ಚುನಾವಣೆ ಪ್ರಾರಂಭವಾಗುವ ಕೆಲವು ದಿನಗಳ ಮುಂಚೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ರಾಜ್ಯದ 48 ಲೋಕಸಭಾ ಸ್ಥಾನಗಳಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಮೈತ್ರಿಕೂಟದ ಹಿರಿಯ ನಾಯಕರು ಏ.9ರಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 21 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಹಾಗೂ ಉಳಿದ 10 ಸ್ಥಾನಗಳಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸೀಟು ಹಂಚಿಕೆಯಲ್ಲಿ ಸಿಂಹಪಾಲು ಪಡೆದಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಂಬೈನ ಆರು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಇನ್ನೆರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
“ಸರ್ವಾಧಿಕಾರಿ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಈ ಸರ್ವಾಧಿಕಾರಿಗಳ ವಿರುದ್ಧ ಹೋರಾಡಲು ನಮ್ಮ ಕಾರ್ಯಕರ್ತರು ದೇಶಾದ್ಯಂತ ಕೆಲಸ ಮಾಡಿದ್ದಾರೆ. ಬಿಜೆಪಿಯನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಶ್ರಮಿಸುತ್ತೇವೆ” ಎಂದು ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಮುಖ್ಯಸ್ಥರು ಹೇಳಿದರು.
“ನಾವು ಮುನ್ನಡೆಯಬೇಕಾದ ಸಮಯ ಬರುತ್ತದೆ. ಚುನಾವಣೆಯಲ್ಲಿ ಗೆಲ್ಲುವ ಗುರಿಯೊಂದಿಗೆ ಈ ಒಪ್ಪಂದಕ್ಕೆ ಬಂದಿದ್ದೇವೆ. ನಾವು ಸೀಟ್ ಹಂಚಿಕೆ ಮಾಡಿದ್ದೇವೆ. ಈಗ ಜನರು ನಿರ್ಧರಿಸುತ್ತಾರೆ” ಎಂದು ಠಾಕ್ರೆ ತಿಳಿಸಿದರು.
“ಇನ್ನೂ ಘೋಷಿಸದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು” ಎಂದು ಪವಾರ್ ಹೇಳಿದರು.
ಮಾಜಿ ಕುಸ್ತಿಪಟು ಚಂದ್ರಹರ್ ಪಾಟೀಲ್ ಅವರನ್ನು ಭಿವಂಡಿ ಅಭ್ಯರ್ಥಿಯಾಗಿ ದೃಢಪಡಿಸಲಾಗಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿಯ ಕಪಿಲ್ ಪಾಟೀಲ್ ಈ ಕ್ಷೇತ್ರವನ್ನು ಗೆದ್ದಿದ್ದರು.
ಅದೇ ರೀತಿ ಹಿಂದಿನ ಎರಡು ಚುನಾವಣೆಗಳಲ್ಲಿ ಸಾಂಗ್ಲಿಯನ್ನು ಬಿಜೆಪಿಯ ಸಂಜಯಕಾಕ ಪಾಟೀಲ್ ಗೆದ್ದುಕೊಂಡಿದ್ದು, ಪಕ್ಷದ ಸಹೋದ್ಯೋಗಿ ಕಪಿಲ್ ಪಾಟೀಲ್ ಅವರಂತೆ ಸತತ ಮೂರನೇ ಬಾರಿಗೆ ತಮ್ಮ ಸ್ಥಾನವನ್ನು ಗೆಲ್ಲುವ ಅವಕಾಶವನ್ನು ನೀಡಲಾಗಿದೆ.
ಸಾಂಗ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1962 ರಿಂದ 2009 ರವರೆಗೆ ಪಕ್ಷವು ಈ ಸ್ಥಾನದಲ್ಲಿ ಪ್ರಾಬಲ್ಯ ಸಾಧಿಸಿತ್ತು.
ಭಿವಂಡಿಯ ಹೊರತಾಗಿ, ಎನ್‌ಸಿಪಿ ಬಣವು ಕುಟುಂಬದ ಭದ್ರಕೋಟೆಯಾದ ಬಾರಾಮತಿಯಲ್ಲಿ ಸ್ಪರ್ಧಿಸಲಿದೆ. ಇದು ಶರದ್ ಪವಾರ್ ಅವರ ಪುತ್ರಿ ಹಾಲಿ ಸಂಸದೆ ಸುಪ್ರಿಯಾ ಸುಳೆ ಮತ್ತು ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ನಡುವಿನ ಚುನಾವಣಾ ಕಣವಾಗಲಿದೆ.
ಈ ಸುದ್ದಿ ಓದಿದ್ದೀರಾ? ವೈಮಾನಿಕ ಕೇಂದ್ರವಾಗಿ ಬೆಂಗಳೂರು ಅಭಿವೃದ್ಧಿ; ಏರ್ ಇಂಡಿಯಾ-ಬಿಐಎಎಲ್ ಒಪ್ಪಂದ
2019ರ ಚುನಾವಣಾ ಫಲಿತಾಂಶ
2019ರಲ್ಲಿ ಬಿಜೆಪಿ ಜೊತೆ ಸ್ಪರ್ಧಿಸಿದ್ದ ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18ರಲ್ಲಿ ಜಯ ಸಾಧಿಸಿತ್ತು. ಮುಂಬೈ ಸೌತ್ ಸೆಂಟ್ರಲ್ ಹಾಗೂ ನಾರ್ತ್ವೆಸ್ಟ್ ಎರಡರಲ್ಲೂ ಗೆಲುವು ಸಾಧಿಸಿತ್ತು. ಆದರೆ, ಈಗ ಬಹುಪಾಲು ಗೆದ್ದ ಸಂಸದರು ಶಿಂಧೆ ಬಣದಲ್ಲಿದ್ದಾರೆ. ಇನ್ನು ಕಾಂಗ್ರೆಸ್ 25 ಕ್ಷೇತ್ರದಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದರೆ, ಶರದ್ ಪವಾರ್ ಎನ್‌ಸಿಪಿ 19ರಲ್ಲಿ ಸ್ಪರ್ಧಿಸಿ 4ರಲ್ಲಿ ಗೆದ್ದಿದೆ. ಎನ್‌ಸಿಪಿ ಕೂಡ 2 ಬಣವಾಗಿದೆ.
ಬಿಜೆಪಿ ಕಳೆದ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಸ್ಪರ್ಧಿಸಿದ್ದ 25 ಅಭ್ಯರ್ಥಿಗಳಲ್ಲಿ 23 ಮಂದಿ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿಗೆ ಏಕನಾಥ್ ಶಿಂಧೆ ಅವರ ಶಿವಸೇನೆ, ಅಜಿತ್ ಪವಾರ್ರ ಎನ್‌ಸಿಪಿ ಬೆಂಬಲ ನೀಡಲಿವೆ.
2019ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮಿತ್ರಪಕ್ಷಗಳಾಗಿದ್ದರು. ಆದರೆ, ತದನಂತರ ನಡೆದ ಅಸೆಂಬ್ಲಿ ಚುನಾವಣೆಯ ನಂತರ ಬೇರ್ಪಟ್ಟಿದ್ದವು.