ಐಪಿಎಲ್ 17ನೇ ಆವೃತ್ತಿ ಇಂದಿನಿಂದ ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಹಾಗೂ ವಿಶ್ವಕಪ್ ಪಂದ್ಯಗಳಿಗಿರುವಷ್ಟೆ ಹಣ, ಖ್ಯಾತಿ, ರೋಮಾಂಚಕತೆ, ಕೌತುಕತೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿದೆ. ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಗಳೊಂದಿಗೆ ಆರಂಭವಾಗುವ ಟೂರ್ನಿ ಮೇ 26ಕ್ಕೆ ಮುಗಿಯುವ ಸಾಧ್ಯತೆಯಿದೆ.
ಸದ್ಯ ಏ.7ರವರೆಗಿನ ವೇಳಾಪಟ್ಟಿ ಮಾತ್ರ ಪ್ರಕಟವಾಗಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಕೆಲವು ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಹಿಂದಿನ ಬಾರಿಯ ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳ ನಡುವೆ, ಮುಂದಿನ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯುತ್ತದೆ. ಈ ಬಾರಿ ಹಿಂದಿನ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯ ಆಡಲಿದ್ದರೂ, ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಆಡುತ್ತಿಲ್ಲ. ಅದರ ಬದಲು ಫಾ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಎದುರಾಳಿ ತಂಡವಾಗಿ ಆಡಲಿದೆ.
ಈ ಬಾರಿಯ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗಿಯಾಗಿದ್ದು, ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿರುವ ಪ್ರತಿ ತಂಡವೂ, ಮತ್ತೂಂದು ಗುಂಪಿನಲ್ಲಿರುವ ತಂಡಗಳ ಜೊತೆ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಒಂದು ಪಂದ್ಯವನ್ನು ತನ್ನದೇ ನೆಲದಲ್ಲಿ, ಮತ್ತೊಂದು ಪಂದ್ಯವನ್ನು ಎದುರಾಳಿ ನೆಲದಲ್ಲಿ ಆಡಲಿದೆ.
ಈ ಸುದ್ದಿ ಓದಿದ್ದೀರಾ? ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಮುನ್ನ ಐಪಿಎಲ್‌ಗೆ ವಿದಾಯ ಘೋಷಿಸಲಿರುವ ದಿನೇಶ್ ಕಾರ್ತಿಕ್
ಇದರ ಜೊತೆಗೆ ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ಇತರ 4 ತಂಡಗಳ ಜೊತೆ ತಲಾ 1 ಪಂದ್ಯ ಆಡಲಿದೆ. ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದುಕೊಳ್ಳಲಿವೆ. ಮೊದಲ 2 ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಆಡಲಿದ್ದು, ಗೆದ್ದ ತಂಡ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಳ್ಳಲಿದೆ.
3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಗೆದ್ದ ತಂಡ, ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್‌ನಲ್ಲಿ ಆಡಲಿದೆ. 2ನೇ ಪ್ಲೇ ಆಫ್‌ನಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಅರ್ಹತೆ ಪಡೆದುಕೊಳ್ಳಲಿದೆ.
10 ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್, ಲಖನೌ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್ ತಂಡಗಳು ಈ ಬಾರಿಯ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
ಇವುಗಳಲ್ಲಿ ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ತಂಡ ಅತಿ ಹೆಚ್ಚು ತಲಾ ಐದೈದು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಕೊಲ್ಕತಾ, ಹೈದರಾಬಾದ್ ಎರಡು ಬಾರಿ ಹಾಗೂ ರಾಜಸ್ಥಾನ್ ಹಾಗೂ ಗುಜರಾತ್ ಒಂದೊಂದು ಬಾರಿ ಟ್ರೋಫಿ ಗೆದ್ದಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಟ್ರೋಫಿ ಗೆಲ್ಲದಿರುವ ತಂಡಗಳು.
ಈ ಬಾರಿಯ ಹೊಸ ನಿಯಮಗಳು ; ಡಿಆರ್‌ಎಸ್ ಬದಲಿಗೆ ಸ್ಮಾರ್ಟ್ ರಿಪ್ಲೇ ಸಿಸ್ಟಮ್
ಈ ಬಾರಿಯ ಟೂರ್ನಿಯಲ್ಲಿ ಡಿಆರ್‌ಎಸ್ ಬದಲಿಗೆ ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಪರಿಚಯಿಸಲಾಗಿದೆ. ಅಂಪೈರ್‌ಗಳ ನಿರ್ಧಾರದ ವೇಗ ಮತ್ತು ನಿಖರತೆಯನ್ನು ಹೆಚ್ಚಿಸಲು, ಟಿವಿ ಅಂಪೈರ್ ಈಗ ಒಂದೇ ಕೋಣೆಯಲ್ಲಿ ಕುಳಿತು ಪಕ್ಕದಲ್ಲಿ ಕುಳಿತಿರುವ ಹಾಕ್-ಐ ವ್ಯವಸ್ಥೆಯ ಆಧಾರದಲ್ಲಿ ನಿರ್ಧಾರಕ್ಕೆ ಬರುತ್ತಾರೆ. ಈ ವಿಧಾನದಲ್ಲಿ ಡಿಆರ್‌ಎಸ್‌ನಂತೆ ಯಾವುದೇ ಗೊಂದಲಗಳು ಆಗದಂತೆ ಅಂತಿಮ ತೀರ್ಪು ಪ್ರಕಟವಾಗಲಿದೆ.
ಈ ಹಿಂದೆ ಇದ್ದ ಡಿಆರ್‌ಎಸ್‌ನಂತೆ ಇಲ್ಲೂ ಮೈದಾನದಲ್ಲಿರುವ ಅಂಪೈರ್ 3ನೇ ಅಂಪೈರ್‌ಗೆ ಮೇಲ್ಮನವಿ ಸಲ್ಲಿಸುತ್ತಾರೆ. ಆದರೆ, ಇಲ್ಲಿ ಮೂರನೇ ಅಂಪೈರ್‌ಗೆ ಫಲಿತಾಂಶ ಸಿಗುವವರೆಗೂ ಕಾಯಬೇಕಿಲ್ಲ. ಅದರ ಬದಲಾಗಿ ಹೊಸ ತಂತ್ರಜ್ಞಾನದ ಮೂಲಕ ವೇಗವಾಗಿ ತೀರ್ಪು ನೀಡಲಾಗುತ್ತದೆ. ಹೊಸ ತಂತ್ರಜ್ಞಾನವುಳ್ಳ ಹಾಕ್-ಐ ಅಪರೇಟರ್‌ಗಳ ನೆರವಿನಿಂದ ತಕ್ಷಣವೇ ಮೂರನೇ ಅಂಪೈರ್ ತೀರ್ಪು ಕೊಡಬಹುದು. ಮೈದಾನದ ಸುತ್ತಲೂ ವಿವಿಧ ಭಾಗಗಳಲ್ಲಿ ಇರಿಸಲಾಗಿರುವ ಹಾಕ್-ಐ ತಂತ್ರಜ್ಞಾನದ ಎಂಟು ಹೈಸ್ಪೀಡ್ ಕ್ಯಾಮರಾಗಳು ಈ ನಿಖರ ತೀರ್ಪಿಗೆ ನೆರವಾಗಲಿದೆ.
ಹೈಸ್ಪೀಡ್ ಕ್ಯಾಮರಾಗಳಿಂದ ದೃಶ್ಯದ ತ್ವರಿತ ವಿಶ್ಲೇಷಣೆ ಮತ್ತು ವೇಗವಾಗಿ ಚಿತ್ರಗಳನ್ನು ಒದಗಿಸಲು ಟಿವಿ ಅಂಪೈರ್ ಜೊತೆಗೆ ಇಬ್ಬರು ಹಾಕ್-ಐ ಆಪರೇಟರ್‌ಗಳನ್ನು ನಿಯೋಜಿಸಿರಲಾಗುತ್ತದೆ. ಮೂರನೇ ಅಂಪೈರ್ ಮತ್ತು ಹಾಕ್-ಐ ಆಪರೇಟರ್‌ಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದ ಟಿವಿ ಪ್ರಸಾರಕರು ಈ ನೂತನ ಪದ್ದತಿಯಲ್ಲಿ ಅಗತ್ಯವಿರುವುದಿಲ್ಲ. ಅದರ ಬದಲಾಗಿ, ಹಾಕ್-ಐ ಆಪರೇಟರ್‌ಗಳು ಸ್ಪ್ಲಿಟ್-ಸ್ಕ್ರೀನ್ ಮೂಲಕ ವಿಮರ್ಶೆಯ ಪರಿಶೀಲನೆ ನಡೆಸುತ್ತಾರೆ. ನಂತರ ಬಂದ ಫಲಿತಾಂಶವನ್ನು ಬಳಸಿಕೊಂಡು ನಿರ್ಧಾರ ಬೇಗನೆ ಪ್ರಕಟಿಸಲಾಗುತ್ತದೆ.
ಓವರ್‌ನಲ್ಲಿ ಎರಡು ಬೌನ್ಸರ್
ಬೌಲರ್‌ಗಳು ಪ್ರತಿ ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯುವ ಅವಕಾಶ ನೀಡಲಾಗಿದೆ. ಈ ಹಿಂದೆ ಓವರ್ ಒಂದರಲ್ಲಿ ಕೇವಲ ಒಂದು ಶಾರ್ಟ್ ಬಾಲ್ ಎಸೆಯಲು ಮಾತ್ರ ಅವಕಾಶವಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಫೀಲ್ಡಿಂಗ್ ಮಾಡುವ ತಂಡದ ಬೌಲರ್‌ಗಳಿಗೆ ಅವಕಾಶ ಹೆಚ್ಚಿದೆ. ಆರಂಭದಲ್ಲಿ, 2023-24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ನಿಯಮವನ್ನು ಬಿಸಿಸಿಐ ಪರಿಚಯಿಸಿತು. ಟಿ20 ಪಂದ್ಯಗಳಲ್ಲಿ ಒಂದು ಶಾರ್ಟ್ ಬಾಲ್ ಎಸೆತದ ಐಸಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದೇ ವೇಳೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಪ್ರತಿ ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯಲು ಅನುಮತಿ ಇದೆ.
ಈ ಬಾರಿಯೂ ಪ್ರತಿ ತಂಡಗಳು ಎರಡು ವಿಮರ್ಶೆ (ರಿವ್ಯೂ) ಅವಕಾಶಗಳನ್ನು ಉಳಿಸಿಕೊಳ್ಳುತ್ತವೆ. ಜೊತೆಗೆ ವೈಡ್ ಮತ್ತು ನೋ ಬಾಲ್‌ಗಳನ್ನು ಕೂಡ ಮತ್ತೊಮ್ಮೆ ಪರಿಶೀಲಿಸುವ ಅವಕಾಶ ಪಡೆಯುತ್ತವೆ. ಈ ನಿಯಮವನ್ನು ಕಳೆದ ವರ್ಷದ ಆವೃತ್ತಿಯಲ್ಲಿ ಪರಿಚಯಿಸಲಾಗಿತ್ತು.
ಹೊಸ ಹುರುಪಿನಲ್ಲಿರುವ ಆರ್‌ಸಿಬಿ
ಇಂದು ಚೆನ್ನೈ ವಿರುದ್ಧ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪ್ರತಿ ಬಾರಿಯಂತೆ ಹೊಸ ಹುರುಪಿನಲ್ಲಿದೆ. ಈ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಲು ಆರ್‌ಸಿಬಿಗೆ 2009 ರಿಂದ ಒಮ್ಮೆಯೂ ಸಾಧ್ಯವಾಗಿಲ್ಲ. ನಾಯಕ ಫಾ ಡು ಪ್ಲೆಸಿಸ್, ಎರಡು ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಳಿದಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ತಂಡದ ಪ್ರಮುಖ ಬ್ಯಾಟರ್‌ಗಳು.
ಈ ಬಾರಿ ಆರ್‌ಸಿಬಿಗೆ ಸೇರ್ಪಡೆಯಾಗಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಕೂಡ ಸ್ಫೋಟಕ ಆಟಗಾರ. ವೇಗದ ಬೌಲಿಂಗ್ ವಿಭಾಗದ ಮೊಹಮ್ಮದ್ ಸಿರಾಜ್, ಲಾಕಿ ಫರ್ಗ್ಯೂಸನ್, ಅಲ್ಜಾರಿ ಜೋಸೆಫ್, ಆಕಾಶ್ ದೀಪ್, ಟೋಪ್ಲಿ ಅವರಿಂದ ತಂಡ ಪ್ರಬಲವಾಗಿದ್ದು ಟ್ರೋಫಿ ಎತ್ತಿ ಹಿಡಿಯುವ ತವಕದಲ್ಲಿದೆ. ಆದರೆ ಹಸರಂಗ ಅವರನ್ನು ಕಳೆದುಕೊಂಡ ನಂತರ ಸ್ಪಿನ್ ವಿಭಾಗ ದುರ್ಬಲವಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಕರ್ಣ ಶರ್ಮಾ, ಮಯಂಕ್ ದಾಗರ್, ಹಿಮಾಂಶು ಶರ್ಮ ಮೊದಲಾದವರ ಮೇಲೆ ಭರವಸೆಯಿಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸಿಎಸ್‌ಕೆ ತಂಡದಲ್ಲಿ ಬೆಂಗಳೂರು ಮೂಲದ ರಚಿನ್ ರವೀಂದ್ರ
ಈ ಬಾರಿ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಯಾಗಿರುವ ಬೆಂಗಳೂರು ಮೂಲದ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಮೇಲೆ ತಂಡ ಅಪಾರ ಭರವಸೆ ಇಟ್ಟಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಮೂರು ಶತಕಗಳೊಂದಿಗೆ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಪೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಚಿನ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಸ್ಟಾರ್ ಕ್ರಿಕೆಟಿಗನಾಗಿ ಹೊರಹೊಮ್ಮುವುದಲ್ಲಿ ಯಾವುದೇ ಅನುಮಾನವಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಆಡಿರುವ 250 ಪಂದ್ಯಗಳಲ್ಲಿ 235 ಪಂದ್ಯಗಳಿಗೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು. ಈ ಬಾರಿ ಉದಯೋನ್ಮುಖ ಆಟಗಾರ, ಋತುರಾಜ್ ಗಾಯಕವಾಡ್ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ.
ಉಭಯ ತಂಡಗಳ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಫಾ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಂಕ್ ಡಾಗರ್, ವೈಶಾಖ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರಾನ್ ಗ್ರೀ ನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗ್ಯುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.
ಚೆನ್ನೈ ಸೂಪರ್ ಕಿಂಗ್ಸ್:
ಋತುರಾಜ್ ಗಾಯಕವಾಡ್ (ನಾಯಕ), ಮಹೇಂದ್ರ ಸಿಂಗ್ ಧೋನಿ, ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜ, ಅಜಯ್ ಮಂಡಲ್, ಮುಕೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.
ಪಂದ್ಯ ಆರಂಭ: ರಾತ್ರಿ 8.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ , ಜಿಯೊ ಸಿನಿಮಾ ಆ್ಯಪ್
