ಅಘೋಷಿತ ತುರ್ತು ಪರಿಸ್ಥಿತಿ: ಪ್ರಧಾನಿ ಮೋದಿಗೆ ಸೋಲು ಕಟ್ಟಿಟ್ಟ ಬುತ್ತಿ?

Date:

ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈಗ, ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಜಾರಿಗೊಳಿಸದಿದ್ದರೂ, ದೇಶದಲ್ಲಿ ಅಂತಹ ಬಿಗುವಾದ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಇದನ್ನು ನೋಡಿದಾಗ ಈ ಹಿಂದೆ ಕಾಂಗ್ರೆಸ್‌ಗೆ ಸೋಲು ಎದುರಾದಂತೆ ಬಿಜೆಪಿಗೆ ಸೋಲು ದೂರವೇನಿಲ್ಲ ಎಂಬಂತೆ ತೋರುತ್ತಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸತತ ಮೂರು ಬಾರಿ ಪ್ರಧಾನಿಯಾಗಿ ಈ ದೇಶದಲ್ಲಿ ಆಡಳಿತ ನಡೆಸಿದ್ದರು. ಭಾರತವು ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸಿದ ಸಮಯದಲ್ಲಿ ಇಂದಿರಾ ಗಾಂಧಿಯನ್ನು ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರೇ ದುರ್ಗಾ ಮಾತೆ ಎಂದು ಕೊಂಡಾಡಿದ್ದರು. ಭಾರತದ ಎದುರು ಸೋತ ಪಾಕಿಸ್ತಾನವು ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಎಂಬ ಎರಡು ದೇಶವಾಗಿ ವಿಭಜನೆಯಾಗುವುದನ್ನು ನೋಡಿ ನಮ್ಮ ದೇಶದಲ್ಲಿ ಹರ್ಷೋದ್ಗಾರ ಎಲ್ಲೆಡೆ ಹಬ್ಬಿತ್ತು.

ಇಡೀ ದೇಶವೇ ಇಂದಿರಾ ಗಾಂಧಿಯ ಪರವಾಗಿ ನಿಂತಿತ್ತು. ಇಂದಿರಾ ಗಾಂಧಿ ಎಷ್ಟು ಪ್ರಸಿದ್ಧರಾಗಿದ್ದರೆಂದರೆ ಅವರೆಂದಿಗೂ ಚುನಾವಣೆಯಲ್ಲಿ ಸೋಲಲ್ಲ ಎಂಬ ಭಾವನೆ ಇತ್ತು. ‘ಇಂಡಿಯಾ ಇಸ್ ಇಂದಿರಾ, ಇಂದಿರಾ ಇಸ್ ಇಂಡಿಯಾ’ ಎಂಬ ಮಾತು ದೇಶಾದ್ಯಂತ ಕೇಳಿ ಬರುತ್ತಿತ್ತು. ಆದರೆ, 1975ರಲ್ಲಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಸಂಪೂರ್ಣ ಸ್ಥಿತಿಯನ್ನೇ ಬದಲಾಯಿಸಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕರ ಬಂಧನದ ಬಳಿಕ ಬಿಜೆಪಿಗೆ 30 ಕೋಟಿ ರೂ. ಚುನಾವಣಾ ಬಾಂಡ್‌ ನೀಡಿದ್ದ ಅರಬಿಂದೋ ಫಾರ್ಮಾ

ಜನರಲ್ಲಿ ಇಂದಿರಾ ಗಾಂಧಿ ವಿರುದ್ಧ ಎಷ್ಟು ಆಕ್ರೋಶವಿತ್ತು ಎಂಬುವುದಕ್ಕೆ ಅವರು ಚುನಾವಣೆಯಲ್ಲಿ ಸೋತಿರುವುದೇ ಸಾಕ್ಷಿ. ಅಂದರೆ, ಭಾರತೀಯರು ಯಾರನ್ನು ಬೇಕಾದರೂ ಅತೀ ಶೀಘ್ರವಾಗಿ ತಲೆ ಮೇಲೆ ಕೂರಿಸುತ್ತಾರೆ. ಆದರೆ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾದರೆ ಅಷ್ಟೇ ತ್ವರಿತವಾಗಿ ತಲೆಯಿಂದ ಇಳಿಸಿ ಕಾಲಡಿ ಇಡುತ್ತಾರೆ ಎನ್ನುವುದು ಮಾತ್ರ ಸ್ಪಷ್ಟ.

ಒಂದು ತಪ್ಪು ನಿರ್ಧಾರ: ಚುನಾವಣೆಯಲ್ಲಿ ಹೀನಾಯ ಸೋಲು

ಡಿಸೆಂಬರ್ 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ನಿರ್ಣಾಯಕ ವಿಜಯವು ವಿಶ್ವದ ಇತಿಹಾಸದಲ್ಲೇ ಇಂದಿರಾ ಗಾಂಧಿಯವರ ಅತೀ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ಇಂದಿರಾ ಗಾಂಧಿಯವರ ಪ್ರಸಿದ್ಧಿ ಎಷ್ಟು ಹೆಚ್ಚಾಗಿತ್ತೆಂದರೆ ಕಾಂಗ್ರೆಸ್ ಇನ್ನೆಂದಿಗೂ ಸೋಲದು ಎಂಬ ಭಾವನೆ ಇತ್ತು. ಆದರೆ, ಐದು ವರ್ಷಗಳಲ್ಲೇ ಇಂದಿರಾ ಗಾಂಧಿಯವರಿಗೆ ಸೋಲು ಎದುರಾಯಿತು.

1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಉಳಿದಂತೆ ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ಪರಾಭವಗೊಂಡಿತ್ತು. ದಕ್ಷಿಣದಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿತ್ತು. ಕಾಂಗ್ರೆಸ್‌ ಹೀನಾಯ ಸೋಲಿಗೆ ಇಂದಿರಾ ಘೋಷಿಸಿದ್ದ ತುರ್ತು ಪರಿಸ್ಥಿತಿಯೇ ಕಾರಣವಾಗಿತ್ತು. ಒಂದು ತಪ್ಪು ಎಷ್ಟೊಂದು ಪರಿಣಾಮ ಬೀರುತ್ತದೆ ಎಂದು ನಮ್ಮ ಇತಿಹಾಸ ಹೇಳಿದರೂ ಇಂದು ಆಡಳಿತದಲ್ಲಿರುವ ಬಿಜೆಪಿಯು ಪುನಃ ಅದೇ ತಪ್ಪನ್ನು ಮಾಡುತ್ತಿದೆ.

ಇದನ್ನು ಓದಿದ್ದೀರಾ?  ಬಾಂಡ್ ದಂಧೆ | ಬಿಜೆಪಿಗೆ 12,930 ಕೋಟಿ ರೂ ದೇಣಿಗೆ, ಕೇಸರಿ ಪಕ್ಷದ ಚಂದಾ ಅಭಿಯಾನಗಳ ಪಟ್ಟಿ!

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಪಕ್ಷ ನಾಯಕರುಗಳು ಜೈಲು ಸೇರಿದ್ದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಭಯಪಡುತ್ತಿದ್ದರು. ಆದರೆ, ಚುನಾವಣೆ ಘೋಷಿಸಿದ ಬಳಿಕ ಜನರೇ ಉತ್ತರವನ್ನು ನೀಡಿದ್ದರು. ಬಾಬು ಜಗಜೀವನ್ ರಾಮ್ ಸೇರಿದಂತೆ ಇತರೆ ನಾಯಕರುಗಳು ಕಾಂಗ್ರೆಸ್ ತೊರೆದರು. ಇಂದಿರಾ ಗಾಂಧಿ ಅವರ ಸೋದರತ್ತೆ ವಿಜಯಲಕ್ಷ್ಮಿ ಪಂಡಿತ್ ಕೂಡಾ ಕಾಂಗ್ರೆಸ್ ತೊರೆದಿದ್ದರು.

ತುರ್ತು ಪರಿಸ್ಥಿತಿ: ಬಿಜೆಪಿ ಇತಿಹಾಸ ನೆನಪಿಸಿಕೊಳ್ಳಬೇಕು

ಈ ಇತಿಹಾಸವನ್ನು ತಿಳಿದಿದ್ದರೂ ಕೂಡಾ ಕೇಂದ್ರದಲ್ಲಿರುವ ಬಿಜೆಪಿಯು ಇದೇ ರೀತಿಯ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. ಇಂದಿರಾ ಗಾಂಧಿ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ, ಈಗ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡದೆಯೇ ಜಾರಿಯಲ್ಲಿಡಲಾಗಿದೆ. ಘೋಷಿತ ತುರ್ತು ಪರಿಸ್ಥಿತಿಗಿಂತ ಈ ಅಘೋಷಿತ ತುರ್ತು ಪರಿಸ್ಥಿತಿಯು ಗಂಭೀರವಾಗಿದೆ.

ಪ್ರಸ್ತುತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ದೆಹಲಿಯ ಸಚಿವರುಗಳಿಗೆ ಸ್ವತಂತ್ರವಾಗಿ ಓಡಾಟ ನಡೆಸುವ ಅವಕಾಶವನ್ನು ಕೂಡಾ ನೀಡಲಾಗುತ್ತಿಲ್ಲ. ಅರವಿಂದ್ ಕೇಜ್ರಿವಾಲ್‌ ಅವರ ಪತ್ನಿಯನ್ನು ಭೇಟಿಯಾಗುವ ಅವಕಾಶವನ್ನು ನೀಡಲಾಗುತ್ತಿಲ್ಲ. ಈಗ ನಮಗೆ 1975ರ ತುರ್ತು ಪರಿಸ್ಥಿತಿ ನೆನಪಿಗೆ ಬರುತ್ತದೆ.

ಅರವಿಂದ್ ಕೇಜ್ರಿವಾಲ್‌ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಈಗ ಜೈಲಿನಲ್ಲಿದ್ದಾರೆ. ಅವರು ತಪ್ಪು ಮಾಡಿರಬಹುದು ಅಥವಾ ಮಾಡದೆಯೂ ಇರಬಹುದು. ಅದು ಬೇರೆ ವಿಚಾರ. ಆದರೆ ಅವರ ಪತ್ನಿ ಏನಾದರೂ ತಪ್ಪು ಮಾಡಿದ್ದಾರಾ? ಕೇಜ್ರಿವಾಲ್‌ ಅವರ ಪತ್ನಿಯನ್ನು ಇತರೆ ಎಎಪಿ ನಾಯಕರುಗಳು ಭೇಟಿಯಾಗಲು ಯಾಕೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ.

ಇದನ್ನು ಓದಿದ್ದೀರಾ?  ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ – ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು

ಒಟ್ಟಿನಲ್ಲಿ ಕಳೆದ ಹತ್ತು ವರ್ಷದಲ್ಲಿ ನಾವು ನಡೆಸಿದ ಕೆಟ್ಟ ಆಡಳಿತದಿಂದಾಗಿ ಚುನಾವಣೆಯಲ್ಲಿ ಗೆಲುವು ನಮ್ಮ ಕೈಜಾರಿ ಹೋಗುತ್ತಿದೆ ಎಂಬುವ ಭಯ ಬಿಜೆಪಿಗೆ ಇದೆ. ವಿಪಕ್ಷಗಳೇ ಇಲ್ಲದಿದ್ದರೆ ನಮ್ಮ ಗೆಲುವು ಖಚಿತ ಎಂದು ಈಗ ವಿಪಕ್ಷಗಳನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ. ಆದರೆ ವಿಪಕ್ಷಗಳೇ ಇಲ್ಲದೆ ಚುನಾವಣೆಯನ್ನು ಗೆಲುವುದು ಯಾವ ಪ್ರಜಾಪ್ರಭುತ್ವವಾಗುತ್ತದೆ?

1977ರಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾದಾಗ ಇಂದಿರಾಗಾಂಧಿ ಸೋಲು ಕಂಡರು. ಆದರೆ ಒಂದು ಸಹಾನೂಭೂತಿಯ ಅಲೆ ಅವರ ಪರವಾಗಿ ಇತ್ತು. ಕೇವಲ ಮೂರು ವರ್ಷದಲ್ಲೇ ಜನತಾ ಪಕ್ಷದ ಸರ್ಕಾರ ಕುಸಿದು ಬಿತ್ತು, ಮತ್ತೆ ಕಾಂಗ್ರೆಸ್ ಆಡಳಿತದ ಚುಕ್ಕಾಣಿಯನ್ನು ಪಡೆಯಿತು.

ಬಿಜೆಪಿಯನ್ನು ಸೋಲಿನತ್ತ ಸೆಳೆಯುತ್ತಿರುವ ಬಾಂಡ್

ಒಂದೆಡೆ ವಿಪಕ್ಷಗಳು ಬಿಜೆಪಿಯನ್ನು ವಿರೋಧಿಸಿ ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದರೆ ಇನ್ನೊಂದೆಡೆ ಬಿಜೆಪಿಯಲ್ಲಿಯೇ ಇರುವ ಹಿಂದುಳಿದ ವರ್ಗದ ನಾಯಕರುಗಳು ಮುಂದಿನ ದಿನಗಳಲ್ಲಿ ನಮ್ಮ ಜಾತಿಯೇ ಗುರಿಯಾಗಬಹುದು ಎಂಬ ಆತಂಕದಲ್ಲಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಎಷ್ಟು ವಿಪಕ್ಷಗಳ ಮೇಲೆ ಇಡಿ, ಸಿಬಿಐ, ಐಟಿ ದಾಳಿ ನಡೆಸುತ್ತದೆಯೋ ಅಷ್ಟು ಸೋಲಿನ ಬುತ್ತಿ ತುಂಬುತ್ತದೆ ಎಂಬುವುದು ಖಚಿತ. ಬಿಜೆಪಿಯನ್ನು ಚುನಾವಣಾ ಬಾಂಡ್‌ ದಂಧೆ ಕೂಡಾ ಸೋಲಿನತ್ತ ಸೆಳೆಯುತ್ತಿದೆ.

ಒಡಿಶಾದಲ್ಲಿ ಬಿಜೆಡಿಯು ಬಿಜೆಪಿಯೊಂದಿಗೆ ಮೈತ್ರಿಗೆ ಒಪ್ಪಿಲ್ಲ. ಪಂಜಾಬ್‌ನಲ್ಲಿ ಅಕಾಲಿದಳ ಬಿಜೆಪಿಯ ಮೈತ್ರಿ ತೊರೆದಿದೆ. ಜನತಾದಳ ಯುನೈಟೆಡ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೂಡಾ ಜನತಾದಳ ಯುನೈಟೆಡ್‌ನ ಪ್ರಭಾವಿ ನಾಯಕರುಗಳು ಪಕ್ಷ ತೊರೆಯುತ್ತಿದ್ದಾರೆ. ಜೆಡಿಯು ನಾಯಕಿ ಬಿಮಾ ಭಾರತಿ ಆರ್‌ಜೆಡಿ ಸೇರಿದ್ದಾರೆ. ಈ ರೀತಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಧ್ರುವೀಕರಣ ಆಗುತ್ತಿದೆ, ಬಿಜೆಪಿಯ ಶಕ್ತಿ ಕುಗ್ಗುತ್ತಿದೆ.

ಈ ನಡುವೆ ಇಂಡಿಯಾ ಮೈತ್ರಿಕೂಟದ ಶಕ್ತಿ ಹೆಚ್ಚಾಗುತ್ತಿದೆ. ಬಿಜೆಪಿಯ ಹಲವು ಸಂಸದರು ತಾವಾಗಿಯೇ ಚುನಾವಣೆಯಿಂದ ದೂರ ಸರಿದಿದ್ದಾರೆ. ವಿಪಕ್ಷಗಳು ಪರಸ್ಪರ ಬೆಂಬಲ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಈಗ ಕೇಂದ್ರದಲ್ಲಿರುವ ಬಿಜೆಪಿಯು ವಿಪಕ್ಷಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ಹೆಚ್ಚಿಸಿದಷ್ಟು ಎಲ್ಲ ಮನಸ್ತಾಪ ಬದಿಗಿಟ್ಟು ವಿಪಕ್ಷಗಳು ಒಂದಾಗುತ್ತವೆ. ಇದರಿಂದಾಗಿ ಬಿಜೆಪಿಗೆ ಲಾಭವಾಗದಿದ್ದರೂ ನಷ್ಟ ಖಂಡಿತ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, ನಾಲ್ಕು ವರ್ಷಗಳ ಅನುಭವ. ರಾಜಕೀಯ, ಬ್ಯುಜಿನೆಸ್‌ ಸುದ್ದಿಯಲ್ಲಿ ಆಸಕ್ತಿ, ಹಿಡಿತ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇದಾರನಾಥ | ಗಿರಗಿರನೆ ತಿರುಗಿ ತುರ್ತು ಭೂಸ್ಪರ್ಶಗೈದ ಹೆಲಿಕಾಪ್ಟರ್‌: ಪಾರಾದ ಯಾತ್ರಿಕರು; ವಿಡಿಯೋ ವೈರಲ್‌

ಕೇದಾರನಾಥ ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್ ದೂರದಲ್ಲೇ ತಾಂತ್ರಿಕ ದೋಷದಿಂದಾಗಿ 7...

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭ: ಸಚಿವ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು...

ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು: ಆಹಾರ ಗುಣಮಟ್ಟ ಇಲಾಖೆ ದಾಳಿ

ಬೆಂಗಳೂರು ಮೂಲದ ಹೋಟೆಲ್‌ ರಾಮೇಶ್ವರಂ ಕೆಫೆ ಹೈದರಾಬಾದ್‌ನ ಮೇದಾಪುರ್‌ ಶಾಖೆಯ ಮೇಲೆ...