೇವೇಗೌಡರೇ ತುಮಕೂರಿನಲ್ಲಿ ಸೋತು ಶಾಕ್‌ಗೆ ಒಳಗಾಗಿದ್ದರು. ಅಷ್ಟಾದರೂ ದೇವೇಗೌಡರನ್ನು ರಾಜ್ಯಸಭೆಯಲ್ಲಿರಬೇಕಾದ ರಾಜಕಾರಣಿ ಎಂದು ದೆಹಲಿಗೆ ಕಳುಹಿಸಿಕೊಡಲಾಗಿತ್ತು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ, ಜೆಡಿಎಸ್ ಸ್ವತಂತ್ರವಾಗಿಯೇ ಸ್ಪರ್ಧಿಸಬಹುದಿತ್ತು. ಸ್ಪರ್ಧಿಸುವ ಮೂಲಕ ಪ್ರಾದೇಶಿಕ ಪಕ್ಷಗಳ ಪಾತ್ರವನ್ನು; ನಾಡಿನ ಅಸ್ಮಿತೆಯನ್ನು ಗಟ್ಟಿಗೊಳಿಸಬಹುದಿತ್ತು. ದೊಡ್ಡ ಪಕ್ಷಗಳಿಗೆ ಸವಾಲು ಹಾಕಬಹುದಿತ್ತು. ಎರಡೇ ಎರಡು ಕ್ಷೇತ್ರ ಗೆದ್ದರೂ, ಇದು ಜೆಡಿಎಸ್ ಎಂದು ತೊಡೆ ತಟ್ಟಬಹುದಿತ್ತು.

ಅದಕ್ಕೆ ಪೂರಕವಾಗಿ, 1960ರಲ್ಲಿಯೇ ತಾಲೂಕ್ ಬೋರ್ಡ್ ಮೆಂಬರ್ ಆಗಿ ರಾಜಕಾರಣಕ್ಕೆ ಅಡಿಯಿಟ್ಟ ಹರದನಹಳ್ಳಿಯ ದೇವೇಗೌಡರು, ಶಾಸಕ, ಸಚಿವ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಮೂಲಕ ಪ್ರಜಾಪ್ರಭುತ್ವದ ಸೊಗಸನ್ನು ಸಾರಿದ ಇತಿಹಾಸವಿತ್ತು. ಶೂದ್ರ ವರ್ಗದ ಪ್ರತಿನಿಧಿಯಂತಿದ್ದು ಪ್ರಾದೇಶಿಕ ಪೈಲ್ವಾನ್ ಎಂಬ ಹಿರಿಮೆ ಇತ್ತು. ಹಳ್ಳಿಯಿಂದ ದಿಲ್ಲಿಯವರೆಗಿನ ನಾಯಕರು, ಪಕ್ಷಗಳು ಮತ್ತು ರಾಜಕಾರಣದ ಒಳ-ಹೊರಗನ್ನು ಅರಗಿಸಿಕೊಂಡ ಅರವತ್ತಕ್ಕೂ ಹೆಚ್ಚು ವರ್ಷಗಳ ಅಪಾರ ಅನುಭವವಿತ್ತು.

ಇಂತಹ ಹಿರಿತನದ ಗೌಡರು, 2001ರಲ್ಲಿ ರಾಜಕಾರಣಕ್ಕೆ ಬಂದ, ಅಧಿಕಾರಕ್ಕಾಗಿ ಹತ್ಯಾಕಾಂಡ ಮಾಡಿದ, ದೇಶದಲ್ಲಿ ಭಯಭೀತ ವಾತಾವರಣ ಸೃಷ್ಟಿಸಿದ ‘ಮೋಶಾ’ಗಳ ಮೊರೆ ಹೋದರು, ಬಾಯ್ತುಂಬ ಹೊಗಳಿದರು. ಪಕ್ಷದ ಕಾರ್ಯಕರ್ತರನ್ನು ಕೇಳದೆ ಪಕ್ಷವನ್ನು ಅವರ ಮಡಿಲಿಗೆ ಹಾಕಿ ಶರಣಾದರು. ಇದು ಶತಮಾನದ ಸೋಜಿಗದಂತೆ, ಶತಮೂರ್ಖ ನಡೆಯಂತೆ ಕಂಡರೆ, ಅದು ದೇವೇಗೌಡರ ತಪ್ಪಲ್ಲ. ಅವರು ತಪ್ಪು ಮಾಡಿಯೇ ಇಲ್ಲ.

ಗೌಡರು ತಪ್ಪು ಮಾಡಿಲ್ಲ ಎನ್ನುವುದು ಈಗ ಜೆಡಿಎಸ್ ಕಾರ್ಯಕರ್ತರಿಗೆ ಅರ್ಥವಾಗುತ್ತಿದೆ. ಅವರಾಗಿಯೇ, ‘ಬಿಜೆಪಿಯೊಂದಿಗೆ ಮೈತ್ರಿಗೆ ಒಪ್ಪಿದ್ದು, ನಮ್ ಕುಟುಂಬ ಎಸ್.ಎಂ. ಕೃಷ್ಣರ ಕುಟುಂಬದಂತಾಗಬಾರದೆಂಬ ಕಾರಣಕ್ಕಾಗಿ ಹಾಗೂ ಪ್ರಜ್ವಲ್, ನಿಖಿಲ್ ಅಥವಾ ಕುಮಾರಸ್ವಾಮಿ, ಡಾ. ಮಂಜುನಾಥ್ ಗೆಲ್ಲುವುದು, ಒಬ್ಬರು ಕೇಂದ್ರದಲ್ಲಿ ಮಂತ್ರಿಯಾಗುವುದು ಕೂಡ ಕುಟುಂಬಕ್ಕಾಗಿ’ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಇಷ್ಟೇ ಆಗಿದ್ದರೆ ಕಾರ್ಯಕರ್ತರು ಸಹಿಸಿಕೊಂಡು ಸುಮ್ಮನಾಗುತ್ತಿದ್ದರು. ಆದರೆ ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ. ಅದನ್ನು ಕರಗತ ಮಾಡಿಕೊಂಡಿರುವ ಅವರ ಕುಟುಂಬ ಈ ಚುನಾವಣೆಯಲ್ಲಿಯೂ ಅದನ್ನು ಚಾಲ್ತಿಗೆ ತಂದಿತ್ತು.

ಬಿಜೆಪಿಯ ಟಿಕೆಟ್‌ಗಾಗಿ ಬಾಯಿ ಬಿಡುತ್ತಿದ್ದ ವಿ. ಸೋಮಣ್ಣ, ಡಾ. ಸುಧಾಕರ್, ಸಿಟಿ ರವಿ, ಪ್ರತಾಪ್ ಸಿಂಹರನ್ನು ಕಾಲಿಗೆ ಬೀಳಿಸಿಕೊಂಡ ಅಪ್ಪ-ಮಕ್ಕಳು ‘ಟಿಕೆಟ್ ಕೊಡಿಸುವ’ ಆಟ ಆಡತೊಡಗಿದರು. ಬಿಜೆಪಿಯ ಅಪ್ಪ-ಮಕ್ಕಳು ತಮ್ಮ ವಿರುದ್ಧವಿರುವ ರವಿ-ಸಿಂಹಗಳಿಗೆ ಟಿಕೆಟ್ ಸಿಗದಂತೆ ನೋಡಿಕೊಂಡರು. ಗೌಡರು ಹಿರಿತನ ಮುಂದೆ ಮಾಡಿ ಸೋಮಣ್ಣರಿಗೆ ಟಿಕೆಟ್ ಕೊಡಿಸಿಯೂಬಿಟ್ಟರು. ಇದರಿಂದ ಬಿಜೆಪಿಯ ಅಪ್ಪ-ಮಕ್ಕಳು ಕೆರಳಿ ಕೆಂಡವಾದರು. ಪ್ರಧಾನಿ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಂತೆ ನೋಡಿಕೊಂಡರು. ಸುಮಲತಾಗೆ ಚಿಕ್ಕಬಳ್ಳಾಪುರ ಟಿಕೆಟ್ ಕೊಡಿಸಲು ಮುಂದಾದರು. ಕೋಲಾರಕ್ಕೆ ನೋಡೋಣ ಇರಿ ಎಂದರು.

ಇದು ಎಚ್.ಡಿ. ಕುಮಾರಸ್ವಾಮಿಯವರು ಕೆರಳಲು ಕಾರಣವಾಯಿತು. ‘ಇದು ಬೇಕಿತ್ತಾ ನನಗೆ’ ಎಂದು ರೆಬೆಲ್ ರಾಗ ಹಾಡತೊಡಗಿದರು. ಅತ್ತ ಕಡೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಮೈತ್ರಿಯಲ್ಲಿನ ಸಣ್ಣಪುಟ್ಟ ವ್ಯತ್ಯಾಸ, ಸುಖಾಂತ್ಯ ಕಾಣಲಿದೆ’ ಎಂಬ ಮುಲಾಮು ಹಚ್ಚಿದರು.

ಹಾಗಾಗಿ ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಬದಲಿಗೆ ಅಪ್ಪ-ಮಕ್ಕಳ ಆಟ ಎನ್ನುವುದನ್ನು ಕರ್ನಾಟಕದ ಮತದಾರರು ಅರಿತರೆ, ಒಳ್ಳೆಯದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X