ಸಿಎಸ್‌ಕೆ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ರನ್‌ಗಳ ಜಯಗಳಿಸಿತು. ಈ ಮೂಲಕ 2024ರ ಐಪಿಎಲ್ ಆವೃತ್ತಿಯಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ತಂಡ ಗೆಲುವಿನ ಖಾತೆ ತೆರೆಯಿತು.
ವಿಶಾಖಪಟ್ಟಣದ ಡಾ. ವೈ ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. 192 ರನ್‌ಗಳ ಗುರಿ ಪಡೆದ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಸೋಲು ಒಪ್ಪಿಕೊಂಡಿತು.
ಡೆವಿಡ್ ವಾರ್ನರ್ , ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಅಬ್ಬರ, ಪತಿರಾಣ ಅದ್ಬುತ ಕ್ಯಾಚ್, 42ನೇ ವಯಸ್ಸಿನಲ್ಲೂ ಅದ್ಭುತ ಆಟವಾಡಿದ ಧೋನಿ ಇವೆಲ್ಲವೂ ಅಭಿಮಾನಿಗಳ ಕಣ್ಣಿಗೆ ರಸದೌತಣ ನೀಡಿತು. ಕೊನೆಯ ಓವರ್‌ನಲ್ಲಿ ಸಿಕ್ಸರ್-ಬೌಂಡರಿ ಬಾರಿಸಿದ ಎಂಎಸ್‌ಡಿ ಒಂದೇ ಓವರ್‌ನಲ್ಲಿ 20 ರನ್ ಪೇರಿಸಿದರು.
ಸಿಎಸ್‌ಕೆ ಪರ ನಾಯಕ ರುತುರಾಜ್ 1 , ರಚಿನ್ ರವಿಂದ್ರ 2 , ಅಜಿಂಕ್ಯಾ ರಹಾನ್ 45 ರನ್, ಡೇರಿಲ್ ಮಿಚೆಲ್ 34 , ಶಿವಂ ದುಬೆ 18 , ರವೀಂದ್ರ ಜಡೇಜಾ 21 ರನ್ ಗಳಿಸಿದರೆ, 231 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಧೋನಿ 16 ಎಸೆತಗಳಲ್ಲಿ 37 ರನ್ ಬಾರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
ಇದಕ್ಕೂ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್ ಶುರು ಮಾಡಿದ ಡೆಲ್ಲಿ ತಂಡ ಸಿಎಸ್‌ಕೆ ಬೌಲರ್‌ಗಳನ್ನು ದಂಡಿಸಲು ಶುರು ಮಾಡಿದರು.
ಮೊದಲ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಜೋಡಿ 9.3 ಓವರ್‌ಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ದ ವಾರ್ನರ್ ಮತ್ತೊಂದು ಸ್ಫೋಟಕ ಹೊಡೆತಕ್ಕೆ ಮುಂದಾಗಿ ಮಥೀಶ ಪತಿರಾಣಗೆ ಕ್ಯಾಚ್ ನೀಡಿದರು. ಡೇವಿಡ್ ವಾರ್ನರ್ 35 ಚೆಂಡುಗಳಲ್ಲಿ 52 ರನ್ ಬಾರಿಸಿ ಔಟಾದರು.
ಇದರ ಬೆನ್ನಲ್ಲೇ ಪೃಥ್ವಿ ಶಾ ವಿಕೆಟ್ ಪತನಗೊಂಡಿತು ಕೇವಲ 27 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 43 ರನ್ ಸಿಡಿಸಿ ಶಾ ಪೆವಿಲಿಯನ್‌ಗೆ ತೆರಳಿದರು.
ಬಳಿಕ ಕಣಕ್ಕಿಳಿದ ನಾಯಕ ರಿಷಬ್ ಪಂತ್ ಬ್ಯಾಟಿಂಗ್ ಸಹ ಡೆಲ್ಲಿ ತಂಡದ ಕೈಹಿಡಿಯಿತು. 14 ದಿನಗಳ ಬಳಿಕ ಐಪಿಎಲ್ ಅಂಗಳದಲ್ಲಿ ಆಡುತ್ತಿರುವ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪಂತ್ 31 ಎಸೆತದಲ್ಲಿ 51 ರನ್ (3 ಸಿಕ್ಸರ್, 4 ಬೌಂಡರಿ) ಸಿಡಿಸಿದರು.
ಆರಂಭಿಕರು ಹಾಗೂ ಪಂತ್ ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿ ತಂಡದ ರನ್ ವೇಗದ ಗತಿಯೂ ಕಡಿಮೆಯಾಯಿತು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಬ್ಬರದಿಂದ ಡೆಲ್ಲಿ 191 ರನ್‌ಗಳ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ಚೆನ್ನೈ ಪರ ಮಥೀಶ ಪತಿರಾಣ 3 ವಿಕೆಟ್ ಕಬಳಿಸಿ ಮಿಂಚಿದರು. ರವೀಂದ್ರ ಜಡೇಜಾ ಹಾಗೂ ಮುಸ್ತಫಿಜೂರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
