ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣನಾದ ಆರೋಪದ ಮೇಲೆ ತಮಿಳುನಾಡಿನ ಮಧುರವಾಯಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ.
ಗುರುವಾರ ತಡರಾತ್ರಿ ಮಧುರವಾಯಲ್ ಸರ್ವೀಸ್ ರಸ್ತೆಯಲ್ಲಿ 39 ವರ್ಷದ ಕ್ಯಾಬ್ ಚಾಲಕ ರಾಜ್‌ಕುಮಾರ್ ಮೇಲೆ ಹೆಡ್ ಕಾನ್ಸ್‌ಟೇಬಲ್ ರಿಜ್ವಾನ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ರಾಜ್‌ಕುಮಾರ್‌ನನ್ನು ದಾರಿ ಹೋಕರು ಕಂಡು, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ರಾಜ್‌ಕುಮಾರ್ ಅ ವೇಳೆಗಾಗಲೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ರಾಜ್‌ಕುಮಾರ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಹಲ್ಲೆ ಬಗ್ಗೆ ತಿಳಿಯದ ಕುಟುಂಬವು ಅಂತ್ಯಸಂಸ್ಕಾರ ನೆರವೇರಿಸಿತ್ತು.
ಪೊಲೀಸರು ಮತ್ತು ಕುಟುಂಬದವರು ಆರಂಭದಲ್ಲಿ ಸಾವಿಗೆ ಹೃದಯಾಘಾತ ಕಾರಣವಿರಬಹುದು ಎಂದು ಭಾವಿಸಿದ್ದರು. ಆದರೆ, ರಾಜ್‌ಕುಮಾರ್ ಸ್ನೇಹಿತೆಯೊಬ್ಬರು ಪದೇ ರಿಜ್ವಾನ್ ಹಲ್ಲೆ ನಡೆಸಿರುವ ಬಗ್ಗೆ ಆತನ ಸಹೋದರನಿಗೆ ಮಾಹಿತಿ ನೀಡಿದ ಬಳಿಕ, ಘಟನೆ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಗುರುವಾರ ರಾತ್ರಿ ಮಹಿಳೆ ಮತ್ತು ರಾಜ್‌ಕುಮಾರ್ ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಆಗ, ರಿಜ್ವಾನ್ ಮತ್ತು ಗಸ್ತು ಕರ್ತವ್ಯದಲ್ಲಿದ್ದ ಇನ್ನೊಬ್ಬ ಕಾನ್‌ಸ್ಟೆಬಲ್ ಆ ಮಾರ್ಗವಾಗಿ ಬಂದಿದ್ದಾರೆ. ತಡರಾತ್ರಿ ಏನು ಮಾಡುತ್ತಿದ್ದೀರಿ ಎಂದು ಇಬ್ಬರನ್ನೂ ಪ್ರಶ್ನಿಸಿದ್ದಾರೆ. ರಾಜ್‌ಕುಮಾರ್ ಕಾರಿನಿಂದ ಇಳಿದು ಅವರೊಂದಿಗೆ ಮಾತನಾಡಿದ್ದು, ಮಾತಿಗೆ ಮಾತ ಬೆಳೆದು ರಾಜ್‌ಕುಮಾರ್ ಅವರ ಬೆನ್ನಿಗೆ ರಿಜ್ವಾನ್ ಹೊಡೆದಿದ್ದಾರೆ.
ರಾಜ್‌ಕುಮಾರ್ ಕುಸಿದು ಬಿದ್ದಾಗ, ಆತನನ್ನು ಎಚ್ಚರಿಸಲು ಪೊಲೀಸರು ಯತ್ನಿಸಿದ್ದಾರೆ. ಬಳಿಕ, ಮಹಿಳೆಗೆ ಸ್ಥಳದಿಂದ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಆಕೆ ಹೋದ ಬಳಿಕ, ರಾಜ್‌ಕುಮಾರ್‌ನನ್ನು ಸ್ಥಳದಲ್ಲೇ ಬಿಟ್ಟು ಪೊಲೀಸ್ ಪೇದೆಗಳು ಪರಾರಿಯಾಗಿದ್ದಾರೆ.
ಮಹಿಳೆ ರಾಜ್‌ಕುಮಾರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ, ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ, ರಾಜ್‌ಕುಮಾರ್‌ನ ಅಣ್ಣ ಜಯಕುಮಾರ್ ಮಧುರವಾಯಲ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು, ರಿಜ್ವಾನ್ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಿಜ್ವಾನ್‌ನನ್ನು ಬಂಧಿಸಿದ್ದಾರೆ.