ಐಪಿಎಲ್ 16ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ, ಆತಿಥೇಯ ಎಸ್‌ಆರ್‌ಎಚ್ ಪಡೆಯನ್ನು 14 ರನ್‌ಗಳ ಅಂತರದಿಂದ ಮಣಿಸಿತು.
ಮುಂಬೈ ಇಂಡಿಯನ್ಸ್ ಮುಂದಿಟ್ಟಿದ್ದ 193 ರನ್‌ಗಳ ಸವಾಲನ್ನು ಬೆನ್ನಟ್ಟುವ ವೇಳೆ, ಸನ್‌ರೈಸರ್ಸ್ ಹೈದರಾಬಾದ್ 19.5 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು.
ಮಯಾಂಕ್ ಅಗರ್ವಾಲ್ ತಾಳ್ಮೆಯ 48 ರನ್ [ 41 ಎಸೆತ 4 ಬೌಂಡರಿ ಮತ್ತು 1 ಸಿಕ್ಸರ್] ಮತ್ತು ಹೆನ್ರಿಕ್ ಕ್ಲಾಸೆನ್ 16 ಎಸೆತಗಳಲ್ಲಿ 36 ರನ್‌ಗಳಿಸಿದರಾದರೂ ಗೆಲುವಿನ ದಡ ಸೇರಿಸಲಾಗಲಿಲ್ಲ.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಬ್ಯಾಟರ್ ಅಬ್ದುಲ್ ಸಮದ್ , 12 ಎಸೆತಗಳಲ್ಲಿ ಕೇವಲ 9 ರನ್‌ಗಳಿಸಲಷ್ಟೇ ಶಕ್ತರಾದರು.
ಅರ್ಜುನ್ ತೆಂಡೂಲ್ಕರ್‌ಗೆ ಚೊಚ್ಚಲ ವಿಕೆಟ್
ವೃತ್ತಿಜೀವನದ ಎರಡನೇ ಐಪಿಎಲ್ ಪಂದ್ಯವನ್ನಾಡಿದ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಎಸ್‌ಆರ್‌ಎಚ್ ವಿರುದ್ಧ 2.5 ಓವರ್ ಬೌಲಿಂಗ್ ಮಾಡಿದ ಅರ್ಜುನ್ 18 ರನ್ ನೀಡಿ 1 ವಿಕೆಟ್ ಪಡೆದರು.
ಹೈದರಾಬಾದ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ನಿರ್ಣಾಯಕ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್, ಕೇವಲ 6 ರನ್ ನೀಡಿ, 5ನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯುವ ಮೂಲಕ ಮುಂಬೈ ಗೆಲುವಿನ ಔಪಚಾರಿಕತೆಯನ್ನು ಪೂರ್ತಿಗೊಳಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ , ಕ್ಯಾಮರೂನ್ ಗ್ರೀನ್ [ 64 ರನ್*], ಇಶಾನ್ ಕಿಶನ್ 38 ಮತ್ತು ತಿಲಕ್ ವರ್ಮಾ ಗಳಿಸಿದ 37 ರನ್‌ಗಳ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 192 ರನ್‌ಗಳಿಸಿತ್ತು.
ಕಳೆದೆರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ವಿರುದ್ಧ ಗೆಲುವು ಕಂಡಿದ್ದ ರೋಹಿತ್ ಪಡೆ, ಮಂಗಳವಾರ ಹೈದರಾಬಾದ್ ತಂಡವನ್ನು ಅವರದ್ದೇ ತವರಿನಲ್ಲಿ ಮಣಿಸುವ ಮೂಲಕ ಟೂರ್ನಿಯಲ್ಲಿ ಸತತ 3 ನೇ ಗೆಲುವು ದಾಖಲಿಸಿದೆ.
ಆ ಮೂಲಕ ಅಂಕಪಟ್ಟಿಯಲ್ಲಿ 8 ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿದಿದೆ.