ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023ರಲ್ಲಿ ಯುಎಸ್‌ಗೆ ತೆರಳಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಇಂದು ತಿಳಿಸಿದೆ. ಇದು ಈ ವರ್ಷದಲ್ಲಿ ಅಮೆರಿಕಾದಲ್ಲಿ ನಡೆದ ಭಾರತೀಯರ ಸಾವಿಗೆ ಸಂಬಂಧಿಸಿದ 11ನೇ ಪ್ರಕರಣವಾಗಿದೆ.
ಹೈದರಾಬಾದ್ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದರು. ಭಾರತೀಯ ರಾಯಭಾರಿ ಕಚೇರಿ ನಿರಂತರವಾಗಿ ಅಬ್ದುಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿತ್ತು. ಆದರೆ ಈಗ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.
Anguished to learn that Mr. Mohammed Abdul Arfath, for whom search operation was underway, was found dead in Cleveland, Ohio.
Our deepest condolences to Mr Mohammed Arfath’s family. @IndiainNewYork is in touch with local agencies to ensure thorough investigation into Mr… https://t.co/FRRrR8ZXZ8
— India in New York (@IndiainNewYork) April 9, 2024
“ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೊಹಮ್ಮದ್ ಅಬ್ದುಲ್ ಅರ್ಫಾತ್ ಅವರು ಓಹಿಯೋದ ಕ್ಲೀವ್ಲ್ಯಾಂಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಮೊಹಮ್ಮದ್ ಅರ್ಫಾತ್ ಅವರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪಗಳು” ಎಂದು ರಾಯಭಾರಿ ಕಚೇರಿ ಎಕ್ಸ್ (ಟ್ವಿಟ್ಟರ್) ಪೋಸ್ಟ್‌ನಲ್ಲಿ ಹೇಳಿದೆ.
“ಭಾರತೀಯ ರಾಯಭಾರಿ ಕಚೇರಿಯು ಮೊಹಮ್ಮದ್ ಅಬ್ದುಲ್ ಅರ್ಫಾತ್ ಸಾವಿನ ಸಂಪೂರ್ಣ ತನಿಖೆ ನಡೆಸುವ ಸ್ಥಳೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಸಾಗಿಸಲು ನಾವು ಕುಟುಂಬಕ್ಕೆ ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದ್ದೇವೆ” ಎಂದು ಕೂಡಾ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಅಮೆರಿಕಾ| ಮತ್ತೋರ್ವ ಭಾರತೀಯ ವಿದ್ಯಾರ್ಥಿ ಮೃತ್ಯು; ಈ ವರ್ಷದಲ್ಲಿ ಹತ್ತನೇ ಘಟನೆ
ಮಾರ್ಚ್ 7 ರಂದು ಕೊನೆಯದಾಗಿ ತನ್ನ ಮಗನ ಬಳಿ ಮಾತನಾಡಿದ್ದು, ಅದಾದ ಬಳಿಕ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅರ್ಫಾತ್ ತಂದೆ ಮೊಹಮ್ಮದ್ ಸಲೀಂ ಹೇಳಿದ್ದಾರೆ. ಮಾರ್ಚ್ 19 ರಂದು, ಸಲೀಮ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಅರ್ಫಾತ್ ಅವರನ್ನು ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅಪಹರಿಸಿದೆ ಎಂದು ಹೇಳಿದ್ದಾರೆ. ಜೊತೆಗೆ ಮಗ ಜೀವಂತವಾಗಿ ಬೇಕಿದ್ದರೆ 1,200 ಡಾಲರ್ ನೀಡುವಂತೆ ಬೆದರಿಕೆ ಹಾಕಿದ್ದರು.
“ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದವರು ನನ್ನ ಮಗನನ್ನು ಅಪಹರಿಸಲಾಗಿದೆ ಎಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಕರೆ ಮಾಡಿದವರು ಪಾವತಿ ಹೇಗೆ ಮಾಡುವುದು ಎಂದು ಹೇಳಿಲ್ಲ. ನಾನು ನನ್ನ ಮಗನೊಂದಿಗೆ ಮಾತನಾಡಬೇಕು ಎಂದು ಕರೆ ಮಾಡಿದವರಲ್ಲಿ ವಿನಂತಿಸಿದೆ, ಆದರೆ ಅವರು ನಿರಾಕರಿಸಿದರು” ಎಂದು ಸಲೀಂ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಹನ್ನೊಂದನೇ ಪ್ರಕರಣ
ಈ ವರ್ಷ ಅಂದರೆ ಬರೀ ಮೂರು ತಿಂಗಳ ಅವಧಿಯಲ್ಲಿ ಅಮೆರಿಕಾದಲ್ಲಿ ಹಲವಾರು ಭಾರತೀಯ ಮತ್ತು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದು ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯ ಕುಟುಂಬಕ್ಕೆ ಆತಂಕ ಉಂಟು ಮಾಡಿದೆ. ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಸಾವು ಮತ್ತು ಜಾರ್ಜಿಯಾದಲ್ಲಿ ವಿವೇಕ್ ಸೈನಿಯ ಕ್ರೂರ ಹತ್ಯೆಯು ಈ ವರ್ಷದಲ್ಲೇ ನಡೆದಿರುವ ಘಟನೆಗಳಾಗಿದೆ. 27 ವರ್ಷದ ವೆಂಕಟರಮಣ ಪಿಟ್ಟಲ ಜಲವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ನಾಪತ್ತೆ
2024 ರ ಆರಂಭದಿಂದ ಈವರೆಗಿನ ಮೂರು ತಿಂಗಳ ಅವಧಿಯಲ್ಲಿ ಭಾರತೀಯ ಅಥವಾ ಭಾರತೀಯ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ ಹನ್ನೊಂದನೇ ಘಟನೆ ಇದಾಗಿದೆ. ಹಲವಾರು ವಿದ್ಯಾರ್ಥಿಗಳ ಸಾವಿಗೆ ಕಾರಣ ಇನ್ನೂ ದೃಢಪಟ್ಟಿಲ್ಲ.
ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್ ಒಂದು ನೆಚ್ಚಿನ ತಾಣವಾಗಿದೆ. ಯುಎಸ್ ಪ್ರಕಾರ, 2022-2023 ಅವಧಿಯಲ್ಲಿ 2.6 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ವಲಸೆ ಹೋಗಿದ್ದಾರೆ. ಈ ಹಿಂದಿನ ಅವಧಿಗಿಂತ ಇದು ಶೇಕಡ 35ರಷ್ಟು ಜಿಗಿತವಾಗಿದೆ.