“ಬಿಜೆಪಿ ಸೇರುವಂತೆ ನಮ್ಮ ಮೇಲೆ ಒತ್ತಡ ಹಾಕಲಾಗುತ್ತಿದೆ. ಬಿಜೆಪಿ ಸೇರದಿದ್ದರೆ ಒಂದು ತಿಂಗಳ ಒಳಗಾಗಿ ನಮ್ಮ ಬಂಧನ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗುತ್ತಿದೆ” ಎಂದು ದೆಹಲಿ ಹಣಕಾಸು ಸಚಿವೆ, ಎಎಪಿ ನಾಯಕಿ ಅತಿಶಿ ಮರ್ಲೆನಾ ಆರೋಪಿಸಿದರು.
ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಸಚಿವೆ ಅತಿಶಿ, “ನೀವು ಬಿಜೆಪಿ ಸೇರ್ಪಡೆಯಾಗಿ ನಿಮ್ಮ ರಾಜಕೀಯ ಜೀವನ ಕಾಪಾಡಿಕೊಳ್ಳಿ. ಬಿಜೆಪಿ ಸೇರ್ಪಡೆಯಾಗದಿದ್ದರೆ, ಇಡಿ ನಿಮ್ಮನ್ನು ಬಂಧಿಸಲಿದೆ ಎಂದು ನನ್ನ ಆತ್ಮೀಯರ ಮೂಲಕ ನನಗೆ ತಿಳಿಸಿದೆ” ಎಂದು ಹೇಳಿದರು.
Addressing an Important Press Conference l LIVE https://t.co/GjjMH6M4aT
— Atishi (@AtishiAAP) April 2, 2024
“ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಮತ್ತು ಅದರ ಎಲ್ಲ ನಾಯಕರನ್ನು ಸೋಲಿಸಲು, ನಾಶ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗಟ್ಟಿದೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಈಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ” ಎಂದರು.
“ಈಗ ಲೋಕಸಭೆ ಚುನಾವಣೆಗೂ ಮುನ್ನ ಎಎಪಿಯ ನಾಲ್ವರು ನಾಯಕರನ್ನು ಬಂಧಿಸಲು ಬಿಜೆಪಿ ಮುಂದಾಗಿದೆ. ಒಂದು ತಿಂಗಳೊಳಗೆ ನನ್ನನ್ನು, ಸೌರಬ್ ಭಾರದ್ವಾಜ್, ದುರ್ಗೇಶ್ ಪಾಟಕ್, ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಕೇಜ್ರಿವಾಲ್ ಫೋನ್‌ನಿಂದ ಲೋಕಸಭಾ ಚುನಾವಣೆಗೆ ಎಎಪಿ ತಂತ್ರದ ವಿವರ ಪಡೆಯಲು ಇಡಿ ಯತ್ನಿಸುತ್ತಿದೆ: ಅತಿಶಿ
“ಬಿಜೆಪಿಯು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರೆ ಎಎಪಿ ಸಂಪೂರ್ಣವಾಗಿ ನಾಶವಾಗಲಿದೆ ಎಂದುಕೊಂಡಿತ್ತು. ಆದರೆ ಭಾನುವಾರದ ರ್‍ಯಾಲಿಯಿಂದಾಗಿ, ಪ್ರತಿ ದಿನ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ನಾಲ್ವರು ನಾಯಕರನ್ನು ಬಂಧಿಸಿದರೆ ಸಾಲದು ಎಂದು ಬಿಜೆಪಿಗೆ ತಿಳಿದಿದೆ. ಆದ್ದರಿಂದಾಗಿ ಈಗ ಮತ್ತೆ ನಾಲ್ವರು ನಾಯಕರನ್ನು ಬಂಧಿಸಲು ಮುಂದಾಗಿದೆ” ಎಂದು ಹೇಳಿದರು.
“ನಾವು ಬಿಜೆಪಿಯ ಬೆದರಿಕೆಯಿಂದ ಆತಂಕಕ್ಕೆ ಒಳಗಾಗುವವರಲ್ಲ. ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಾವು ಈ ದೇಶವನ್ನು ಉಳಿಸಲು, ದೇಶದ ಸಂವಿಧಾನ ಉಳಿಸಲು ಕೆಲಸ ಮಾಡುತ್ತಿರುತ್ತೇವೆ. ನೀವು ಒಬ್ಬರನ್ನು ಬಂಧಿಸಿ ಜೈಲಿಗೆ ಹಾಕಿದರೆ, ಮತ್ತೆ ಹತ್ತು ಜನರು ಅರವಿಂದ್ ಕೇಜ್ರಿವಾಲ್ ಪರವಾಗಿ ಹೋರಾಡಲಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಇನ್ನು ಭಾನುವಾರ ಟ್ವೀಟ್ ಮಾಡಿ ಎಎಪಿ ನಾಯಕಿ ಅತಿಶಿ ಮರ್ಲೆನಾ ಸ್ಫೋಟಕ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಈ ನಡುವೆ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದಾಗ ಅತಿಶಿ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.