ಸೋಮವಾರ ರಾತ್ರಿ ಚಪಾತಿ ಕಾಳು ಸೇವಿಸಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಪಟ್ಟಣದಲ್ಲಿ ಜರಗಿದೆ.
ಅರಕೇರಾ ಪಟ್ಟಣದ ಎಸ್‌ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಎಂದಿನಂತೆ ರಾತ್ರಿ ಊಟಕ್ಕೆ ಚಪಾತಿ ಕಾಳು ಊಟ ಮಾಡಿದ ವಿದ್ಯಾರ್ಥಿನಿಯರು ರಾತ್ರಿಯಿಂದಲೇ ಹೊಟ್ಟೆನೋವೆಂದು ಬಳಲಲು ಆರಂಭಿಸಿದ್ದರು. ಸುಮಾರು 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ ಭೇದಿಯಿಂದ ಬಳಲಾರಂಭಿಸಿದ್ದು, ಕೂಡಲೇ ಸಿಬ್ಬಂದಿಗಳು ವಿದ್ಯಾರ್ಥಿನಿಯರನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಿದ್ದಾರೆ.
ವಿದ್ಯಾರ್ಥಿನಿಯರಿಗೆ ಕೂಡಲೇ ಚಿಕಿತ್ಸೆ ಆರಂಭವಾಗಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಪ್ರಾಯಶಃ ಫುಡ್ ಪಾಯಿಜ಼ನ್ ಆಗಿರಬಹುದು ಎನ್ನಲಾಗಿದ್ದು, ಉಳಿದಂತೆ ಬೆಳಿಗ್ಗೆ ಉಪಹಾರ ಸೇವಿಸಿ ವಿದ್ಯಾರ್ಥಿಗಳಿಗೆ ವಾಂತಿ ಭೇದಿಯ ಲಕ್ಷಣಗಳು ಕಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ತಪಾಸಣೆ ವೇಳೆ ದಾಖಲೆ ಇಲ್ಲದ ಮೂರು ಲಕ್ಷ ರೂ. ನಗದು ಪತ್ತೆ
ಪಟ್ಟಣದ ಪರಿಶಿಷ್ಟ ಪಂಗಡಕ್ಕೆ ಸೇರಿದ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೋಷಕರು, ಮಕ್ಕಳ ನರಳಾಟ ಕಂಡು ವಸತಿ ನಿಲಯದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಹಫೀಜುಲ್ಲ
