ಇತ್ತೀಚೆಗೆ ನೀರಿನ ಅಭಾವದ ಜತೆಗೆ ಬಿಸಿಲಿನ ತಾಪಮಾನ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದಷ್ಟು ಬೇಗ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ಬಹಳಷ್ಟು ಕಡೆ ಕಾಲರಾ, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳು ಹೆಚ್ಚಿಗೆ ಕಂಡುಬರುತ್ತಿದೆ. ಇದನ್ನು ಸಮರ್ಪಕವಾಗಿ ಹತೋಟಿಗೆ ತರುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ, ಬೀದಿಬದಿಯಲ್ಲಿ ತಿಂಡಿ-ತಿನಿಸು ವ್ಯಾಪಾರ ಮಾಡುವವರನ್ನು ಸ್ಥಗಿತಗೊಳಿಸಬೇಕು” ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಸರ್ಕಾರದ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್ ಅವರಿಗೆ ಪತ್ರ ಬರೆದಿದ್ದಾರೆ.
“ಅಂದಾಜು 30,000ಕ್ಕಿಂತ ಹೆಚ್ಚು ಬೀದಿ ಬದಿಯ ಹೊಟೆಲ್‌ಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ. ನ್ಯಾಯಾಲಯದ ಆದೇಶದಂತೆ ಯಾವುದೇ ಕಡೆಗಳಲ್ಲಿ ಬೀದಿಬದಿಯಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವಂತಿಲ್ಲ. ಇತ್ತೀಚೆಗೆ, ರಾಜ್ಯದ ಒಂದು ಕಡೆ ಬೀದಿ ಬದಿಯಲ್ಲಿ ತಯಾರಿಸಿದ ಪಾನಿಪುರಿ ತಿಂದು ಬಹಳಷ್ಟು ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡಿರುವುದರ ಜತೆಗೆ ಸಾವು ಕೂಡ ಸಂಭವಿಸಿರುವುದು ಉಲ್ಲೇಖವಾಗಿದೆ” ಎಂದು ಹೇಳಿದ್ದಾರೆ.
“ಬೀದಿಬದಿಯಲ್ಲಿ ಸಿಲಿಂಡರ್ ಇಟ್ಟುಕೊಂಡು ವ್ಯಾಪಾರ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಸಮಂಜಸವಲ್ಲ. ಇದರ ಜತೆಗೆ ಅವರು ಉಪಯೋಗಿಸುವ ವಸ್ತುಗಳು, ಮನೆಯಲ್ಲಿ ತಯಾರಿಸುವ ಸ್ಥಳ ಹಾಗೂ ವಿತರಿಸುವ ಜಾಗಗಳು ಎಲ್ಲವೂ ಬಹಳಷ್ಟು ಅನ್’ಹೈಜೇನಿಕ್’ (Unhygienic) ಆಗಿರುತ್ತದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯವರ ಆದ್ಯ ಕರ್ತವ್ಯ. ಆದ್ದರಿಂದ ತಕ್ಷಣ ಬೀದಿಬದಿಯಲ್ಲಿ ತಿಂಡಿ-ತಿನಿಸುಗಳ ವ್ಯಾಪಾರ ಮಾಡುವವರನ್ನು ಸ್ಥಗಿತಗೊಳಿಸಬೇಕು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೀರಿನ ಕೊರತೆ | ನಿತ್ಯದ ಊಟಕ್ಕೆ ಬಾಳೆ ಎಲೆ, ಪೇಪರ್ ಪ್ಲೇಟ್ ಬಳಸುತ್ತಿರುವ ಬೆಂಗಳೂರಿನ ಜನ
“ಹೀಗಿದ್ದರೂ, ಅವರಿಗೆ ಪರ್ಯಾಯ ವ್ಯವಸ್ಥೆಯಾಗಿ ಬೇರೆ ವ್ಯಾಪಾರಕ್ಕೆ ಪ್ರೋತ್ಸಾಹಿಸಬೇಕು. ಮುಂದಿನ ದಿನಗಳಲ್ಲಿ ಬೀದಿಬದಿಯ ವ್ಯಾಪಾರಿಗಳಿಗೆ ವಿಶೇಷವಾದ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳುಳ್ಳ ಫುಡ್ ಕೋರ್ಟ್ ನಿರ್ಮಿಸಿ ಪರ್ಯಾಯ ವ್ಯಾಪಾರವಾದ ಹಣ್ಣು-ಹಂಪಲು, ತರಕಾರಿ, ಬಟ್ಟೆ ಮುಂತಾದ ವ್ಯಾಪಾರಗಳನ್ನು ಮಾಡಲು ಯೋಜನೆ ಕಲ್ಪಿಸಬೇಕು. ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಪ್ರೋತ್ಸಾಹಿಸಿ ಅವರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಸಹಕರಿಸಬಹುದು” ಎಂದು ಹೇಳಿದ್ದಾರೆ.
“ಇದೆಲ್ಲದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ವಿನಂತಿಸಿದ್ದಾರೆ.