ಲಡಾಖ್ಗೆ ರಾಜ್ಯತ್ವ ನೀಡಲು ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಸುಮಾರು 20 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಮ್ ವಾಂಗ್ಚುಕ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ “ನಿಮ್ಮ ಆದರ್ಶ ಅನುಸರಿಸಿ, ಭರವಸೆಗೆ ಬದ್ಧರಾಗಿರಿ” ಎಂದು ಮನವಿ ಮಾಡಿದ್ದಾರೆ.
“ನೀವು ಭಗವಂತ ರಾಮ ಮತ್ತು ಹಿಂದೂ ವೈಷ್ಣವರ ಆದರ್ಶವನ್ನು ಅನುಸರಿಸಿ. ನೀವು ಲಡಾಖ್ಗೆ ಈ ಹಿಂದೆ ನೀಡಿದ ಭರವಸೆಗೆ ಬದ್ಧರಾಗಿರಿ” ಎಂದು ಸೋಮವಾರ ವಿಡಿಯೋ ಮೂಲಕ ಸೋನಮ್ ವಾಂಗ್ಚುಕ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಹೇಳಿದರು. ಈ ಬಗ್ಗೆ ಎಕ್ಸ್ನಲ್ಲಿ ವಾಂಗ್ಚುಕ್ ವಿಡಿಯೋವನ್ನು ಮಾಡಿದ್ದಾರೆ.
END OF DAY 20 OF #CLIMATEFAST
Still feeling bit down & drained…
Today some 2500 people joined me for day long fast and some 300 are sleeping outdoors …
Here I Remind Amit Shah ji & Modi ji of the values they are supposed to represent…#SaveLadakh #SaveHimalayas… pic.twitter.com/OzTCywAUYe— Sonam Wangchuk (@Wangchuk66) March 25, 2024
“ಲಡಾಖ್ ಪ್ರತಿಭಟನೆಯಲ್ಲಿ ಇಂದು ನನ್ನೊಂದಿಗೆ ಸುಮಾರು 2500 ಜನರು ಸೇರಿದ್ದರು. ಇಲ್ಲಿನ ಒಟ್ಟು ಜನಸಂಖ್ಯೆ 3 ಲಕ್ಷವಾದರೂ ಕೂಡಾ ಈ 20 ದಿನದಲ್ಲಿ ಲೇಹ್ ಮತ್ತು ಕಾರ್ಗಿಲ್ನಲ್ಲಿ 60,000 ಜನರು ಪ್ರತಿಭಟನೆ ನಡೆಸುತ್ತಿದ್ದಾರೆ,” ಎಂದು ಹೇಳಿರುವ ವಾಂಗ್ಚುಕ್ ಎರಡು ಸಂದೇಶಗಳನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ? ನಮಗೆ ಪ್ರಜಾಪ್ರಭುತ್ವ ಬೇಕು: ಲಡಾಖ್ಗೆ ರಾಜ್ಯತ್ವ ನೀಡಲು ಆಗ್ರಹಿಸಿ ಹೆಚ್ಚಿದ ಪ್ರತಿಭಟನೆ
“ಒಂದು, ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಗೃಹ ಸಚಿವ ಅಮಿತ್ ಶಾ ಅವರಿಗೆ. ಅಮಿತ್ ಶಾ ಅವರು ಒಂದು ಸಂದರ್ಶನದಲ್ಲಿ ತಾನು ಜೈನನಲ್ಲ ಹಿಂದೂ ವೈಷ್ಣವ ಎಂದು ಹೇಳಿಕೊಂಡಿರುವುದನ್ನು ಕೇಳಿದ್ದೇನೆ. ವೈಷ್ಣವರಿಗೆ ಹಲವಾರು ವ್ಯಾಖ್ಯಾನಗಳಿವೆ. ಆದರೆ ನಾನು ಇಷ್ಟಪಡುವುದು ‘ವೈಷ್ಣವರಾದವರೂ ಇತರರ ನೋವು ತಿಳಿದಿರುತ್ತಾರೆ. ಇತರರಿಗೆ ಒಳ್ಳೆಯದ್ದನ್ನು ಮಾಡುತ್ತಾರೆ’ ಎಂಬ ವ್ಯಾಖ್ಯಾನವನ್ನು” ಎಂದು ಅಮಿತ್ ಶಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ನನ್ನ ಇನ್ನೊಂದು ಸಂದೇಶ. ಮೋದಿ ಅವರು ರಾಮ ಭಕ್ತರು. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದಾರೆ. ಆದರೆ ಭಗವಂತ ರಾಮನ ಮೌಲ್ಯಗಳೇನು? ರಾಮಚರಿತಮಾನಸದಲ್ಲಿ ರಘುಕುಲದವರು ಪ್ರಾಣ ಹೋದರೂ ತಮ್ಮ ವಚನವನ್ನು (ಮಾತನ್ನು) ತಪ್ಪಲ್ಲ ಎಂದು ಹೇಳಲಾಗುತ್ತದೆ. ತನ್ನ ಮಾತು ತಪ್ಪಬಾರದು ಎಂಬ ಕಾರಣಕ್ಕೆ ಭಗವಂತ ರಾಮ 14 ವರ್ಷಗಳ ಕಾಲ ವನವಾಸಕ್ಕೆ ಹೋದರು. ರಾಮ ಭಕ್ತರಾದ ಮೋದಿಯವರು ಕೂಡ ಈ ಆದೇಶವನ್ನು ಪಾಲಿಸಬೇಕು. ತಾನು ಈ ಹಿಂದೆ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.
21st Day OF MY #CLIMATEFAST
350 people slept in – 10 °C. 5000 people in the day here.
But still not a word from the government.
We need statesmen of integrity, farsightedness & wisdom in this country & not just shortsighted characterless politicians. And I very much hope that… pic.twitter.com/X06OmiG2ZG— Sonam Wangchuk (@Wangchuk66) March 26, 2024
“ಚುನಾವಣೆ ವೇಳೆ ನೀಡಿದ ಭರವಸೆಯನ್ನು ಈಡೇರಿಸಿ ತಾನು ನಿಜವಾದ ರಾಮ ಭಕ್ತ ಎಂದು ಸಾಬೀತುಪಡಿಸಲು ನಾನು ಪ್ರಧಾನಿ ಮೋದಿಯಲ್ಲಿ ಮನವಿ ಮಾಡುತ್ತೇವೆ. ಇಲ್ಲವಾದರೆ ಯಾರೂ ಕೂಡಾ ಇಂತಹ ರಾಜಕಾರಣಿಗಳನ್ನು, ಅವರ ಭರವಸೆಯನ್ನು ನಂಬುವುದಿಲ್ಲ. ತಮ್ಮ ಆದರ್ಶವನ್ನು ಮರೆಯದಂತೆ ನಾನು ಅಮಿತ್ ಶಾ ಮತ್ತು ಮೋದಿ ಅವರಿಗೆ ಮನವಿ ಮಾಡುತ್ತೇನೆ” ಎಂದು ಹೇಳಿದರು.
ಲಡಾಖ್ಗೆ ರಾಜ್ಯತ್ವ ನೀಡಲು, ಸಂವಿಧಾನದ ಆರನೇ ಪರಿಚ್ಛೇದದಡಿ ಸೇರಿಸಲು ಆಗ್ರಹಿಸಿ ಪ್ರತಿಭಟನೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಕೇಂದ್ರದೊಂದಿಗಿನ ಹಲವಾರು ಸುತ್ತಿನ ಮಾತುಕತೆ ವಿಫಲವಾಗಿದ್ದು, ಈಗ ಪ್ರತಿಭಟನೆಯ ಕಾವು ಅಧಿಕವಾಗುತ್ತಿದೆ. 2019ರ ಲೋಕಸಭೆ ಚುನಾವಣೆ ಮತ್ತು 2020 ರ ಸ್ಥಳೀಯ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ, ಕೇಂದ್ರಾಡಳಿತ ಪ್ರದೇಶಕ್ಕೆ 6ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆಯ ಬಗ್ಗೆ ಬಿಜೆಪಿ ಭರವಸೆ ನೀಡಿತು. 2019ರಲ್ಲಿ ಲಡಾಖ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಿತು. ಆದರೆ ಈವರೆಗೂ ಭರವಸೆಯನ್ನು ಈಡೇರಿಸಿಲ್ಲ.