ಇತ್ತೀಚೆಗೆ, ತುಮಕೂರು ಜಿಲ್ಲೆಯ ಕೋರಾ ಪೋಲೀಸ್ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯ ಬಳಿ ಕಾರಿನೊಳಗೆ ಮೂವರನ್ನು ಸುಟ್ಟು ಹಾಕಿದ ಅಮಾನುಷ ಕೃತ್ಯವನ್ನು ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು ಖಂಡಿಸಿದೆ. ಇದೊಂದು ಸಮಾಜವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿದ್ದು, ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಸರ್ಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು, “ಮಾರ್ಚ್ 22ರಂದು ತುಮಕೂರು ಜಿಲ್ಲೆಯ ಕೋರಾ ಪೋಲೀಸ್ ಠಾಣೆಯ ವ್ಯಾಪ್ತಿಯ ಕುಚ್ಚಂಗಿ ಕೆರೆಯ ಬಳಿ ಕಾರಿನೊಳಗೆ ಅಮಾಯಕ ವ್ಯಕ್ತಿಗಳ ಬರ್ಬರ ಹತ್ಯೆ ಹಾಗೂ ಮೃತದೇಹಗಳನ್ನು ಕಾರಿನೊಳಗೆ ಸುಟ್ಟು ಹಾಕಿದ ಅಮಾನುಷ ಘಟನೆ ನಡೆದಿದೆ. ಈ ಘಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಶಾಹುಲ್ ಹಮೀದ್ (45 ವರ್ಷ), ಮದ್ದಡ್ಕ ನಿವಾಸಿ ಇಸಾಕ್ ( 54 ವರ್ಷ) ಮತ್ತು ಶಿರ್ಲಾಲು ನಿವಾಸಿ ಸಿದ್ದಿಕ್ (34 ವರ್ಷ) ಎಂಬ ಮೂವರು ಅಮಾಯಕ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇದು ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿದೆ” ಎಂದಿದೆ.
“ಮಾರ್ಚ್ 22ರಂದು ಈ ಘಟನೆ ಬೆಳಕಿಗೆ ಬಂದಂತೆ ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಎಸ್ಪ್ರೆಸ್ಸೋ ಕಾರೊಂದು ಸುಟ್ಟ ಸ್ಥಿಯಲ್ಲಿ ಕಂಡು ಬಂದಿದೆ. ಈ ಕಾರಿನ ಡಿಕ್ಕಿಯಲ್ಲಿ 2 ಮೃತದೇಹಗಳು ಹಾಗೂ ಮದ್ಯ ಸೀಟಿನಲ್ಲಿ ಒಂದು ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಗಳಾದ ತುಮಕೂರಿನ ಶೀರಾ ಗೇಟ್ ಬಳಿ ನಿವಾಸಿ ಪಾತರಾಜು ಅಲಿಯಾಸ್ ರಾಜು ಹಾಗೂ ಸತ್ಯಮಂಗಲದ ನಿವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ” ಎಂದು ಮಾಹಿತಿ ನೀಡಿದೆ.
“ಕೊಲೆಗೀಡಾದ ದುರ್ದೈವಿಗಳಿಗೆ ನಿಧಿ / ಬಂಗಾರ ಕೊಡಿಸುವ ಆಸೆಗೆ ಬೀಳಿಸಿದ ಪಾತರಾಜು ಸುಮಾರು ₹6 ಲಕ್ಷ ಹಣ ಪಡೆದು, ಮರಳಿ ಹಣ ನೀಡದೆ ವಂಚನೆ ಮಾಡಿದ್ದಾರೆ. ಹಣ ನೀಡದೇ ಇದ್ದರೆ ಪೋಲೀಸ್ ಕೇಸು ದಾಖಲಿಸುವುದಾಗಿ ಮೃತ ದುರ್ದೈವಿಗಳು ಹೇಳಿದ್ದಾರೆ. ಬೆದರಿಕೆ ಹಾಕಿದ ಕಾರಣ ಕೊಲೆ ಮಾಡುವ ಉದ್ದೇಶದಿಂದ, ತನ್ನ ಪರಿಚಯದ ಸತ್ಯಮಂಗಳದ ನಿವಾಸಿ ಗಂಗರಾಜು ಮತ್ತು ಆತನ 6 ಜನ ಸಹಚಚರಾದ ಪುಟ್ಟ ಸ್ವಾಮಯ್ಯನ ಪಾಳ್ಯದ ಮಧುಸೂದನ್ (24 ವರ್ಷ), ಸಂತೇಪೇಟೆಯ ನವೀನ್ (24 ವರ್ಷ) , ವೆಂಕಟೇಶಪುರದ ಕೃಷ್ಣ (22 ವರ್ಷ), ಹೊಂಬಯ್ಯನ ಪಾಳ್ಯದ ಗಣೇಶ (19 ವರ್ಷ), ನಾಗಣ್ಣ ಪಾಳ್ಯದ ಕಿರಣ್(23 ವರ್ಷ), ಕಾಳಿದಾಸನಗರದ ಸೈಮನ್ (18 ವರ್ಷ) ಸೇರಿಕೊಂಡು 3 ಜನರನ್ನು ಕೊಲೆ ಮಾಡಿದ್ದಾರೆ” ಎಂದು ವಿವರ ನೀಡಿದೆ.
“3 ಕೆ.ಜಿ ಚಿನ್ನವನ್ನು ಕೊಡುವೂದಾಗಿ ಆಮಿಷ ಒಡ್ಡಿ, ಹಿಂದಿನ ದಿನ ಸಂಚು ರೂಪಿಸಿ ಮಾರ್ಚ್ 22ರ ಮದ್ಯರಾತ್ರಿ 12 ಸುಮಾರಿಗೆ ಮೃತರನ್ನು ಚಿನ್ನ ಕೊಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡಿದ್ದಾರೆ. ಅವರುಗಳನ್ನು ಮಚ್ಚು, ಲಾಂಗ್, ಮತ್ತು ಡ್ರಾಗನ್ ಜಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮೃತರು ಹೋಗಿದ್ದ ಕಾರಿನ ಡಿಕ್ಕಿ ಮತ್ತು ಮದ್ಯ ಸೀಟಿಗೆ ತುಂಬಿಸಿಕೊಂಡು ಕುಚ್ಚಂಗಿಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ ನಾಶಪಡಿಸುವ ಉದ್ದೇಶದಿಂದ ಕಾರಿನೊಂದಿಗೆ ಸುಟ್ಟಿದ್ದಾರೆ” ಎಂದು ಪೋಲೀಸ್ ತನಿಖೆಯಿಂದ ತಿಳಿದುಬಂದಿದೆ.
“ಇದೊಂದು ಸಮಾಜವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿದ್ದು, ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಸರ್ಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದೆ.
ಈ ಘಟನೆಯಲ್ಲಿ ಹತ್ಯೆಗೀಡಾಗಿ ಅಮಾನುಷವಾಗಿ ಸುಟ್ಟು ಕರಕಲಾದ ಶಾಹುಲ್ ಹಮೀದ್ ಎಂಬವರು ಬಡ ಜೀವಿಯಾಗಿದ್ದು, ಸಮಾಜಮುಖಿ ಕಾರ್ಯಗಳಿಗಾಗಿ ಸದಾ ತನ್ನನ್ನು ತೊಡಗಿಸಿಕೊಂಡವರು. ಶಾಹುಲ್ ಹಮೀದ್ ಅವರು ಹತ್ತು ಜನರಿಗೆ ಮಾರ್ಗದರ್ಶಿಯಾಗಿರುವವರು. ಅದೇ ರೀತಿ ಇಸಾಕ್ ತಾನೊಬ್ಬ ವಿದೇಶಿ ಕೆಲಸದಲ್ಲಿದ್ದು ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದರು.
ನಿಧಿ ಆಮಿಷಕ್ಕೆ ಒಳಪಟ್ಟು ಅಮಾನುಷವಾಗಿ ಹತ್ಯೆ ಆಗಿರುವೂದು ನಂಬಲಸಾದ್ಯವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕು.
ಈ ಸುದ್ದಿ ಓದಿದ್ದೀರಾ? 5, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ‘ಬೋರ್ಡ್ ಪರೀಕ್ಷೆ’ ಎಂದು ಕರೆಯಲಾಗುವುದಿಲ್ಲ: ಹೈಕೋರ್ಟ್
ಆಗ್ರಹ
- ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗಳಾದ ಸಿಬಿಐಗೆ ವಹಿಸಬೇಕು.
- ಈ ಕೃತ್ಯದಲ್ಲಿ ಮಡಿದ ಬಡ ಜೀವಗಳ ಕಟುಂಬ ಅಥವಾ ಮಕ್ಕಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
- ಆರೋಪಿಯೂ ಅಮಾಯಕ ಮೃತರಿಂದ ನಿಧಿ ಹುಡುಕಿ ಕೊಡುವ ಸಲುವಾಗಿ ₹6,00,000 ಹಣ ಪಡಕೊಂಡ ಬಗ್ಗೆ ಆರೋಪಿ ಸ್ವ ಇಚ್ಚಾ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ, ಈ ಮೊತ್ತವು ಐವತ್ತು ಲಕ್ಷಕ್ಕೂ ಹೆಚ್ಚಿನ ಹಣವನ್ನು ಆರೋಪಿತರು ಲೂಟಿ ಮಾಡಿದ ಬಗ್ಗೆ ಸಂಶಯ ಇದೆ. ಮೃತ ದುರ್ದೈವಿ ಇಸಾಕ್ ಒಬ್ಬರೇ ₹35,00,000 ಹಣವನ್ನು ಮನೆ ಸಾಲ ಮತ್ತು ಒಡವೆ ಒತ್ತೆ ಇಟ್ಟು ತೆಗೆದುಕೊಂಡ ಹೋದ ಬಗ್ಗೆ ಮೃತ ಇಸಾಕ್ ಪತ್ನಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆದರೆ ಮಾತ್ರ ಇನ್ನಷ್ಟು ಸತ್ಯ ಹೊರ ಬೀಳಲಿದೆ. ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುತ್ತಿದ್ದೇವೆ. ಹಣ ಆಸ್ತಿ ಕಳೆದುಕೊಂಡ ಮೃತರಿಗೆ ಸೂಕ್ತ ಪರಿಹಾರ ಒದಗಿಸಬೇಕು.
- ಆರೋಪಿಗಳೆಲ್ಲರನ್ನು ಶೀಘ್ರ ಬಂಧಿಸಿ, ಕೃತ್ಯಕ್ಕೂ ಮೊದಲು ಆರೋಪಿತರು ನಡೆಸಿದ ಮೋಸ, ವಂಚನೆ, ಹಾಗೂ ಮೃತರ ಮನೆಗಳಿಗೆ ಬೇಟಿ ನೀಡಿ ಮೃತರೊಂದಿಗೆ ನಡೆಸಿದ ಸಂಬಂಧದ ಕುರಿತು ಹಾಗೂ ಆರೋಪಿತರ ಜಾಲದ ಬೇರುಗಳ ಬಗ್ಗೆ ಸೂಕ್ತ ತನಿಖೆ ಆಗಬೇಕು.
- ಕೃತ್ಯದಲ್ಲಿ ಭಾಗಿ ಆದವರೂ, ಆರೋಪಿತರಿಗೆ ಸಹಕರಿಸದವರೂ, ಹಾಗೂ ಅಮಾಯಕ 3 ಜನರನ್ನು ನಂಬಿಸಿ ಈ ನಿಧಿ,ಆಸೆಯ ಜಾಲಕ್ಕೆ ಪರಿಚಯಿಸಿದ ವ್ಯಕ್ತಗಳ ಬಗ್ಗೆಯೂ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುಬೇಕು. ಈ ಕೃತ್ಯದ ಹಿಂದಿರುವ ಸಂಪೂರ್ಣ ತಂಡವನ್ನು ಬಂಧಿಸಬೇಕು.
- ತುಮಕೂರು ಭಾಗಗಳಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಈ ರೀತಿ ಜಾಲದ ಮೋಸದಿಂದಾಗಿ ಅಮಾಯಕರು, ಹಣ ಮತ್ತು ಪ್ರಾಣವನ್ನು ಕಳೆದುಕೊಂಡ ಬಗ್ಗೆ ಕೇಳಿ ಬರುತ್ತಿದ್ದು, ಇದೊಂದು ಪೋಲೀಸ್ ಇಲಾಖೆ ಮತ್ತು ಸರ್ಕಾರದ ವೈಫ್ಯಲ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿ ಇಂತಹಾ ಜಾಲಗಳ ಹಿಂದಿರುವ ಎಲ್ಲ ವ್ಯಕ್ತಿಗಳನ್ನು ಬಂಧಿಸಬೇಕು ಹಾಗೂ ಸೂಕ್ತ ಜಾಗೃತಿ ಕ್ರಮ ಕೈಗೊಳ್ಳಬೇಕು.