ರೈತರ ಕೊಬ್ಬರಿ ಖರೀದಿ ನಫೆಡ್ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್ ಕೊಬ್ಬರಿಗೆ ₹90 ಹಮಾಲಿ ಶುಲ್ಕ ಎಂಬುದಾಗಿ ಹಗಲು ದರೋಡೆ ಮಾಡಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಅವರ ಗಮನ ಸೆಳೆದರೂ ಈವರೆಗೂ ಇತ್ತ ಬಂದು ರೈತರಿಗಾದ ಅನ್ಯಾಯ ಕೇಳುತ್ತಿಲ್ಲ. ವಿಷಯ ತಿಳಿದು 24 ಗಂಟೆ ಕಳೆದರೂ ನಫೆಡ್ ಕೇಂದ್ರದ ಬಳಿ ಬಂದಿಲ್ಲ. ಸಮರ್ಪಕ ಉತ್ತರ ಸಿಗದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ ಗೋವಿಂದರಾಜು ಎಚ್ಚರಿಕೆ ನೀಡಿದರು.
ಗುಬ್ಬಿ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಅಧಿಕಾರಿಗಳ ಆಗಮನವನ್ನು ನಿರೀಕ್ಷಿಸಿ ಕಾದು ಕುಳಿತ ರೈತ ಮುಖಂಡರ ಜತೆಗೆ ಹೇಳಿಕೆ ನೀಡಿದ ಅವರು, “ಫೆಡರೇಶನ್ ಮಾರ್ಗಸೂಚಿ ಪ್ರಕಾರ 1,500 ಕೆಜಿ ಕೊಬ್ಬರಿ ಖರೀದಿ ಮಾಡುವ ಬದಲು 36 ಕೆಜಿಯ ಒಂದು ಚೀಲದಂತೆ ಓರ್ವ ರೈತನಿಂದ 42 ಚೀಲ ಖರೀದಿಸಿ ಒಟ್ಟು 1,470 ಕೆಜಿ ಮಾತ್ರ ಖರೀದಿ ನಡೆದಿದೆ. ಉಳಿದ 30 ಕೆಜಿ ಲೆಕ್ಕ ಹಾಕಿದಾಗ ನೂರಾರು ಕ್ವಿಂಟಲ್ ಕೊಬ್ಬರಿ ಖರೀದಿಗೆ ವರ್ತಕರಿಗೆ ಅವಕಾಶ ನೀಡಿದ್ದಾರೆ. ಈ ಕೆಲಸದಲ್ಲಿ ಅಧಿಕಾರಿಗಳು ಸಂಪೂರ್ಣ ಶಾಮೀಲಾಗಿದ್ದಾರೆ” ಎಂದು ನೇರ ಆರೋಪ ಮಾಡಿದರು.
“ಹಮಾಲಿ ಶುಲ್ಕ ಗುತ್ತಿಗೆ ಪಡೆದ ಏಜೆನ್ಸಿಗೆ ಫೆಡರೇಶನ್ ನಿಗದಿ ಮಾಡಿರುವ ₹12.36 ನೀಡಲಾಗುತ್ತಿದೆ. ಹೆಚ್ಚುವರಿ ರೈತರಿಂದ ವಸೂಲಿ ಮಾಡಿರುವುದು ರೈತರ ಅರಿವಿಗೆ ಬಂದಿಲ್ಲ. ಕ್ವಿಂಟಲ್‌ಗೆ ₹90ರಂತೆ ಜಿಲ್ಲೆಯಲ್ಲಿ 3.18 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಯಾಗಿದ್ದು, ₹6.07 ಕೋಟಿಯಷ್ಟು ಹಮಾಲಿ ಹಣವೆಂದು ವಸೂಲಿ ಮಾಡಲಾಗಿದೆ. ಗುಬ್ಬಿ ತಾಲೂಕಿನಲ್ಲಿ ₹72.58 ಲಕ್ಷ ವಂಚನೆ ಮಾಡಿದ್ದಾರೆ” ಎಂದು ಕಿಡಿಕಾರಿದರು.
“ಹಮಾಲಿ ಕೂಲಿ ಜತೆಗೆ ರೈತನಿಂದ 250 ಗ್ರಾಂ ಕೊಬ್ಬರಿ ಕಡಿತವಾಗುತ್ತದೆ. ಇವೆಲ್ಲವೂ ಸೇರಿ ಕೋಟ್ಯಂತರ ರೂಪಾಯಿ ರೈತರ ಹಣ ಲೂಟಿ ಮಾಡಿದ್ದಾರೆ. ರಾಜ್ಯದಲ್ಲಿ ನಡೆದ ದೊಡ್ಡ ಹಗರಣವೇ ಇದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಎನ್ ವೆಂಕಟೇಗೌಡ ಮಾತನಾಡಿ, “ರೈತ ಸಂಘದ ಹಲವು ಸದಸ್ಯರು ಎರಡು ದಿನದ ಹಿಂದೆ ಈ ಹೆಚ್ಚುವರಿ ಹಣ ವಸೂಲಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಎಪಿಎಂಸಿ ಆವರಣದಲ್ಲಿ ಅಧಿಕಾರಿಗಳ ಉತ್ತರದ ನಿರೀಕ್ಷೆಯಲ್ಲಿ ಕಾದು ಬಸವಳಿದಿದ್ದಾರೆ. ರೈತರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಬೀದಿಗಿಳಿದು ಹೋರಾಟಕ್ಕೆ ಸಂಘ ಸಿದ್ಧವಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈತರ ಪ್ರಶ್ನೆಗೆ ಸಮಂಜಸ ಉತ್ತರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಕ್ರಮವಾಗಿ ಬೋಟ್ ಧ್ವಂಸಗೊಳಿಸಿ, ಮಾಲೀಕನಿಗೆ ಜೀವ ಬೆದರಿಕೆ; ಎಸ್‌ಪಿಗೆ ದೂರು
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ ಜಿ ಲೋಕೇಶ್, ಯತೀಶ್, ಸತ್ತಿಗಪ್ಪ, ರವೀಶ್, ಕುಮಾರಸ್ವಾಮಿ, ಬಸವರಾಜು ಸೇರಿದಂತೆ ಇತರರು ಇದ್ದರು.
