ಉತ್ತರ ಪ್ರದೇಶದ ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಪಿಲಿಭಿತ್ ಕ್ಷೇತ್ರದಿಂದ ಟಿಕೆಟ್ ಕೊಡಲು ಬಿಜೆಪಿ ನಿರಾಕರಿಸಿದೆ. ಈ ಬೆನ್ನಲ್ಲೇ ಅವರನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ. “ವರುಣ್ ಗಾಂಧಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ನಾವು ತುಂಬಾ ಸಂತೋಷಪಡುತ್ತೇವೆ” ಎಂದು ಹೇಳಿದ್ದಾರೆ.
“ವರುಣ್ ಗಾಂಧಿ ಉತ್ತಮ ವ್ಯಕ್ತಿತ್ವ ಹೊಂದಿರುವ ಪ್ರಬಲ ನಾಯಕ ಮತ್ತು ಗಾಂಧಿ ಕುಟುಂಬದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದಾಗಿ ಬಿಜೆಪಿಯು ವರುಣ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಿಲ್ಲ. ಅವರು ಕಾಂಗ್ರೆಸ್‌ಗೆ ಬರಬೇಕೆಂದು ನನಗೆ ಅನಿಸುತ್ತದೆ. ನಮಗೆ ಅದರಿಂದ ಸಂತೋಷವಾಗುತ್ತದೆ” ಎಂದು ಚೌಧರಿ ಹೇಳಿದರು.
ಇದನ್ನು ಓದಿದ್ದೀರಾ? ಅಘೋಷಿತ ತುರ್ತು ಪರಿಸ್ಥಿತಿ: ಪ್ರಧಾನಿ ಮೋದಿಗೆ ಸೋಲು ಕಟ್ಟಿಟ್ಟ ಬುತ್ತಿ?
ಪಿಲಿಭಿತ್ ಲೋಕಸಭೆ ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿರುವ ವರುಣ್ ಗಾಂಧಿ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಅವರ ಬದಲಾಗಿ ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ವರುಣ್ ಗಾಂಧಿಯ ತಾಯಿ ಮೇನಕಾ ಗಾಂಧಿಗೆ ಸುಲ್ತಾನಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಲಾಗಿದೆ.
ಮನ್‌ಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ಜಿತಿನ್ ಪ್ರಸಾದ್, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅದಾದ ಬಳಿಕ ಎರಡು ವರ್ಷಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದು, 2021ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ವರುಣ್ ಗಾಂಧಿ ಬಿಜೆಪಿಯ ಸಂಸದರಾದರೂ ಕೂಡಾ ಮೋದಿ ಸರ್ಕಾರದ ವಿರುದ್ಧವೇ ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ವರುಣ್ ಗಾಂಧಿಗೆ ಟಿಕೆಟ್ ತಪ್ಪುತ್ತಿದ್ದಂತೆ ಇತ್ತ ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷವೂ ಕೂಡಾ ‘ವರುಣ್ ಗಾಂಧಿಗಾಗಿ ತಮ್ಮ ಪಕ್ಷದ ಬಾಗಿಲು ತೆರೆದಿದೆ’ ಎಂದು ಹೇಳಿದೆ.
ಸಂಜಯ್ ಗಾಂಧಿಯ ಪುತ್ರ ವರುಣ್ ಗಾಂಧಿ 2009ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. 2014ರಲ್ಲಿ ಸುಲ್ತಾನಪುರದಲ್ಲಿ ಸ್ಪರ್ಧಿಸಿ ಜಯಿಸಿದ್ದಾರೆ. ಆದರೆ ಈ ಬಾರಿ ಈ ಕ್ಷೇತ್ರದ ಟಿಕೆಟ್ ಅನ್ನು ವರುಣ್ ಗಾಂಧಿಯ ತಾಯಿ ಮೇನಕಾ ಅವರಿಗೆ ನೀಡಲಾಗಿದೆ.