ಜ್ಞಾನವಾಪಿ ಮಸೀದಿಯ ‘ವ್ಯಾಸ್ ಥೇಹ್ಖಾನಾ’ನ ಒಳಗೆ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಜಿಲ್ಲಾ ನ್ಯಾಯಾಲಯ ಆದೇಶ ಎತ್ತಿ ಹಿಡಿದಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಜನವರಿ 17 ಮತ್ತು ಜನವರಿ 31ರ ದಿನಾಂಕದ ಆದೇಶದ ನಂತರ ಮುಸ್ಲಿಂ ಸಮುದಾಯವು ಜ್ಞಾನವಾಪಿ ಆವರಣದಲ್ಲಿ ನಮಾಜ್ ಸಲ್ಲಿಸಲು ಮುಂದುವರೆಸುವುದನ್ನು ಸುಪ್ರೀಂ ಕೋರ್ಟ್ ಗಮನಿಸಿತು ಹಾಗೂ ಅದೇ ಸಮಯದಿಂದ ಥೇಹ್ಖಾನಾನಲ್ಲಿ ಹಿಂದೂಗಳು ಪೂಜೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತ ಎಂದು ಕೋರ್ಟ್ ತಿಳಿಸಿದೆ.
ಹಿಂದೂಗಳು ಪೂಜೆ ಸಲ್ಲಿಸುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈತ್ರಿ ಕಷ್ಟ; ಅದೇ ಇಷ್ಟ ಎಂದದ್ದೇಕೆ ಕುಮಾರಸ್ವಾಮಿ?
ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಜನವರಿ 31 ರಂದು ತೀರ್ಪು ನೀಡಿತ್ತು.
“ಮಸೀದಿಯಲ್ಲಿ ಒಟ್ಟು ನಾಲ್ಕು ನೆಲಮಾಳಿಗೆಗಳಿದೆ. ಅವುಗಳ ಪೈಕಿ ಒಂದು ಇಲ್ಲಿ ವಾಸಿಸುತ್ತಿದ್ದ ಹಿಂದೂ ಕುಟುಂಬವೊಂದರ ವಶದಲ್ಲಿದೆ. ಹಾಗಾಗಿ, ಇದರಲ್ಲಿರುವ ‘ವ್ಯಾಸ್ ಕಾ ಥೇಹ್ಖಾನಾ ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿತ್ತು.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸಮೀಕ್ಷಾ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಇತ್ತೀಚೆಗೆ ಬಹಿರಂಗಪಡಿಸಿತ್ತು. ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಷಗಳ ಮೇಲೆಯೇ ಮಸೀದಿ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ ಬೆನ್ನಲ್ಲೇ ನ್ಯಾಯಾಲಯದಿಂದ ಆದೇಶ ಹೊರಬಿದ್ದಿತ್ತು.
ಮುಸ್ಲಿಂ ಸಂಘಟನೆಗಳು ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಕೂಡ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.
