ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿಯೂ ಆಗಿರುವ ತೇಜಸ್ವಿ ಸೂರ್ಯ ಅವರು ಮೊದಲ ಬಾರಿಗೆ ಸಂಸದರಾದ ನಂತರ ಅವರ ಆಸ್ತಿ 30 ಪಟ್ಟು ಹೆಚ್ಚಳವಾಗಿರುವುದು ಅವರು ಗುರುವಾರ ಸಲ್ಲಿಸಿದ ಅಫಿಡವಿಟ್ ದಾಖಲೆಗಳ ಮೂಲಕ ಬಹಿರಂಗಗೊಂಡಿದೆ.
2019ರಲ್ಲಿ, ಬಿಜೆಪಿ ಟಿಕೆಟ್‌ನಲ್ಲಿ ತಮ್ಮ ಚೊಚ್ಚಲ ಚುನಾವಣೆಯಲ್ಲಿ ಸ್ಪರ್ಧಿಸಲು ಸೂರ್ಯ ನಾಮಪತ್ರ ಸಲ್ಲಿಸಿದಾಗ, ಅವರು ಒಟ್ಟು ಆಸ್ತಿ ₹13.46 ಲಕ್ಷ ಎಂದು ಘೋಷಿಸಿದ್ದರು. ಐದು ವರ್ಷಗಳ ನಂತರ, ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷರೂ ಆಗಿರುವ ಸಂಸದರ ಒಟ್ಟು ಆಸ್ತಿ ಮೌಲ್ಯ ₹4.10 ಕೋಟಿ ಏರಿಕೆ ಕಂಡಿದೆ.
ಸೂರ್ಯ ಅವರು ನಿನ್ನೆ(ಗುರುವಾರ) ಬೆಂಗಳೂರಿನ ಜಯನಗರದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಸಲ್ಲಿಸಲಾಗಿರುವ ಅಫಿಡವಿಟ್ ಪ್ರಕಾರ, ಆದಾಯದ ಬೆಳವಣಿಗೆಯ ಪ್ರಮುಖ ಮೂಲಗಳು ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿನ ಹೂಡಿಕೆಗಳಾಗಿವೆ. ಸೂರ್ಯ ಮ್ಯೂಚುವಲ್ ಫಂಡ್‌ಗಳಲ್ಲಿ ₹1.99 ಕೋಟಿ ಮತ್ತು ಷೇರುಗಳಲ್ಲಿ ₹1.79 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸೂರ್ಯ ವಿರುದ್ಧ ಮೂರು ಪ್ರಕರಣಗಳು ಬಾಕಿ ಉಳಿದಿದ್ದು, ಮಾರ್ಚ್‌ನಲ್ಲಿ ಬೆಂಗಳೂರಿನ ನಗರ್ತಪೇಟೆಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳನ್ನು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಕಾನೂನುಬಾಹಿರ ಸಭೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಯುವ ಮೋರ್ಚಾ ಕಾರ್ಯಕರ್ತರು ದಾಳಿ ಮಾಡಿದ ನಂತರ, ಸರ್ಕಾರಿ ಸೇವೆಗೆ ಅಡ್ಡಿ ಮತ್ತು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಮಾರ್ಚ್ 2022ರಲ್ಲಿ ನವದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಮೂರನೇ ಪ್ರಕರಣವನ್ನು ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ತೇಜಸ್ವಿ ಸೂರ್ಯ ನಾಮಪತ್ರ ಸಮಾವೇಶದ ವೇಳೆ ‘ದ್ವೇಷ ಪಂಚರ್ ಮಾಡಿ’ ಬ್ಯಾನರ್ ಪ್ರದರ್ಶಿಸಿದ ಸಾಮಾಜಿಕ ಕಾರ್ಯಕರ್ತರು
ಮಹಿಳಾ ಮತದಾರರೇ ಹೆಚ್ಚಿರುವ ರಾಜ್ಯದ ಮತ್ತೊಂದು ಪ್ರಮುಖ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣದಲ್ಲಿ ಮಾಜಿ ಕೇಂದ್ರ ಸಚಿವ ದಿವಗಂತ ಅನಂತ್ ಕುಮಾರ್ ಅವರು ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಹಿಡಿತವನ್ನು ಹೊಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರ ಜನಪ್ರಿಯತೆ ಹಾಗೂ ಮೋದಿ ಅವರ ನಾಮಬಲದ ಮೇಲೆ ದಕ್ಷಿಣ ಕ್ಷೇತ್ರದಲ್ಲಿ ಹೊಸಮುಖವಾಗಿದ್ದ ಸಂಸದ ತೇಜಸ್ವಿ ಸೂರ್ಯ ಗೆದ್ದಿದ್ದರು. ಇವರ ವಿರುದ್ಧ ಕಾಂಗ್ರೆಸ್‌ನಿಂದ ಬಿ ಕೆ ಹರಿಪ್ರಸಾದ್ ಸ್ಪರ್ಧೆ ಮಾಡಿ, ಸೋತಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಜಯನಗರದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣದಲ್ಲಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಏಪ್ರಿಲ್ 26ರಂದು ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗದಲ್ಲಿರುವ 14 ಕ್ಷೇತ್ರಗಳಿಗೆ ಮತದಾನ ನಡೆದರೆ, ಮೇ 7ಕ್ಕೆ ಉತ್ತರದ 14 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
