“ಕಳೆದ ಮಾರ್ಚ್ 27ರಂದು ದಿಂಗಾಲೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಟಿ ಮಾಡಿದ ಮರುದಿನ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದಿದ್ದರು. ಈಗ ಮಾರ್ಚ್ 29ರಂದು, “ನಾನು(ಮಲ್ಲಿಕಾರ್ಜುನ ಸ್ವಾಮೀಜಿ) 28ರಂದು ಹೇಳಿದ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ” ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿಗಳು ಪತ್ರಿಕಾ ಪ್ರಕಟಣೆಗೆ ಕಳುಹಿಸಿದ ವಿಡಿಯೋವೊಂದರಲ್ಲಿ ಮಾತನಾಡಿ, “ನಿನ್ನೆ ನಾಲ್ಕೈದು ಮಂದಿ ನಮ್ಮ ಮಠಕ್ಕೆ ಬಂದು, ತಾವೇ ಒಂದು ಪತ್ರಿಕಾ ಪ್ರಕಟಣೆಯ ಪತ್ರವನ್ನು ಟೈಪ್ ಮಾಡಿಸಿಕೊಂಡು ನನ್ನ ಕೈಗೆ ಕೊಟ್ಟು ಒತ್ತಾಯವಾಗಿ ನನ್ನಿಂದ ಸಹಿ ಹಾಕಿಸಿಕೊಂಡಿದ್ದಾರೆ. ಅವರು ಟೈಪ್ ಮಾಡಿಸಿ ತಂದಿದ್ದ ಪತ್ರವನ್ನು ಓದುವ ಸಂದರ್ಭದಲ್ಲಿ ವಿಡಿಯೋವನ್ನು ಮಾಡಿ ತಾವೇ ಪತ್ರಿಕೆ ಪ್ರಕಟಣೆಗೆ ನೀಡಿ, ಮುರುಘಾಮಠಕ್ಕೂ ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಪ್ರಕಟಿಸಿ, ಪ್ರಚಾರ ಮಾಡಿದ್ದಾರೆ ಮತ್ತು ಒತ್ತಾಯಪೂರ್ವಕವಾಗಿ ನೀಡಿದ ಹೇಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ಹಿಂಪಡೆಯುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಯಾವುದೇ ಧರ್ಮವು ಮನುಷ್ಯನಲ್ಲಿ ಪ್ರೀತಿಯ ಗುಣ ಬೆಳೆಸುತ್ತದೆ: ರಿಯಾಝ್ ಅಹ್ಮದ್ ರೋಣ
ಇನ್ನು ವಿಚಾರವಾಗಿ ಪ್ರಲ್ಹಾದ್ ಜೋಶಿ ಬಲಗೈ ಶಕ್ತಿಯಾಗಿರುವ ಈರೇಶ ಅಂಚಟಗೇರಿ ಅವರು ತಾವೇ ಪತ್ರಿಕಾ ಪ್ರಕಟಣೆಯ ಪತ್ರಿಕೆಯನ್ನು ಟೈಪ್ ಮಾಡಿಸಿ, ಮಲ್ಲಿಕಾರ್ಜುನ ಸ್ವಾಮಿಗಳಿಂದ ಒತ್ತಾಯಪೂರ್ವಕವಾಗಿ ಓದಿಸಿ, ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಮತ್ತು ಪತ್ರಿಕೆಗಳಲ್ಲಿ ಬರುವಂತೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿದ್ದಾರೆಂದು ಮುರುಘಾಮಠದ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.