ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿನ ಮೊಟ್ಟೆ ಕೇಂದ್ರವೊಂದರ ಮೇಲೆ ದಾಳಿ ನಡೆಸಿದ್ದಾರೆ. ಲೆಕ್ಕಪತ್ರವಿಲ್ಲದ ಸುಮಾರು ₹32 ಕೋಟಿ ನಗದನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಕೋಳಿ ಫಾರಂನಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ, ಸುಮಾರು ₹32 ಕೋಟಿ ಲೆಕ್ಕ ಪತ್ರವಿಲ್ಲದ ಹಣ ಮೊಟ್ಟೆ ಕೇಂದ್ರದಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇಲಾಖೆ ಅಧಿಕಾರಿಗಳು ಮೂರು ಬಾಕ್ಸ್‌ಗಳಲ್ಲಿ ಹಣವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಐಟಿ ಅಧಿಕಾರಿಗಳು ಸೋಮವಾರ ಸಂಜೆ ಪೊಲ್ಲಾಚಿಯ ವೆಂಕಟೇಶ ಕಾಲೋನಿಯಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಶೋಧ ಆರಂಭಿಸಿದ್ದಾರೆ. ಮಂಗಳವಾರ 15 ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಸುಮಾರು ₹32 ಕೋಟಿ ವಶಪಡಿಸಿಕೊಳ್ಳಲಾಗಿದೆ. ದಾಳಿಯ ನಂತರ, ಬ್ಯಾಂಕ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ವಶಪಡಿಸಿಕೊಂಡ ಮೊತ್ತವನ್ನು ಎಣಿಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ವೈಮಾನಿಕ ಕೇಂದ್ರವಾಗಿ ಬೆಂಗಳೂರು ಅಭಿವೃದ್ಧಿ; ಏರ್ ಇಂಡಿಯಾ-ಬಿಐಎಎಲ್ ಒಪ್ಪಂದ
ಅಪಾರ ಪ್ರಮಾಣದ ಹಣವನ್ನು ಮತದಾರರಿಗೆ ಹಂಚಲು ಇಡಲಾಗಿದೆಯೇ ಎಂದು ಊಹಿಸಲಾಗಿದೆ. ಐಟಿ ಜತೆಗೆ ಚುನಾವಣಾಧಿಕಾರಿಗಳೂ ತನಿಖೆ ಆರಂಭಿಸಿದ್ದಾರೆ.
“ಪೊಲ್ಲಾಚಿಯ ಸಹೋದರರಾದ ಅರುಲ್ ಮುರುಗನ್ ಮತ್ತು ಸರವಣ ಮುರುಗನ್ ಅವರು ಈ ಕೋಳಿ ಫಾರಂ ಅನ್ನು ನಡೆಸುತ್ತಿದ್ದರು. ಅಲ್ಲದೇ, ಇವರು ರಾಜ್ಯಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದ್ದಾರೆ” ಎನ್ನಲಾಗಿದೆ.