ಬೆಳಗಾವಿ ಲೋಕಸಭಾ ಚುನಾವಣಾ ರಾಜಕೀಯ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದ್ದು, ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡುವರೋ, ಇಲ್ಲವೋ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಆದರೆ, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ.
ಶೆಟ್ಟರ್ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂಬುದನ್ನು ತಿಳಿದ ಬೆನ್ನಲ್ಲೇ ಬೆಳಗಾವಿ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ಜಿಲ್ಲೆಯ ನಾಯಕರೆಲ್ಲ ಪ್ರತ್ಯೇಕ ಸಭೆ ನಡೆಸಿದ್ದು, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಬೇಡವೆಂದು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದೆಡೆ, ಜಗದೀಶ್ ಶೆಟ್ಟರ್ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ಗೋಬ್ಯಾಕ್ ಶೆಟರ್’ ಅಭಿಯಾನ ಪ್ರಾರಂಭಿಸಿದ್ದಾರೆ.
ರಸ್ತೆಯ ಪಕ್ಕದಲ್ಲಿ ʼಬರ್ರಿ ಶೆಟ್ಟರ್ ಉಂಡ ಹೋಗ್ರಿ, ಬೆಳಗಾವಿ ನಿಮ್ಮಂತವರಿಗೆ ಬಿಟ್ಟಿ ಬಿದ್ದೈತಿʼ ಎಂಬ ಬ್ಯಾನರ್‌ಗಳನ್ನು ಅಳವಡಿಸಿ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭೆಗೆ ಬಿಜೆಪಿ ಟಿಕೆಟ್ ನೀಡುವುದನ್ನು ವಿರೋಧಿಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ವಿರುದ್ಧ ಬ್ಯಾನರ್ ಹಾಕಿರುವುದನ್ನು ವಿರೋಧಿಸಿರುವ ಬೆಳಗಾವಿ ಜಿಲ್ಲಾ ಬಿಜೆಪಿ ಸಮಿತಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಘೋಷಿಸಿದ್ದು,
ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದೆ. ಆದರೆ ಬಿಜೆಪಿ ಟಿಕೆಟ್ ಘೋಷಣೆ ಮಾಡದೆ ಕಾಂಗ್ರೆಸ್‌ನಿಂದ ಮರಳಿ ಬಿಜೆಪಿಗೆ ಪಕ್ಷಾಂತರ ಮಾಡಿದ ಜಗದೀಶ್ ಶೆಟ್ಟರ್ ಅವರನ್ನು ಸತಾಯಿಸುತ್ತಿರುವುದರ ಹಿಂದಿನ ತಂತ್ರ ಏನಾಗಿರಬಹುದು. ಟಿಕೆಟ್ ತಪ್ಪಿದರೆ ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು? ಹಾಲಿ ಸಂಸದೆ ಮಂಗಲಾ ಅಂಗಡಿಯರ ನಡೆ ಏನು ಎಂಬಿತ್ಯಾದಿ ಪ್ರಶ್ನೆಗಳು ಬೆಳಗಾವಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿ: ಲೈಂಗಿಕ ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಮನವಿ ಮಾಡಿದ ಸಿಬ್ಬಂದಿ
ಜಗದೀಶ್ ಶೆಟ್ಟರ್ ಮಾತ್ರ ಟಿಕೆಟ್ ಸಿಗುತ್ತದೆಂಬ ವಿಶ್ವಾಸದಲ್ಲಿ ಇದ್ದಾರೆ. ಟಿಕೆಟ್ ಸಿಕ್ಕರೂ ಸ್ಥಳೀಯ ನಾಯಕರು ಪ್ರಚಾರದಲ್ಲಿ ಭಾಗಿಯಾಗುವರಾ? ಒಟ್ಟಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿಗೆ ಕಠಿಣವಾಗಲಿದೆ.