ಲೋಕಸಭೆ ಚುನಾವಣೆಗೆ ಎಲ್ಲ ಪಕ್ಷಗಳು ತಯಾರಿ ನಡೆಸುತ್ತಿದೆ. ಈ ನಡುವೆ ಗುಜರಾತ್ನ ಬಿಜೆಪಿ ಶಾಸಕ ಕೇತನ್ ಇನಾಮದಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಾನು ನನ್ನ ಒಳದನಿ ಏನು ಹೇಳುತ್ತದೋ ಅದನ್ನು ಮಾಡಿದ್ದೇನೆ. ಆತ್ಮಗೌರವಕ್ಕಿಂತ ಯಾವುದೂ ದೊಡ್ಡದಲ್ಲ” ಎಂದು ಹೇಳಿದ್ದಾರೆ.
ತನ್ನ ರಾಜೀನಾಮೆಗೆ ಯಾರ ಒತ್ತಡವೂ ಇಲ್ಲ ಎಂದು ಕೇತನ್ ಇನಾಮದಾರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಡೋದರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂಜನ್ ಭಟ್ ಗೆಲುವಿಗಾಗಿಯೂ ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ.
ವಡೋದರಾ ಜಿಲ್ಲೆಯ ಸಾವ್ಲಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾದ ಕೇತನ್ ಇನಾಮದಾರ್ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ತನ್ನ ಒಳದನಿಯನ್ನು ಕೇಳಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಜನವರಿ 2020ರಲ್ಲಿಯೂ ಕೇತನ್ ಇನಾಮದಾರ್ ರಾಜೀನಾಮೆ ಘೋಷಿಸಿದ್ದರು. ಆದರೆ ಇದನ್ನು ಸ್ಪೀಕರ್ ಸ್ವೀಕರಿಸಿರಲಿಲ್ಲ. ಮಂಗಳವಾರ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೇತನ್ “ಇದು ಯಾರದೇ ಒತ್ತಡದಿಂದಾಗಿ ತೆಗೆದುಕೊಂಡ ನಿರ್ಧಾರವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಹಳೆಯ ಕಾರ್ಯಕರ್ತರನ್ನು ಪಕ್ಷವು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂದು ನನಗೆ ದೀರ್ಘ ಸಮಯದಿಂದ ಅನಿಸುತ್ತಿದೆ. ನಾನು ನಾಯಕತ್ವಕ್ಕೆ ಇದರ ಬಗ್ಗೆ ತಿಳಿಸಿದ್ದೇನೆ” ಎಂದು ಹೇಳಿರುವ ಕೇತನ್, “11 ವರ್ಷಗಳಿಂದ ಸಾವ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಈಗ ಪಕ್ಷದೊಂದಿಗೆಯೇ ಉಳಿಯಲಿದ್ದೇನೆ” ಎಂದಿದ್ದಾರೆ.
“ಆದರೆ ನಾನು 2020ರಲ್ಲಿ ಹೇಳಿದಂತೆ ನಮ್ಮ ಆತ್ಮಗೌರವಕ್ಕಿಂತ ಯಾವುದೂ ದೊಡ್ಡದಲ್ಲ. ಹಾಗೆಯೇ ಇದು ಬರೀ ಕೇತನ್ ಇನಾಮದಾರ್ ಧ್ವನಿಯೇನಲ್ಲ. ಪಕ್ಷದ ಎಲ್ಲ ಕಾರ್ಯಕರ್ತರ ಧನಿಯಾಗಿದೆ. ಪಕ್ಷದ ಹಳೆಯ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ” ಎಂದರು.
ಬಿಜೆಪಿ ಪ್ರಸ್ತುತ 182 ವಿಧಾನಸಭೆ ಸೀಟುಗಳ ಪೈಕಿ 156 ಸೀಟುಗಳನ್ನು ಹೊಂದಿದೆ. ಮೇ 7ರಂದು ಗುಜರಾತ್ನ 26 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಮಾಡಲಾಗುತ್ತದೆ.