ಚುನಾವಣಾ ಬಾಂಡ್ ಹಗರಣವು ಸ್ವತಂತ್ರ್ಯ ಭಾರತದ ಅತಿ ದೊಡ್ಡ ಹಗರಣವಾಗಿದೆ. ಈ ಹಗರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ರಾಜಕೀಯ ಪಕ್ಷಗಳು ಮತ್ತು ಕಂಪನಿಗಳ ನಡುವಿನ ಅಪವಿತ್ರ ಮೈತ್ರಿ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ವಕೀಲರು ಮತ್ತು ಹೋರಾಟಗಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಶುಕ್ರವಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ವಕೀಲರು-ಹೋರಾಟಗಾರರ ತಂಡ, “ಹಲವು ಕಂಪನಿಗಳು ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಹಣ ನೀಡಿ, ತಮಗೆ ಬೇಕಾದ ಅನುಕೂಲಗಳನ್ನು ಪಡೆದುಕೊಂಡಿವೆ. ಆಡಳಿತಾರೂಢ ಬಿಜೆಪಿಗೆ ಹಣ ಕೊಟ್ಟು, ಕಂಪನಿಗಳು ನಾನಾ ರೀತಿಯ ನೆರವು ಪಡೆದಿವೆ. ಈ ಅಪವಿತ್ರ ಮೈತ್ರಿಯು ಬಹಿರಂಗವಾಗಬೇಕು” ಎಂದು ಒತ್ತಾಯಿಸಿದೆ.
“ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂ. ದೇಣಿಗೆ ಪಡೆದಿರುವ ಬಿಜೆಪಿ, ಬೃಹತ್ ಮೊತ್ತದ ಯೋಜನೆಗಳನ್ನು ತಮಗೆ ಹಣ ನೀಡಿದ ಕಂಪನಿಗಳಿಗೆ ಕೊಟ್ಟಿದೆ. ಹಲವು ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿ, ತನಿಖಾ ಸಂಸ್ಥೆಗಳ ತನಿಖೆಯಿಂದ ತಪ್ಪಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“33 ಕಂಪನಿಗಳು ಬಿಜೆಪಿಗೆ 1,751 ಕೋಟಿ. ರೂ. ದೇಣಿಗೆ ನೀಡಿ, 3.7 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಗುತ್ತಿಗೆ ಪಡೆದಿವೆ. ತನಿಖಾ ಸಂಸ್ಥೆಗಳ ತನಿಖೆಯಿಂದ ತಪ್ಪಿಸಿಕೊಳ್ಳಲು 41 ಕಂಪನಿಗಳು ಬಿಜೆಪಿಗೆ 2,471 ಕೋಟಿ ರೂ. ದೇಣಿಗೆ ನೀಡಿವೆ. ಈ ಹಣದಲ್ಲಿ ಅರ್ಧದಷ್ಟು ಮೊತ್ತವು ಇಡಿ/ಐಟಿ ದಾಳಿಗಳ ಬಳಿಕ ಬಿಜೆಪಿಗೆ ಬಂದಿದೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
“ಈ ಹಿಂದೆ, 2ಜಿ ಹಗರಣ ಅಥವಾ ಕಲ್ಲಿದ್ದಲು ಹಗರಣದಲ್ಲಿ ಹಣದ ಅವ್ಯವಹಾರ ನಡೆದಿರಲಿಲ್ಲ. ಅದರೂ, ಆ ಎರಡು ಹಗರಣಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲಾಗಿತ್ತು. ಚುನಾವಣಾ ಬಾಂಡ್ ಯೋಜನೆಯಲ್ಲಿ ಭಾರೀ ಹಗರಣ ನಡೆದಿದೆ. ಹೀಗಾಗಿ, ಕಾರ್ಪೊರೇಟ್-ರಾಜಕೀಯ ಸಂಬಂಧ ಹಾಗೂ ಚುನಾವಣಾ ಬಾಂಡ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು” ಎಂದು ಪ್ರಶಾಂತ್ ಭೂಷಣ್ ಒತ್ತಾಯಿಸಿದ್ದಾರೆ.