ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ಎದುರಾಗಿದೆ. ನಗರದ ಕೆಲವೆಡೆ ಜನರು ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ. ಹೀಗಾಗಿ, ಜನರು ಬಾಳೆಎಲೆ ಹಾಗೂ ಪೇಪರ್ ಪ್ಲೇಟ್‌ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ನೀರಿನ ಕೊರತೆಯ ತೀವ್ರ ಬಿಕ್ಕಟ್ಟಿನ ನಡುವೆ, ಬಾಳೆ ಎಲೆ ಹಾಗೂ ಪೇಪರ್ ಪ್ಲೇಟ್‌ಗಳ ಬೆಲೆ ಗಗನಕ್ಕೇರಿವೆ.
ನೀರಿನ ಅಭಾವ ಹಿನ್ನೆಲೆಯಲ್ಲಿ ಜನರು ಬಾಳೆಎಲೆ ಹಾಗೂ ಪೇಪರ್ ಪ್ಲೇಟ್‌ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಹೀಗಾಗಿ, ಮಾರಾಟಗಾರರೂ ಇವುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಮಲ್ಲೇಶ್ವರಂ ಮಾರಾಟಗಾರರು ಮಾರಾಟದ ಬೆಲೆಯನ್ನು ಶೇ.30ರಷ್ಟು ಹೆಚ್ಚಳ ಮಾಡಿದ್ದಾರೆ.
ಮಲ್ಲೇಶ್ವರಂನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಜನರು ನೀರಿನ ಸಮಸ್ಯೆಯನ್ನು ನಿಭಾಯಿಸಲು ಹಾಗೂ ನೀರಿನ ಬಳಕೆಯನ್ನು ಕಡಿಮೆ ಮಾಡಲು ಬಾಳೆ ಎಲೆಗಳು ಮತ್ತು ಪೇಪರ್ ಪ್ಲೇಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.
ಮಲ್ಲೇಶ್ವರಂನ 10ನೇ ಕ್ರಾಸ್‌ನಲ್ಲಿ ವ್ಯಾಪಾರ ನಡೆಸುತ್ತಿರುವ ನೀಲಮ್ಮ ಅವರು ಮಾತನಾಡಿ, “ಕಳೆದ ಬಾರಿ ಓಣಂ ಸಮಯದಲ್ಲಿ ಉತ್ತಮ ಮಾರಾಟವನ್ನು ಮಾಡಿದ್ದೇವು. ಈ ಹಿಂದೆ, ಬಾಳೆ ಎಲೆಗಳು ಪ್ರತಿ ಎಲೆಗೆ ₹6 ರಿಂದ ₹8 ನಡುವೆ ಬೆಲೆ ಇತ್ತು. ಬಾಳೆ ಎಲೆಗಳ ಗಾತ್ರದಲ್ಲಿ ವ್ಯತ್ಯಾಸವಿತ್ತು. ಆದರೆ, ಕಳೆದೊಂದು ತಿಂಗಳಿಂದ ಒಂದು ಎಲೆಯನ್ನು ₹9 ರಿಂದ ₹13ಗೆ ಅಥವಾ ಆರು ಎಲೆಗಳ ಸೆಟ್‌ಗೆ ₹70ಗೆ ಮಾರಾಟ ಮಾಡುತ್ತಿದ್ದೇವೆ. ಹಲವು ವರ್ಷಗಳಿಂದಲೂ ಇಷ್ಟು ಮಟ್ಟದ ವ್ಯಾಪಾರವನ್ನು ನೋಡಿರಲಿಲ್ಲ” ಎಂದು ಹೇಳಿದರು.
“ಕಳೆದ 6 ತಿಂಗಳಿನಿಂದ ಮಾರಾಟ ಸೀಮಿತವಾಗಿತ್ತು. ಹಬ್ಬ, ಮದುವೆ ಹಾಗೂ ಸಮಾರಂಭದ ಸಮಯದಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿತ್ತು. ಆದರೆ, ಈಗ ಜನರು ತಮ್ಮ ದಿನಚರಿಯ ಭಾಗವಾಗಿ ಎಲೆಗಳನ್ನು ಪ್ಲೇಟ್‌ಗಳಾಗಿ ಬಳಸುತ್ತಿದ್ದಾರೆ” ಎಂದು ನೀಲಮ್ಮ ಹೇಳಿದರು.
ಬಾಳೆ ಎಲೆ ಮಾರಾಟಗಾರ ಕರುಪಸ್ವಾಮಿ ಮಾತನಾಡಿ, “ಫೆಬ್ರವರಿ ಮಧ್ಯದಿಂದ ಅಡಿಕೆ ಎಲೆಗಳ ತಟ್ಟೆಗಳು ಮತ್ತು ಬಾಳೆ ಎಲೆಗಳ ಮಾರಾಟದಲ್ಲಿ ಏರಿಕೆ ಕಾಣುತ್ತಿದ್ದೇವೆ. ಬೆಲೆ ಏರಿಕೆಯ ಹೊರತಾಗಿಯೂ, ಗ್ರಾಹಕರು ಖರೀದಿಸಲು ಸಿದ್ಧರಿದ್ದಾರೆ” ಎಂದರು.
“ಪ್ರತಿ ತಿಂಗಳು ಸಾಮಾನ್ಯವಾಗಿ ನಾವು ಸುಮಾರು 2,000 ಎಲೆಗಳು ಮತ್ತು ಮೂರು ವಿಭಿನ್ನ ಗಾತ್ರದ 200 ಕ್ಕೂ ಹೆಚ್ಚು ಅರೆಕಾ ಎಲೆಗಳ ಸೆಟ್‌ಗಳನ್ನು ಮಾರಾಟ ಮಾಡುತ್ತಿದ್ದೇವು. ಆಗ ಕೇವಲ ಸಮಾರಂಭ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಎಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಜನರನ್ನು ವ್ಯಾಪಾರದ ಕೇಂದ್ರವಾಗಿ ಗುರುತಿಸಿಕೊಂಡಿದ್ದೇವು. ಆದರೆ, ಈಗ ಜನರು ಕೂಡ ಖರೀದಿ ಮಾಡುತ್ತಿದ್ದಾರೆ. ಮಾರಾಟ ಹೆಚ್ಚಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಡಿಹೈಡ್ರೇಶನ್’ ಪ್ರಕರಣಗಳಲ್ಲಿ ಹೆಚ್ಚಳ; ಓಆರ್‌ಎಸ್ ಮಾರಾಟದಲ್ಲಿ ಶೇ.60 ಏರಿಕೆ
ಬಾಳೆ ಎಲೆ ಗ್ರಾಹಕ ಶೇಖರ್ ಮಾತನಾಡಿ, “ನಮ್ಮ ಕುಟುಂಬದವರು ಸಮಾರಂಭಗಳಲ್ಲಿ ಮಾತ್ರ ಬಾಳೆ ಎಲೆಗಳನ್ನು ಬಳಸುತ್ತಿದ್ದರು. ಆದರೆ, ಈಗ ನಾವು ಅದನ್ನು ಪ್ಲೇಟ್ ಆಗಿ ಪರ್ಯಾಯವಾಗಿ ಬಳಸುತ್ತಿದ್ದೇವೆ. ಮಲ್ಲೇಶ್ವರಂ ಮತ್ತು ರಾಜಾಜಿನಗರದ ಸುತ್ತಮುತ್ತಲಿನ ಜನರು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಅನೇಕ ಕುಟುಂಬಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ಊಟಕ್ಕೆ ಪ್ಲೆಟ್‌ಗಳ ಬದಲಾಗಿ ಎಲೆಗಳನ್ನು ಬಳಕೆ ಮಾಡುತ್ತಿದ್ದಾರೆ” ಎಂದರು.
ಮೂಲ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್