ಲೇಹ್‌ನಲ್ಲಿ ಏಪ್ರಿಲ್ 7ರಂದು “ಬಾರ್ಡರ್ ಮಾರ್ಚ್” ಕರೆ ನೀಡಿದ್ದ ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಲಡಾಖ್ ಕೇಂದ್ರಾಡಳಿತ ಪ್ರದೇಶವು ಲೇಹ್ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ನು ವಿಧಿಸಿ ಬಳಿಕ ಈ ಬಾರ್ಡರ್ ಮಾರ್ಚ್ ಅನ್ನು ರದ್ದುಗೊಳಿಸಿದ್ದಾರೆ. ಭಾನುವಾರ ಲೇಹ್‌ನಿಂದ ಗಡಿವರೆಗೆ ಪಶ್ಮಿನಾ ಮಾರ್ಚ್ ಕರೆಯನ್ನು ನೀಡಲಾಗಿತ್ತು.
ಕೇಂದ್ರಾಡಳಿತ ಪ್ರದೇಶದ ಆಡಳಿತವು ಈ ಪ್ರದೇಶದಲ್ಲಿ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಈ ಕಾರಣದಿಂದಾಗಿ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಮಾರ್ಚ್ ಅನ್ನು ಹಿಂಪಡೆಯುವುದಾಗಿ ವಾಂಗ್‌ಚುಕ್ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಲಡಾಖ್‌ನ ಪರಿಸರ ಮತ್ತು ಸ್ಥಳೀಯ ಸಂಸ್ಕೃತಿಯ ರಕ್ಷಣೆಗಾಗಿ 21 ದಿನಗಳ ಉಪವಾಸ ಕುಳಿತಿದ್ದ ವಾಂಗ್‌ಚುಕ್, ಏಪ್ರಿಲ್ 7 ರಂದು ಚೀನಾ ಗಡಿಗೆ ಮೆರವಣಿಗೆಗೆ ಕರೆ ನೀಡಿದ್ದರು. ಸ್ಥಳೀಯ ಬುಡಕಟ್ಟು ಮುಖಂಡರ ನೇತೃತ್ವದಲ್ಲಿ ಮೆರವಣಿಗೆ ನಡೆಯಬೇಕಿತ್ತು.
ಇದನ್ನು ಓದಿದ್ದೀರಾ? ಲೇಹ್ ಬಾರ್ಡರ್ ಮಾರ್ಚ್| ಸೆಕ್ಷನ್ 144 ಜಾರಿ, ಇಂಟರ್ನೆಟ್ ವೇಗ 2ಜಿಗೆ ಇಳಿಕೆ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಂಗ್‌ಚುಕ್, “ನಾವು ಕಳೆದ 35 ದಿನಗಳಿಂದ ಉಪವಾಸ ಮತ್ತು ಪ್ರಾರ್ಥನೆಯ ರೂಪದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ಏಪ್ರಿಲ್ 7 ರಂದು ಶಾಂತಿಯುತ ಮೆರವಣಿಗೆಯನ್ನು ಯೋಜಿಸಿದ್ದೇವೆ. ಉತ್ತರದಲ್ಲಿ ಚೀನಾದ ಆಕ್ರಮಣ ಮತ್ತು ನಮ್ಮದೇ ಕಾರ್ಪೊರೇಟ್‌ಗಳಿಂದ ಸಾವಿರಾರು ಚದರ ಕಿಲೋಮೀಟರ್ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಚಂಗ್ಪಾ ಅಲೆಮಾರಿ ಬುಡಕಟ್ಟು ಜನಾಂಗದವರ ದುಃಸ್ಥಿತಿಯನ್ನು ಎತ್ತಿ ತೋರಿಸುವುದು ಪಶ್ಮಿನಾ ಮಾರ್ಚ್‌ನ ಉದ್ದೇಶವಾಗಿತ್ತು” ಎಂದು ತಿಳಿಸಿದರು.
PASHMINA MARCH ACHIEVES PURPOSE BEFORE IT STARTS…
People of Ladakh have been fasting in protest for the last 32 days. These have happened in the most peaceful ways through prayers & fasts.The purpose of the Pashmina March was to highlight the plight of the Changpa nomadic… pic.twitter.com/yqAgJEqYzi
— Sonam Wangchuk (@Wangchuk66) April 6, 2024
“ಮಾರ್ಚ್‌ನ ಉದ್ದೇಶವನ್ನು ಮಾರ್ಚ್‌ಗೆ ಮುಂಚಿತವಾಗಿಯೇ ಪೂರೈಸಲಾಗಿದೆ” ಎಂದು ಹೇಳಿದ ಅವರು, ಸರ್ಕಾರವು “ನಿಗ್ರಹ” ಮಾಡುವ ಪ್ರಯತ್ನ ಮಾಡುತ್ತಿದೆ, ಅತಿಯಾದ ಪ್ರತಿಕ್ರಿಯೆ ಮಾಡುತ್ತಿದೆ ಎಂದಿದ್ದಾರೆ. “ಈ ಪರಿಸ್ಥಿತಿಗಳಲ್ಲಿ ಹಿಂಸಾಚಾರದ ಸಾಧ್ಯತೆಗಳು ತುಂಬಾ ಹೆಚ್ಚು, ಅದು ಆಗಬಹುದು. ಇದರಿಂದಾಗಿ ಈ ಶಾಂತಿಯುತ ಆಂದೋಲನವನ್ನು ರಾಷ್ಟ್ರವಿರೋಧಿ ಎಂಬ ಹಣೆಪಟ್ಟಿ ಕಟ್ಟಬಹುದು. ಆದರೆ ನಡೆಯುತ್ತಿರುವ ಶಾಂತಿಯುತ ಉಪವಾಸ ಮುಂದುವರಿಯಲಿದೆ” ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಲಡಾಖ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಪ್ರಕಾಶ್ ರಾಜ್; ವಾಂಗ್‌ಚುಕ್ ಹೋರಾಟಕ್ಕೆ ಬೆಂಬಲ
ಲಡಾಖ್‌ಗೆ ರಾಜ್ಯತ್ವ ನೀಡಲು, ಸಂವಿಧಾನದ ಆರನೇ ಪರಿಚ್ಛೇದದಡಿ ಸೇರಿಸಲು ಆಗ್ರಹಿಸಿ, ಇತರೆ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಕೇಂದ್ರದೊಂದಿಗಿನ ಹಲವಾರು ಸುತ್ತಿನ ಮಾತುಕತೆ ವಿಫಲವಾಗಿದ್ದು, ಈಗ ಪ್ರತಿಭಟನೆಯ ಕಾವು ಅಧಿಕವಾಗುತ್ತಿದೆ. 2019ರ ಲೋಕಸಭೆ ಚುನಾವಣೆ ಮತ್ತು 2020 ರ ಸ್ಥಳೀಯ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ, ಕೇಂದ್ರಾಡಳಿತ ಪ್ರದೇಶಕ್ಕೆ 6ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆಯ ಬಗ್ಗೆ ಬಿಜೆಪಿ ಭರವಸೆ ನೀಡಿತು. 2019ರಲ್ಲಿ ಲಡಾಖ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಿತು. ಆದರೆ ಈವರೆಗೂ ಭರವಸೆಯನ್ನು ಈಡೇರಿಸಿಲ್ಲ.