ಬೆಂಗಳೂರನ್ನು ದಕ್ಷಿಣ ಭಾರತದ ಪ್ರಮುಖ ವಿಮಾನಯಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಒಪ್ಪಂದ ಮಾಡಿಕೊಂಡಿವೆ.
ಮುಂದಿನ ಕೆಲವು ವರ್ಷಗಳಲ್ಲಿ ನಾನಾ ದೇಶಗಳಿಂದ ಭಾರತಕ್ಕೆ ಮತ್ತು ಭಾರತದಿಂದ ಇತರ ಪ್ರಮುಖ ದೇಶಗಳಿಗೆ ವಿಮಾನ ಸಂಪರ್ಕವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಈ ಒಪ್ಪಂದವು ಭಾರತೀಯ ವಾಯುಯಾನ ಉದ್ಯಮದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಬಿಐಎಎಲ್ ಹೇಳಿದೆ.
ಈ ಬಗ್ಗೆ ಬಿಐಎಎಲ್ ಪ್ರಕಟಣೆ ಹೊರಡಿಸಿದ್ದು, “ಈ ಒಪ್ಪಂದವು ಭಾರತೀಯ ವಾಯುಯಾನ ಉದ್ಯಮದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಏರ್ ಇಂಡಿಯಾ (ಇತರ ಟಾಟಾ ಗ್ರೂಪ್ ಏರ್ಲೈನ್ಸ್ ಕಂಪನಿಗಳಾದ ಎಐಎಕ್ಸ್ ಮತ್ತು ವಿಸ್ತಾರಾವನ್ನೂ ಒಳಗೊಂಡು) ಮತ್ತು ಬಿಐಎಎಲ್ ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಸಂಪರ್ಕ, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಸಹಕಾರಿಯಾಗಿದೆ” ಎಂದಿದೆ.
“ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಟಾಟಾ ಸಮೂಹದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ವಿಸ್ತಾರಾ ಪ್ರೀಮಿಯಂ ಪ್ರಯಾಣಿಕರಿಗೆ ಮೀಸಲಾದ ದೇಶೀಯ ವಿಶ್ರಾಂತಿ ಕೋಣೆ ನಿರ್ಮಿಸುವುದು ಸೇರಿದಂತೆ ಇತರೆ ಸೌಕರ್ಯಗಳನ್ನು ನಿರ್ಮಿಸುವುದು ಯೋಜನೆಯ ಭಾಗವಾಗಿದೆ” ಎಂದು ಹೇಳಿದೆ.
“ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಸೌಲಭ್ಯ (ಎಂಆರ್‌ಒ)ಗಳನ್ನು ಸ್ಥಾಪಿಸಲು ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆಯು ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ರಾಜ್ಯದಲ್ಲಿ 1,200 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜಿಸಲಾಗಿದೆ” ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕ್ಯಾಂಪ್ಬೆಲ್ ವಿಲ್ಸನ್, “ಬೆಂಗಳೂರು ವಾಯು ಸಂಪರ್ಕ ಕೇಂದ್ರದ ಹಬ್ ಆಗಿದ್ದು, ವಿಮಾನಯಾನ ಹಾಗೂ ವಿಮಾನ ನಿಲ್ದಾಣದಲ್ಲಿನ ದಕ್ಷ ಕಾರ್ಯಾಚರಣೆಯಿಂದ ಗ್ರಾಹಕರು ಉತ್ತಮ ಅನುಭವ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣದ ಅನುಭೂತಿಯನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ವಾಯು ಸಂಪರ್ಕವನ್ನು ವಿಸ್ತರಿಸಲು ನಾವು ಮುಂದಾಗಿದ್ದೇವೆ. ಇದಕ್ಕಾಗಿ ಪ್ರಮುಖ ಎಂಆರ್‌ಒ ಕೇಂದ್ರವನ್ನು ನಿರ್ಮಿಸುವ ದೃಷ್ಟಿಯಿಂದ ಬಿಐಎಎಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಪಾಲುದಾರಿಕೆಯು ಏರ್ ಇಂಡಿಯಾ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಶರ್ಟ್ ಗುಂಡಿ ಇಲ್ಲದಕ್ಕೆ ಕಾರ್ಮಿಕನಿಗೆ ರೈಲು ಹತ್ತಲು ಬಿಡದ ಸಿಬ್ಬಂದಿ
ಬೆಂಗಳೂರು ಇಂಟರ್ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, “ಬಿಎಲ್ಆರ್ ವಿಮಾನ ನಿಲ್ದಾಣವನ್ನು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಅಂತಾರಾಷ್ಟ್ರೀಯ ಗೇಟ್ವೇ ಆಗಿ ತನ್ನ ಸ್ಥಾನವನ್ನು ಬಲಪಡಿಸಲು ಸಮರ್ಪಿಸಲಾಗಿದೆ. ಈ ಸಹಯೋಗವು ಭಾರತೀಯ ವಿಮಾನ ನಿಲ್ದಾಣಗಳನ್ನು ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಾಗರಿಕ ವಿಮಾನಯಾನ ಸಚಿವಾಲಯದ ದೃಷ್ಟಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ” ಎಂದಿದ್ದಾರೆ.
“ಬೆಂಗಳೂರು ಮತ್ತು ನಮ್ಮ ಕ್ಯಾಚ್ಮೆಂಟ್ನಿಂದ ಹೊರಹೋಗುವ ಅರ್ಧದಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರು ಯುರೋಪ್, ಉತ್ತರ ಅಮೆರಿಕಾ, ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. ಏರ್ ಇಂಡಿಯಾದೊಂದಿಗಿನ ನಮ್ಮ ಮೈತ್ರಿಯು ಈ ಗುರಿಯತ್ತ ಗಣನೀಯವಾದ ಏರಿಕೆ ಕಾಣುತ್ತದೆ. ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ದೀರ್ಘ–ಪ್ರಯಾಣದ ಮಾರ್ಗಗಳ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.