ಕಳೆದ ಐದು ವರ್ಷಗಳಿಂದ ನನ್ನ ಹೆಸರು ಹೇಳದ ಕೆಲವರು ಲೋಕಸಭಾ ಚುನಾವಣೆಗೆ ಬಂದ ತಕ್ಷಣ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ನಾನು ಕಾರಣ ಎಂದು ಕ್ಷುಲ್ಲಕ ಅಪಪ್ರಚಾರ ಮಾಡುತ್ತಿದ್ದಾರೆ. ನೇರ ಚುನಾವಣೆ ಎದುರಿಸಲಾಗದೆ ಈ ಮಟ್ಟದ ಕೀಳು ಪ್ರಚಾರ ಅವರಿಗೆ ತರವಲ್ಲ ಎಂದು ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಹೊರ ವಲಯದ ಬಾಲಾಜಿ ಕನ್ವೆಕ್ಷನ್ ಹಾಲ್‌ನಲ್ಲಿ ಕಾಂಗ್ರೆಸ್ ಮುಖಂಡ ಬಾಲಾಜಿ ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತೊರೆದವರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡು ಅವರು ಮಾತನಾಡಿದರು.
ಎಲ್ಲಿಯಾದರೂ ದೇವೇಗೌಡರ ಬಗ್ಗೆ ಮಾತನಾಡಿರುವ ವಿಡಿಯೋ ಅಥವಾ ಪತ್ರಿಕೆ ಹೇಳಿಕೆ ಇದ್ದರೆ ತೋರಿಸಲಿ, ನಾನು ಮಾಜಿ ಪ್ರಧಾನಿಗಳನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಎಂದು ನಾನೇ ಖುದ್ದು ಪ್ರಚಾರ ಮಾಡಿದವನು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.
ಎಂಟು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಹಿಂದೆ ಐದು ವರ್ಷ ಸಂಸದನಾಗಿ ನನ್ನ ಸ್ಥಾನಕ್ಕೆ ಗೌರವ ತಂದಿದ್ದೇನೆ. ಜನರ ಕಷ್ಟಗಳನ್ನು ಆಲಿಸಿದ್ದೇನೆ. ಸಂಸತ್‌ನಲ್ಲಿ ರೈತ ಪರ ಚರ್ಚೆ ಮಾಡಿ ಪ್ರಶ್ನೆ ಕೇಳಿದ್ದೇನೆ. ಎಂದಿಗೂ ಸಂಸದ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ, ಎಂದ ಅವರು ಈಗ ಅನ್ಯ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದ ಮುಖಂಡರು ಕಾರ್ಯಕರ್ತರು ಉಳಿದ ಇಪ್ಪತ್ತು ದಿನ ಶ್ರಮ ಪಟ್ಟು ಕಾಂಗ್ರೆಸ್ ಗೆಲುವಿಗೆ ಕಾರಣರಾಗಿ ಎಂದು ಕರೆ ನೀಡಿದರು.
ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಫಲ ಪಡೆದ ಶ್ರೀಸಾಮಾನ್ಯ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ನೀಡುತ್ತಾರೆ. ಕಾಂಗ್ರೆಸ್ ಸೇರಿದ ಎಲ್ಲಾ ಕಾರ್ಯಕರ್ತರು ಮುದ್ದಹನುಮೇಗೌಡರ ಮೇಲಿನ ಅಭಿಮಾನ ಹೊಂದಿದವರು. ಈ ನಿಟ್ಟಿನಲ್ಲಿ ಅವರ ಗೆಲುವಿಗೆ ಕೊಂಡೊಯ್ಯುವ ಜವಾಬ್ದಾರಿ ಹೆಚ್ಚಿದೆ. ಬರೀ ಸುಳ್ಳು ಹೇಳುವ ಬಿಜೆಪಿ ಪಕ್ಷದ ಮುಖವಾಡ ಬಯಲು ಮಾಡಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ತರುವ ಕೆಲಸ ಚುರುಕಾಗಿ ನಡೆಸಬೇಕು ಎಂದು ಕರೆ ನೀಡಿದರು.
ಐದು ವರ್ಷ ಈ ಬಿಜೆಪಿ ಸಂಸದರು ಎಂದೂ ತುಟಿ ಬಿಚ್ಚಿಲ್ಲ. ಜನಪರ ಕೆಲಸ ಮಾಡಿಲ್ಲ. ಆದರೆ, ಮುದ್ದಹನುಮೇಗೌಡ ಕೆಲಸ ಈಗಾಗಲೇ ಜನರ ಮನ ಗೆದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗೌರವ ಉಳಿಸಲು ಅವರ ಶ್ರಮಕ್ಕೆ ಫಲ ನೀಡಲು ಎಲ್ಲಾ ಕಾರ್ಯಕರ್ತರು ಅಣ್ಣತಮ್ಮರಂತೆ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ತೊರೆದ ಎಸ್.ಎಲ್.ನರಸಿಂಹಯ್ಯ, ಸಲೀಂಪಾಷ ಹಾಗೂ ಬಿಜೆಪಿ ತೊರೆದ ಮುಖಂಡ ಜಿ.ಸಿ.ಶಿವಕುಮಾರ್ ಮತ್ತು ನೂರಾರು ಗ್ರಾಪಂ ಸದಸ್ಯರು, ಮಾಜಿ ಸದಸ್ಯರು ಕಾಂಗ್ರೆಸ್ ಮುಖಂಡ ಬಾಲಾಜಿ ಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಬಾಲಾಜಿ ಕುಮಾರ್, ಜಿಪಂ ಮಾಜಿ ಸದಸ್ಯ ಜಿ.ಎಚ್. ಜಗನ್ನಾಥ್, ಕೆ.ಆರ್.ಅಶೋಕ್ ಕುಮಾರ್, ನರಸಿಂಹಯ್ಯ, ವೆಂಕಟೇಶ್, ಎಸ್.ಎಲ್. ನರಸಿಂಹಯ್ಯ, ಜಿ.ಸಿ. ಶಿವಕುಮಾರ್ ಇತರರು ಇದ್ದರು.