ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ | ಲಕ್ಷ್ಮಣ್‌- ಯದುವೀರ್; ಸಂಸದ ʼಕಿರೀಟʼ ಯಾರ ಮುಡಿಗೆ?

Date:

Advertisements

ಬಿಜೆಪಿ ಭದ್ರಕೋಟೆಯಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದರ ಮೂಲಕ ಹೀನಾಯ ಸೋಲು ಕಂಡಿತ್ತು.

ಅದರಲ್ಲೂ ಬರೀ ಮಾತಿನಲ್ಲಿ ಕಾಲ ಕಳೆದ ಪ್ರತಾಪ್ ಸಿಂಹ ಮಾತೆತ್ತಿದರೆ ಮುಸ್ಲಿಂ ವಿರೋಧ, ಟಿಪ್ಪು ಮೇಲೆ ಟೀಕೆ ಟಿಪ್ಪಣಿ, ದಶಪಥ ರಸ್ತೆಯ ಕ್ರೆಡಿಟ್ ಪಡೆಯುವ ಮಹದಾಸೆ, ಅನಗತ್ಯ ಹೇಳಿಕೆಗಳು, ಸಂಸತ್‌ನಲ್ಲಿ ಘಟಿಸಿದ ಬಣ್ಣದ ಹೊಗೆ ಪ್ರಕರಣದ ಆರೋಪಿಗಳಿಗೆ ಪಾಸ್ ನೀಡಿದ್ದು… ಹೀಗೆ ಒಂದಲ್ಲ ಒಂದು ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಮಾಡುತ್ತಾ ಕ್ಷೇತ್ರದಲ್ಲಿ ಜನರ ಭಾರೀ ಆಕ್ರೋಶಕ್ಕೆ ಕಾರಣರಾಗಿದ್ದರು.

ಅಭಿವೃದ್ಧಿ ವಿಚಾರಕ್ಕೆ ಬಂದಾಗ ಪ್ರತಾಪ್ ಸಿಂಹ, ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತರಾಗಿ ಜನರ ಕೈಗೆ ಸಿಗದಂತಾಗಿದ್ದರು. ರಾಜಕಾರಣಕ್ಕೆ ಮುಂದಾಗಿದ್ದು, ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದು ಈ ಬಾರಿ ಟಿಕೆಟ್ ಕೈತಪ್ಪಲು ನೇರ ಕಾರಣ ಎನ್ನುತ್ತಿದ್ದಾರೆ ಮತದಾರರು.

Advertisements

ಪ್ರತಾಪ್ ಸಿಂಹ ಅಭ್ಯರ್ಥಿ ಆಗಿದ್ದರೆ, ಕ್ಷೇತ್ರದಲ್ಲಿ ವ್ಯಕ್ತಿಗತ ಜಿದ್ದಾಜಿದ್ದಿನ ಹಣಾಹಣಿ ಸಹಜವಾಗಿ ಕಂಡುಬರುತ್ತಾ ಇತ್ತು. ಯಾಕೆಂದರೆ ಜನರಿಗೆ ಅಂತಹ ಆಕ್ರೋಶ ಈಗಾಗಲೇ ಮನೆ ಮಾಡಿತ್ತು.

ಹೀಗೆ ಟೀಕೆ, ಟಿಪ್ಪಣಿ ಎದುರಿಸಬೇಕಾದ ವ್ಯಕ್ತಿಯನ್ನ ಬಿಜೆಪಿ ಕೈಬಿಟ್ಟು ರಾಜವಂಶಸ್ಥ ಯದುವೀರ್ ಅವರಿಗೆ ಮಣೆ ಹಾಕಿದೆ. ಪ್ರಮೋದಾದೇವಿ ಒಡೆಯರ್‌ರವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಬಳಿಕ 2015ರಲ್ಲಿ ಯದುವಂಶದ 27ನೇ ಉತ್ತರಾಧಿಕಾರಿಯಾಗಿ ಯದುವೀರ್‌ರನ್ನು ದತ್ತು ಸ್ವೀಕಾರ ಮಾಡಿದ್ದರು.

ತಾತ ಜಯ ಚಾಮರಾಜೇಂದ್ರ ಒಡೆಯರ್ ಕರ್ನಾಟಕ ಏಕೀಕರಣದ ಮೊದಲ ರಾಜ್ಯಪಾಲರಾಗಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಂಸದರಾಗಿದ್ದ ಹಿನ್ನೆಲೆಯಿದೆ.

ಯದುವೀರ್ ಅವರಿಗೆ ರಾಜಕೀಯ ಹೊಸದು, ಕ್ಷೇತ್ರ ಹೊಸದು, ತಳ ಮಟ್ಟದ ಕಾರ್ಯಕರ್ತರ ತಲುಪುವ ಸವಾಲು ಇದೆ. ಯದುವೀರ್ ಅವರ ಮೇಲೆ ಆಕ್ರೋಶ ಇಲ್ಲದೆ ಇದ್ದರೂ ಪ್ರತಾಪ್ ಸಿಂಹ ಮೈಸೂರು-ಕುಶಾಲ ನಗರ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ವಿಚಾರಗಳಲ್ಲಿ ರೈತರ ನಡುವಿನ ಭಿನ್ನಾಭಿಪ್ರಾಯ ಮುನ್ನಲೆಗೆ ಬರಲಿದೆ. ಅದು ಕೂಡ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ತಳ್ಳಿ ಹಾಕುವಂತಿಲ್ಲ.

ಈ ಬಾರಿ ಕೊಡಗಿನಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರವೊಂದನ್ನೇ ಗೆದ್ದಿರುವುದು. ಅದನ್ನ ಹೊರತು ಪಡಿಸಿದರೆ ದೋಸ್ತಿ ಪಕ್ಷ ಜೆಡಿಎಸ್ ಮೈತ್ರಿಯಿಂದ ಒಕ್ಕಲಿಗರ ಮತ ಸೆಳೆಯುತ್ತದ ಕಾದು ನೋಡಬೇಕು. ಹಾಗೇ ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜೆಡಿಎಸ್ ಇದೆ, ಪಿರಿಯಾಪಟ್ಟಣ ಭಾಗದಲ್ಲಿ ಜೆಡಿಎಸ್ ಒಲವುಳ್ಳ ಮತದಾರರು ಇದ್ದಾರೆ. ಆದರೆ, ಜೆಡಿಎಸ್ ಬಿಜೆಪಿಯ ಜೊತೆ ಹೋದಾಗಿನಿಂದ ನಿಷ್ಠಾವಂತ ಕಾರ್ಯಕರ್ತರು, ಮುಸ್ಲಿಂ, ಒಕ್ಕಲಿಗ ಸಮುದಾಯ ಒಂದು ಹೆಜ್ಜೆ ಹಿಂದೆ ಹೋದಂತೆ ಕಂಡುಬರುತ್ತಿದೆ. ಹೀಗಾಗಿ, ಈ ಬಾರಿಯ ಚುನಾವಣೆ ಅಷ್ಟು ಸುಲಭವಲ್ಲ.

ಇನ್ನು ಕಾಂಗ್ರೆಸ್ ಪಕ್ಷ ಲಕ್ಷ್ಮಣ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಲಕ್ಷಣ್ ಮೂಲತಃ ದಳವಾಯಿ ಹೈಸ್ಕೂಲ್ ಪ್ರಾಂಶುಪಾಲರಾಗಿ ಕೆಲಸ ಮಾಡುವಾಗಿನಿಂದಲೂ, ದಳವಾಯ್ ಲಕ್ಷ್ಮಣ್ ಎಂದೇ ಚಿರಪರಿಚಿತರು. ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ವ್ಯಕ್ತಿತ್ವದ ಮೇಲೆ ಕಪ್ಪು ಛಾಯೆ ಇಲ್ಲ. ಹಾಗೆ ನೋಡಿದರೆ ಈ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲನ್ನು ಕಂಡಿದ್ದಾರೆ. ನಮ್ಮಂತವರಿಗೆ ಚುನಾವಣೆ ಅಲ್ಲ ಅನ್ನುವ ಅಳಲನ್ನು ಕೂಡ ಬಹಿರಂಗವಾಗಿ ತೋಡಿಕೊಂಡಿದ್ದಾರೆ.

ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ಸಮರ್ಥವಾಗಿ ಕಾರ್ಯ ನಿಭಾಯಿಸಿದ ವ್ಯಕ್ತಿ. ಆದರೆ, ಮೈಸೂರಿನಿಂದ ಕೊಡಗಿನವರೆಗೆ ತಮ್ಮ ಛಾಪನ್ನು ಹೊಂದಿಲ್ಲ. ಕಾಂಗ್ರೆಸ್ ಪಕ್ಷ ಸದ್ಯ ಐದು ಕ್ಷೇತ್ರದಲ್ಲಿ ಗೆದ್ದಿರುವುದೇ ಇವರ ಶಕ್ತಿ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ತವರು. ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈಹಿಡಿಯುತ್ತಾ ನೋಡಬೇಕಿದೆ.

ಮೈಸೂರಿನಲ್ಲಿ ಲಕ್ಷ್ಮಣ್ ಪರ ಪ್ರಚಾರ ಮಾಡಲು ಅತಿರಥ ಮಹಾರಥರ ದಂಡೆ ಇದೆ. ಆದರೆ, ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಕೂಡ ಅಷ್ಟೇ ಮುಖ್ಯ. ಜೆಡಿಎಸ್ ಮತಗಳು ಬಿಜೆಪಿಗೆ ಹೋದ್ರೆ ಏನಾಗಬಹುದು? ಎನ್ನುವ ಲೆಕ್ಕಾಚಾರ ಕೂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ.

ಕ್ಷೇತ್ರ ಹೇಳಿಕೇಳಿ ಒಕ್ಕಲಿಗರ ಪ್ರಾಬಲ್ಯ ಹೊಂದಿದೆ. ಬಳಿಕ, ಮುಸ್ಲಿಂ, ಎಸ್ಸಿ (ಎಡ, ಬಲ) ನಿರ್ಣಾಯಕ ಮತಗಳು. ಈ ಸಮುದಾಯಗಳು ಯಾರ ಕೈಹಿಡಿಯುತ್ತವೋ, ಅವರ ಗೆಲುವು ನಿಶ್ಚಿತ ಎನ್ನುವಂತಿದೆ.

ಇನ್ನು ಲಿಂಗಾಯತ, ಕುರುಬ, ಕೊಡವ, ಆದಿವಾಸಿ, ಬುಡಕಟ್ಟು, ಬ್ರಾಹ್ಮಣರು ಸೇರಿದಂತೆ ಈ ಎಲ್ಲ ಜಾತಿಗಳ ಲೆಕ್ಕಾಚಾರ ಎಲ್ಲ ಪಕ್ಷಗಳಿಗೂ ಕಗ್ಗಂಟಾಗಿದೆ. ಕೊಡಗಿನಲ್ಲಿ ಹೋದಾಗ ನೇರವಾಗಿ ಕಾಂಗ್ರೆಸ್ ಭೂ ಗುತ್ತಿಗೆ ನೀಡಿರುವ ಆದೇಶ ವಿಚಾರವಾಗಿ ಭಾರಿ ವಿರೋಧ ಎದುರಿಸಬೇಕಾಗುತ್ತದೆ.

ಈಗಾಗಲೇ ಕೊಡಗಿನಲ್ಲಿ ಎಲ್ಲ ಸಂಘಟನೆಗಳು ಸೇರಿ ಹೋರಾಟ ರೂಪಿಸುತ್ತಿದ್ದು, ಶ್ರೀಮಂತರ ಪರ ಒತ್ತುವರಿ ಮಾಡಿಕೊಂಡಿರುವ ಭೂಮಿ ಗುತ್ತಿಗೆ ಪಡೆಯಲು ನೇರವಾಗಿ ಸಹಕಾರ ಮಾಡುತ್ತಿರುವ ಸರ್ಕಾರದ ವಿರುದ್ಧ ಬೀದಿಗೆ ಇಳಿಯಲಿದ್ದಾರೆ. ಜೊತೆಗೆ ಮೂಲಭೂತ ಸೌಲಭ್ಯ, ವಸತಿ ಸಿಗದ ಬಡ ಜನರ ಆಕ್ರೋಶ ಕೂಡ ಅಷ್ಟೇ ಇದೆ. ಕ್ಷೇತ್ರದ ಶಾಸಕರ ಮೇಲೆ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಕೊಟ್ಟ ಮಾತಿನಂತೆ ನಡೆಯಲಿಲ್ಲ, ಸರ್ಕಾರ ಮೋಸ ಮಾಡಿದೆ ಎನ್ನುವ ಕೋಪ ಕೊಡಗಿನ ದಲಿತರು, ಶೋಷಿತರಲ್ಲಿದೆ.

ಬಿಜೆಪಿ ಸಿರಿವಂತರ ಪಕ್ಷ ದಲಿತರನ್ನ, ಶೋಷಿತರನ್ನ ಕಡೆಗಣಿಸಿದೆ. ಇದುವರೆಗೆ ಸಿರಿವಂತರ ಪರ ಕೆಲಸ ಮಾಡಿದೆ. ಬಡವರ ಶ್ರೇಯಸ್ಸಿಗೆ ಯಾವುದೇ ಕೆಲಸ ಮಾಡಿಲ್ಲ ಅನ್ನುವುದು ಬಿಜೆಪಿ ಮೇಲಿನ ನೇರ ಆಪಾದನೆ ಆಗಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಹೀನಾಯವಾಗಿ ನಡೆಸಿಕೊಂಡಿದೆ ಎನ್ನುವುದೆಲ್ಲ ಈ ಚುನಾವಣೆಯ ಮಾನದಂಡ ಆಗುವುದರಲ್ಲಿ ಸಂದೇಹವೇ ಇಲ್ಲ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X