“ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಂದಿನ ಸ್ಥಿತಿಯು ಕಾಂಗ್ರೆಸ್‌ಗೆ ಒಂದು ಜೀವನ ಪಾಠವಾಗಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಸಿಪಿಐಎಂ, ಕಾಂಗ್ರೆಸ್ ಸೇರಿ 18 ವಿಪಕ್ಷಗಳು ಭಾನುವಾರ (ಮಾರ್ಚ್ 31) ನವದೆಹಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಪ್ರತಿಭಟನೆ ನಡೆಸಿದೆ. ಇದಾದ ಒಂದು ದಿನದ ಬಳಿಕ ಕೇರಳ ಮುಖ್ಯಮಂತ್ರಿ ಪತ್ರಿಕಾಗೋಷ್ಠಿ ನಡೆಸಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ತನಿಖೆಗೆ ಆಗ್ರಹಿಸಿದ್ದ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ ದಿಕ್ಕು ತಪ್ಪಿಸಲು ಕೇಜ್ರಿವಾಲ್ ಬಂಧನ: ಪಿಣರಾಯಿ ವಿಜಯನ್
“ಕೇಜ್ರಿವಾಲ್ ಪ್ರಕರಣವು ಕಾಂಗ್ರೆಸ್‌ನ ದಾರಿಯ ಒಂದು ಉತ್ತಮ ಉದಾಹರಣೆಯಾಗಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪವಿದ್ದಾಗ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್ ಈ ಪ್ರಕರಣದಲ್ಲಿ ದೂರನ್ನು ಕೂಡಾ ದಾಖಲಿಸಿತ್ತು. ಇದರ ಪರಿಣಾಮವಾಗಿ ಈಗ ಇಡಿ ತನಿಖೆ ನಡೆಲಾಗುತ್ತಿದೆ” ಎಂದು ಹೇಳಿದರು.
“ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದ್ದು ಕೇಜ್ರಿವಾಲ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಕೇಜ್ರಿವಾಲ್ ಬಂಧನವಾಗುವವರೆಗೂ ಈ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತಿದೆ. ಈಗ ಕಾಂಗ್ರೆಸ್ ತನ್ನ ನಿಲುವನ್ನು ಬದಲಾಯಿಸಿದೆ. ಆದರೆ ಈಗ ಕಾಂಗ್ರೆಸ್ ತನ್ನ ಹಿಂದಿನ ನಿಲುವು ತಪ್ಪಾಗಿತ್ತು ಎಂದು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ವಿಜಯನ್ ತಿಳಿಸಿದರು.
