ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಸಂಬಂಧ ಕೇಂದ್ರ ವಿರುದ್ಧ ಬಿಆರ್‌ಎಸ್ ಅಧ್ಯಕ್ಷ, ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದ್ದಾರೆ. ‘ಇದು ಪ್ರಜಾಪ್ರಭುತ್ವದ ಮೊತ್ತೊಂದ ಕರಾಳ ದಿನ’ ಎಂದು ಕರೆದಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ಪುತ್ರಿ, ಎಂಎಲ್‌ಸಿ ಕೆ ಕವಿತಾ ಬಂಧನ ವಿಚಾರವಾಗಿ ಕೆಸಿಆರ್ ಮೌನವಾಗಿದ್ದರು. ಇದೀಗ, ಕೇಜ್ರಿವಾಲ್ ಬಂಧನದ ಬಳಿಕ ಮೌನ ಮುರಿದಿದ್ದಾರೆ. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ತೊಡೆದುಹಾಕುವ ಏಕೈಕ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಮತ್ತು ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಬಂಧನಗಳು ಇದನ್ನೇ ಸೂಚಿಸುತ್ತವೆ” ಎಂದು ಹೇಳಿದ್ದಾರೆ.
“ಕೇಂದ್ರದ ಬಿಜೆಪಿ ಸರ್ಕಾರವು ದೇಶದ ವಿರೋಧ ಪಕ್ಷಗಳನ್ನು ನಿರ್ಮೂಲನೆ ಮಾಡಲು ಕೇಂದ್ರೀಯ ಸಂಸ್ಥೆಗಳಾದ ಇಡಿ, ಸಿಬಿಐ ಮತ್ತು ಐಟಿಗಳನ್ನು ಪ್ಯಾದೆಯಾಗಿ ಬಳಸುತ್ತಿದೆ. ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬಿಜೆಪಿಯ ಕೃತ್ಯಗಳನ್ನು ಬಿಆರ್‌ಎಸ್ ಖಂಡಿಸುತ್ತದೆ” ಎಂದು ಕೆಸಿಆರ್ ಹೇಳಿದ್ದಾರೆ.
“ಕೇಜ್ರಿವಾಲ್ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ. ಅವರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಕೈಬಿಡಬೇಕು. ಬಂಧಿಸಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಬಿಜೆಪಿ ಮತ್ತು ಅದರ ನೀತಿಗಳನ್ನು ವಿರೋಧಿಸಿದ್ದರಿಂದ ಕವಿತಾ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕುವ ಮೂಲಕ ಇಡಿ ಬಂಧಿಸಿದೆ” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ವಿರುದ್ಧ ಇದ್ದುದರಿಂದಲೇ ತಮ್ಮ ಮಗಳನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಇಡಿ ತಮ್ಮ ಮಗಳನ್ನು ಬಂಧಿಸುತ್ತಿರಲಿಲ್ಲ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.