ಭಾರತದ ಸಂವಿಧಾನ ಬದಲಿಸಲು, ಮನುಸ್ಮೃತಿಯನ್ನು ಹೇರಲು ಹವಣಿಸುತ್ತಿರುವ ಕೋಮುವಾದಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಮಂಡ್ಯ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಹೇಳಿವೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬೆಂಬಲ ಘೋಷಿಸಿವೆ.
ಮಂಡ್ಯದಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ, ಜೆಡಿಎಸ್ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರಿಗೆ ತಮ್ಮ ಬೆಂಬಲವಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, “ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಲೋಕಸಭಾ ಚುನಾವಣೆ ಕೊನೆಯ ಅವಕಾಶವಾಗಿದೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದು ಒಂದೇ, ಮಂಡ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಗೆಲ್ಲುವುದು ಒಂದೇ. ಏಕೆಂದರೆ ಪ್ರಧಾನಿ ಮೋದಿ ಕೋಮುವಾದಿಯಾದರೆ, ಕುಮಾರಸ್ವಾಮಿ ಕೋಮುವಾದಿ ಮನಸ್ಥಿತಿ ಜೊತೆಗೆ ಜಾತಿವಾದಿಯಾಗಿದ್ದಾರೆ” ಎಂದು ಕಿಡಿಕಾರಿದರು.
“2013ರಲ್ಲಿ ಸಿದ್ದರಾಮಯ್ಯ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ ಕುಮಾರಸ್ವಾಮಿ ಅಕ್ಕಿ ಜೊತೆಗೆ ಕ್ವಾಟರ್ ಬಾಟಲ್ ನೀಡಿಬಿಡಿ. ನೀವು ಜನರನ್ನು ಸೋಮಾರಿ ಮಾಡುತ್ತಿದ್ದೀರಿ ಎಂದಿದ್ದರು. ಶೋಷಿತರು ದುಡಿಯಲು ಹುಟ್ಟಿದ್ದಾರೆ ಎಂಬ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು” ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೇವೆ ಎಂದರು.
ಈ ಸುದ್ದಿ ಓದಿದ್ದೀರಾ?: ಕೋಲಾರ | ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ; ಗೌತಮ್‌ಗೆ ಕಾಂಗ್ರೆಸ್ ಟಿಕೆಟ್
“2022ರ ಡಿಸೆಂಬರ್‌ನಲ್ಲಿ ನಡೆದ ದಲಿತ ಸಂಘಟನೆಗಳ ಐಕ್ಯತಾ ಸಭೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಳಿವು ಉಳಿವಿನ ಪ್ರಶ್ನೆಯಾಗಿರುವ ಕೋಮುವಾದಿ ಶಕ್ತಿಯನ್ನು ಮಣಿಸಲು ನಿರ್ಣಯಿಸಿದ್ದೇವು. ಕಾಂಗ್ರೆಸ್‌ಗೆ ನಮ್ಮ ಸಹಕಾರ ಬೆಂಬಲ ಬೇಕೊ, ಬೇಡವೊ ಎಂಬುದು ಮುಖ್ಯವಲ್ಲ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ, ನಾಗರಿಕ ಹಕ್ಕುಗಳ ರಕ್ಷಣೆ ಹಾಗೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಕನಿಷ್ಠ ಬದ್ಧತೆ ತೋರಿರುವ ಕಾಂಗ್ರೆಸ್ ಪಕ್ಷವನ್ನು ಈಗ ಬೆಂಬಲಿಸುವುದು ಅಗತ್ಯವಾಗಿದೆ” ಎಂದರು.
ಸಭೆಯಲ್ಲಿ ವಿವಿಧ ದಲಿತ ಹಾಗೂ ಅಹಿಂದ ಸಂಘಟನೆಗಳ ಮುಖಂಡರಾದ ಪ್ರೊ.ಹುಲ್ಕೆರೆ ಮಹದೇವ್, ಎಲ್ ಸಂದೇಶ್, ಹಾರೋಹಳ್ಳಿ ಪ್ರಕಾಶ್, ಚಂದ್ರಶೇಖರ್, ಪ್ರಕಾಶ್ ಬ್ಯಾಡರಹಳ್ಳಿ, ಹಾಲಪ್ಪ, ದೇವರಾಜ್, ಗಂಗಾಧರ್, ಕೃಷ್ಣಪ್ರಸಾದ್, ರಾಜಶೇಖರ್, ರಾಮಂದೂರು ಸಿದ್ದರಾಜು, ಮುದ್ದಯ್ಯ, ರವಿಕುಮಾರ್, ಗೋವಿಂದರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.