ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ ಮಾಡುವ ಮೂಲಕ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ದೇಶದ ಜನರನ್ನು ತಪ್ಪು ದಾರಿಗೆಳೆದಿದೆ. ಘನತೆವೆತ್ತ ಸುಪ್ರೀಂ ಕೋರ್ಟ್ ಪತಂಜಲಿಯ ಬಾಬಾ ರಾಮ್‌ದೇವ್‌ಗೆ ಛೀ ಮಾರಿ ಹಾಕಿದೆ. ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರಕ್ಕೂ ತರಾಟೆಗೆ ತೆಗೆದುಕೊಂಡಿದೆ. ಆದರೂ, ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಇಲ್ಲಿದೆ ನೋಡಿ…
ಭಾರತೀಯ ಯೋಗ ಗುರು, ಉದ್ಯಮಿ ಮತ್ತು ಪತಂಜಲಿ ಆಯುರ್ವೇದದ ಬ್ರಾಂಡ್ ಅಂಬಾಸಿಡರ್ ಬಾಬಾ ರಾಮ್‌ದೇವ್ ಏ. 2ರಂದು ದೇಶದ ಸರ್ವೋಚ್ಚ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದರು. ಜೊತೆಯಲ್ಲಿ ತಮ್ಮ ‘ಸಂಗಾತಿ’ ಆಚಾರ್ಯ ಬಾಲಕೃಷ್ಣರನ್ನೂ ನಿಲ್ಲಿಸಿಕೊಂಡಿದ್ದರು.
ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದೇಶದ ಜನರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ ಈ ಇಬ್ಬರು ಕೋರ್ಟಿಗೆ ಹಾಜರಾಗಿ, ಬೇಷರತ್ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಿದರು. ಅಫಿಡವಿಟ್‌ನಲ್ಲಿ ‘ಜಾಹೀರಾತು ಪ್ರಸಾರಕ್ಕೆ ತಡೆ ನೀಡುವ ಆದೇಶ ನಮ್ಮ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ, ಹೀಗಾಗಿ ತಪ್ಪಾಗಿದೆ’ ಎಂದು ಕ್ಷಮೆ ಕೇಳಿದ್ದರು.
ಆದರೆ ನ್ಯಾ. ಹಿಮಾ ಕೊಹ್ಲಿ ನೇತೃತ್ವದ ದ್ವಿಸದಸ್ಯ ಪೀಠ, ‘ನ್ಯಾಯಾಲಯಕ್ಕೆ ಭರವಸೆ ನೀಡಿದರೆ ಅದನ್ನು ಸಂಪೂರ್ಣವಾಗಿ ಪಾಲಿಸಬೇಕು. ಕೆಳ ಹಂತಕ್ಕೆ ನಿರ್ದೇಶಿಸುವುದು ನಿಮ್ಮ ಉದ್ಧಟತನ ತೋರಿಸುತ್ತದೆ. ಅಷ್ಟಕ್ಕೂ ಮಾಧ್ಯಮ ವಿಭಾಗ ಎಲ್ಲೋ ಇರುವುದಲ್ಲ, ದ್ವೀಪವಲ್ಲ. ನಿಮ್ಮ ಕೈ ಕೆಳಗಿರುವ ಒಂದು ವಿಭಾಗ. ನೀವು ಎಲ್ಲಾ ಮಿತಿಗಳನ್ನು ಮೀರಿದ್ದೀರಿ. ನೀವು ಕ್ಷಮೆ ಕೇಳುತ್ತಿರುವುದು ಕೂಡ ತಡವಾಗಿದೆ. ಅದು ಕೂಡ ಕೇವಲ ಬಾಯಿಮಾತಿನದು’ ಎಂದು ಹೇಳಿ ಅವರ ಕ್ಷಮೆ ಸ್ವೀಕರಿಸಲು ನಿರಾಕರಿಸಿತು. ಛೀಮಾರಿ ಹಾಕಿ ವಿಚಾರಣೆಯನ್ನು ಏ.10ಕ್ಕೆ ಮುಂದೂಡಿತು.
ಅಷ್ಟೇ ಅಲ್ಲ, ಕೇಂದ್ರ ಸರ್ಕಾರವನ್ನೂ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು. ಕೊರೋನದಿಂದ ದೇಶದ ಜನ ಸಂಕಷ್ಟಕ್ಕೀಡಾಗಿದ್ದ ಸಂದರ್ಭದಲ್ಲಿ, ಪತಂಜಲಿ ಕಂಪನಿ ಹೊರಡಿಸಿದ್ದ ಸುಳ್ಳು ಜಾಹೀರಾತುಗಳ ವಿರುದ್ಧ ಕೇಂದ್ರ ಸರ್ಕಾರ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿತು.
ಸುಪ್ರೀಂ ಕೋರ್ಟ್ ಇಂದು ಈ ಮಟ್ಟಿಗಿನ ಸಿಟ್ಟನ್ನು ಹೊರಹಾಕಲು ಕಾರಣವೇನೆಂದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತೀಯ ವೈದ್ಯ ಸಂಘಟನೆ(ಐಎಂಎ), ಲಸಿಕೆ ಅಭಿಯಾನ ಹಾಗೂ ಆಧುನಿಕ ವೈದ್ಯಕೀಯದ ವಿರುದ್ಧ ಪತಂಜಲಿ ಸ್ಥಾಪಕ ರಾಮ್‌ದೇವ್ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.
ಬಾಬಾ ರಾಮ್‌ದೇವ್, ಕೋರ್ಟ್ ನೋಟಿಸ್‌ಗೂ ಕೇರ್ ಮಾಡದೆ, ಠೇಂಕಾರದ ಮಾತುಗಳನ್ನಾಡಿದ್ದರು. ಆತನ ಠೇಂಕಾರದ ಮಾತುಗಳಿಗೆ ಪುಷ್ಟಿಕೊಡುವಂತೆ, ಕೇಂದ್ರ ಸರ್ಕಾರ, ಪೊಲೀಸ್, ಕಾನೂನು ಕೂಡ ಕ್ರಮ ಕೈಗೊಳ್ಳದೆ ಸುಮ್ಮನಾಯಿತು. ಅದರಿಂದ ಇನ್ನಷ್ಟು ಉತ್ತೇಜನಗೊಂಡ ರಾಮ್‌ದೇವ್, ಸುಪ್ರೀಂ ಕೋರ್ಟಿನ ನೋಟಿಸ್‌ಗೂ ಉತ್ತರಿಸದೇ ಉದ್ಧಟತನ ಮೆರೆದಿದ್ದರು.
ಕಳೆದ ಫೆಬ್ರವರಿ 27ರಂದು ಪತಂಜಲಿ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣನ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ, ರಾಮದೇವ್ ಕಂಪನಿಗೆ ಇನ್ನುಮುಂದೆ ರಕ್ತದೊತ್ತಡ, ಮಧುಮೇಹ, ಅಸ್ತಮಾ ಮತ್ತು ಇತರ ಕೆಲವು ಕಾಯಿಲೆಗಳಿಗೆ ಸಂಬಂಧಿಸಿದ ಯಾವುದೇ ಜಾಹೀರಾತು ನೀಡದಂತೆ ನಿರ್ಬಂಧವನ್ನೂ ವಿಧಿಸಿತು.
ಹಾಗೆಯೇ, ವಿವಿಧ ಕಾಯಿಲೆಗಳ ಚಿಕಿತ್ಸೆ ಸಂಬಂಧ ಪತಂಜಲಿಯು ತನ್ನ ಉತ್ಪನ್ನಗಳ ಕುರಿತು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುತ್ತಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೂ ತರಾಟೆಗೆ ತೆಗೆದುಕೊಂಡಿತ್ತು.
ಇಷ್ಟಾದರೂ, ಪ್ರಧಾನಿ ಮೋದಿಯವರು ಬಾಬಾ ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ; ಆ ಬಗ್ಗೆ ಮಾತನ್ನೂ ಆಡಲಿಲ್ಲ, ಏಕೆ?
ಇದನ್ನು ಓದಿದ್ದೀರಾ?: ದೇಶವಾಸಿಗಳು ʼಕ್ವಿಟ್ ಎನ್‍ಡಿಎʼ ಮತ್ತು ʼಸೇವ್ ಇಂಡಿಯಾʼ ಚಳವಳಿಗೆ ಸನ್ನದ್ಧರಾಗಬೇಕಿದೆ..
ಕಾರಣ ಸ್ಪಷ್ಟ: ಕೇಸರಿ ಶಾಲು ಸುತ್ತಿಕೊಳ್ಳುವ, ಯೋಗ ಮಾಡುವ, ಸನಾತನ ಧರ್ಮ ಪ್ರಚಾರಕನಂತೆ ಪೋಸು ಕೊಡುವ ಬಾಬಾ ರಾಮದೇವ್, ವೇಷಭೂಷಣದಲ್ಲಿ ಸನಾತನಿಯಂತೆ ಕಂಡರೂ, ಸನ್ಯಾಸಿಯಲ್ಲ. ಆತ ಅಪ್ಪಟ ವ್ಯಾಪಾರಿ. ಯೋಗ, ಆಯುರ್ವೇದ ಮತ್ತು ಸನಾತನ ಧರ್ಮವನ್ನೂ ಮಾರಾಟಕ್ಕಿಟ್ಟು ಹಣ ಮಾಡಬಲ್ಲ ಉದ್ಯಮಿ. ಈ ನಕಲಿ ಸನಾತನಿಯ ಕೃತ್ಯಗಳು ಸಂಘಪರಿವಾರಕ್ಕೆ, ಬಿಜೆಪಿಗೆ ರಾಜಕೀಯವಾಗಿ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಜೊತೆಗೆ ಕೇಳಿದಷ್ಟು ದೇಣಿಗೆ ಕೊಡುತ್ತಿದ್ದಾರೆ. ಆ ಕಾರಣಕ್ಕಾಗಿ ಬಾಬಾ ರಾಮದೇವ್ ವ್ಯಾಪಾರಕ್ಕೆ ಕೇಂದ್ರ ಸರ್ಕಾರವೇ ಮುಂದೆ ನಿಂತು ಸಹಕರಿಸುತ್ತಿದೆ.
ಇವರಿಬ್ಬರ ನಡುವಿನ ಕೊಡು-ಕೊಳ್ಳುವಿಕೆಯಿಂದ ಇದಿಷ್ಟೇ ಅಲ್ಲ, ಇದಕ್ಕಿಂತಲೂ ಹೆಚ್ಚಿನ ಅನಾಹುತ ಸಂಭವಿಸಿದೆ. ಪತಂಜಲಿ ಆಯುರ್ವೇದದಿಂದ ತಯಾರಿಸಲ್ಪಟ್ಟ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ ಮಾಡುವ ಮೂಲಕ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ದೇಶದ ಜನರನ್ನು ತಪ್ಪು ದಾರಿಗೆಳೆದಿದೆ. ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಿದೆ. ಹಲವರ ಸಾವಿಗೂ ಕಾರಣವಾಗಿದೆ.
ಇಡೀ ದೇಶ ಕೊರೋನದ ಭಯ, ಆತಂಕದ ಮಡುವಿನಲ್ಲಿದ್ದ ಸಮಯದಲ್ಲಿ ಜವಾಬ್ದಾರಿಯುತ ಸರ್ಕಾರ ದೇಶದ ಜನರನ್ನು ವೈಜ್ಞಾನಿಕ ವಿಧಾನದ ಅಲೋಪತಿ ಔಷಧ ನೀಡಿ ಬಚಾವು ಮಾಡುವ ಬದಲು, ಪತಂಜಲಿ ಔಷಧಿ ಪ್ರಮೋಟ್ ಮಾಡಲು ಮುಂದಾಗಿತ್ತು. ಫೆಬ್ರವರಿ 19, 2021ರಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ನಿತಿನ್ ಗಡ್ಕರಿ ಮತ್ತು ಬಾಬಾ ರಾಮದೇವ್ ಪಾಲ್ಗೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ, ‘ಕೊರೋನಪೀಡಿತ ರೋಗಿಗಳು ಪತಂಜಲಿಯ ಆಯುರ್ವೇದ ಮಾತ್ರೆಯಾದ ಕೊರೊನಿಲ್ ಮಾತ್ರೆಯನ್ನು ಮೂರರಿಂದ ಹದಿನಾಲ್ಕು ದಿನಗಳವರೆಗೆ ತೆಗೆದುಕೊಂಡರೆ, ಗುಣಮುಖರಾಗುತ್ತಾರೆ’ ಎಂದು ದೇಶದ ಜನಕ್ಕೆ ಸಂದೇಶ ರವಾನಿಸಿತ್ತು.

ಅಸಲಿಗೆ, ಕೊರೊನಿಲ್ ಎನ್ನುವುದು ಸಾಮಾನ್ಯ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವಾಗಿತ್ತು. ಸರ್ಕಾರದ ಪ್ರಮಾಣೀಕೃತ ಸಂಸ್ಥೆಯಿಂದ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಸಂಶೋಧನೆ ಮತ್ತು ಪರಿಶೀಲನೆಗೆ ಒಳಗಾಗಿರಲಿಲ್ಲ. ಆದರೂ ಸಾರ್ವಜನಿಕವಾಗಿ ಬಾಬಾ ರಾಮದೇವ್, ‘ನಮ್ಮ ಉತ್ಪನ್ನವನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ಅನುಮೋದಿಸಿದೆ’ ಎಂಬ ಹಸೀ ಸುಳ್ಳನ್ನು ಸಚಿವರ ಮುಂದೆಯೇ ಹೇಳಿದ್ದರು. ಇನ್ನು ಗೋದಿ ಬಿಸ್ಕತ್ ತಿಂದ ಪತ್ರಕರ್ತರು, ‘ಕೊರೋನಕ್ಕೆ ಬಾಬಾರಿಂದ ಬಂದ ರಾಮಬಾಣ, ಕೊರೊನಿಲ್’ ಅಂತೆಲ್ಲ ಪ್ರಚಾರ ಮಾಡಿದರು.
ಪ್ರಶ್ನಿಸಬೇಕಾದವರೇ ಮುಂದೆ ನಿಂತು ಪ್ರಮೋಟ್ ಮಾಡಿದರೆ ಏನಾಗಬಹುದೋ ಆ ಅನಾಹುತ ದೇಶದಲ್ಲಿ ಜರುಗಿತ್ತು. ಕೊರೋನದಿಂದ ಮೃತಪಟ್ಟವರ ಹೆಣಗಳು, ಅಂತ್ಯಸಂಸ್ಕಾರವನ್ನೂ ಕಾಣದೆ ನದಿಯಲ್ಲಿ ತೇಲಿಹೋದವು. ಲಕ್ಷಾಂತರ ಕುಟುಂಬಗಳ ಕಣ್ಣೀರಿನಲ್ಲಿ ಕೈ ತೊಳೆಯುತ್ತ, ಸಾವು-ನೋವಿನಲ್ಲಿ ನರಳುತ್ತಿದ್ದವು. ಆದರೆ ಬಾಬಾ ರಾಮದೇವ್ ಮತ್ತು ಬಾಲಕೃಷ್ಣರ ಪತಂಜಲಿ ಕೆಲವೇ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸಿತ್ತು. ಲೆಕ್ಕವಿಲ್ಲದಷ್ಟು ಹಣ ಬಾಬಾ ತಿಜೋರಿಗೆ ಬಂದು ಬಿದ್ದಿತ್ತು.
ಇಷ್ಟೆಲ್ಲ ಅನಾಹುತ, ಅಧ್ವಾನ ಪ್ರಧಾನಿ ಮೋದಿಯವರ ಮೂಗಿನಡಿಯಲ್ಲಿಯೇ ನಡೆದರೂ, ಸುಮ್ಮನಿದ್ದರು. ಗಿಡಮೂಲಿಕೆ ಮಾರಿದ ಬಾಬಾ ರಾಮದೇವ್‌ರಿಂದ ಮತ್ತು ಕೊವ್ಯಾಕ್ಸಿನ್ ಮಾರಿದ ಭಾರತ್ ಬಯೋಟೆಕ್ಸ್‌ನಿಂದ ನೂರಾರು ಕೋಟಿ ಬಾಂಡ್ ಮೂಲಕ ದೇಣಿಗೆ ಪಡೆದಿದ್ದರು. ಅವರ ವ್ಯಾಪಾರಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಂಡರು.
ಸನಾತನ ಧರ್ಮದ ಬಗ್ಗೆ ಮಾತನಾಡುವ ಆರೆಸ್ಸೆಸ್, ಖಾವಿಧಾರಿಗಳು, ಮಠಾಧೀಶರು, ಬಾಬಾಗಳು, ಸ್ವಾಮೀಜಿಗಳನ್ನು ಸಲಹುತ್ತಿದೆ. ಕೇಸರಿ ತೊಟ್ಟವರು ಸನಾತನ ಧರ್ಮವನ್ನೇ ಬಿಕರಿಗಿಟ್ಟು ಬಿಲಿಯನೇರ್‍ಗಳಾಗುತ್ತಿದ್ದಾರೆ. ಬಾಬಾ ರಾಮ್‌ದೇವ್‌ನಂತವರು ಆಧುನಿಕ ಆಧ್ಯಾತ್ಮಿಕ ಬಂಡವಾಳಶಾಹಿ(spiritual capatilism)ಗಳಾಗಿ ಮೆರೆಯುತ್ತಿದ್ದಾರೆ. ಆರೆಸ್ಸೆಸ್ ಅಣತಿಯಂತೆ ನಡೆಯುವ ಕೇಂದ್ರ ಬಿಜೆಪಿ ಸರ್ಕಾರ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ?
ಸದ್ಯ ದೇಶದ ಜನರ ಏಕೈಕ ಆಶಾಕಿರಣವೆಂದರೆ ಸುಪ್ರೀಂ ಕೋರ್ಟ್. ಇದೂ ಇಲ್ಲದಿದ್ದರೆ, ಈ ಮೋದಿ-ಬಾಬಾಗಳ ಕೇಡಿ ಕೃತ್ಯಗಳು ಹೊರಬರಲು ಸಾಧ್ಯವಿರುತ್ತಿರಲಿಲ್ಲ. ಹಾಗಾಗಿ ನಾವು ನಂಬಬೇಕಾದ್ದು ಬಾಬಾನಲ್ಲ; ಬೆಂಬಲಿಸಬೇಕಾದ್ದು ಮೋದಿಯನ್ನಲ್ಲ; ಸತ್ಯ ಹೇಳುವ ಸುಪ್ರೀಂ ಕೋರ್ಟನ್ನು.

ಲೇಖಕ, ಪತ್ರಕರ್ತ