ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

Date:

Advertisements
ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ ಬ್ರಾಹ್ಮಣರು ಪೆರಿಯಾರ್‌ ಅವರ ಚಿಂತನೆಗಳಿಗೆ ಬೆಂಬಲ ನೀಡುತ್ತಿರುವ ಬೆಳವಣಿಗೆ ಮೇಲರಿಮೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಬ್ರಾಹ್ಮಣರಲ್ಲಿ ದುಃಖವನ್ನುಂಟು ಮಾಡಿದೆ ಎನ್ನುವುದು ಸತ್ಯ…

‘ದ ಮ್ಯೂಸಿಕ್‌ ಅಕಾಡೆಮಿ’ ಹಾಡುಗಾರ ಟಿ.ಎಂ. ಕೃಷ್ಣರಿಗೆ ನೀಡಿರುವ ಸಂಗೀತ ಕಲಾನಿಧಿ ಪ್ರಶಸ್ತಿ ಕರ್ನಾಟಕ ಸಂಗೀತಗಾರ ನಡುವೆ ಇದ್ದಂತಹ ಬಿರುಕುಗಳನ್ನು ಇನ್ನಷ್ಟು ವಿಸ್ತರಿಸಿದೆ. ಪ್ರಮುಖ ಕಲಾವಿದರು, ಬರಹಗಾರರು, ಜನಪ್ರಿಯ ವ್ಯಕ್ತಿಗಳು ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಯುದ್ಧದಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬರು ತಮ್ಮ ನಿಲುವು ಮತ್ತು ನಿಲುವಿಗೆ ಪೂರಕವಾದ ಸಾಕ್ಷಗಳನ್ನು ಪ್ರತಿಪಾದಿಸುತ್ತಿದ್ದಾರೆ.

ಇತ್ತೀಚೆಗೆ ಕೃಷ್ಣರು ಪೆರಿಯಾರ್‌ ಅವರ ಹೊಗಳುವ ಹಾಡೊಂದನ್ನು ಕಛೇರಿಯೊಂದರಲ್ಲಿ ಹಾಡಿದ್ದು ಅನೇಕರಲ್ಲಿ ಉಗ್ರ ಸಿಟ್ಟು ತರಿಸಿದೆ. ಕರ್ನಾಟಕ ಸಂಗೀತದ ಪ್ರಸ್ತುತಿಯಲ್ಲಿ ಕೃಷ್ಣರು ನಡೆಸುತ್ತಿದ್ದ ಪ್ರಯೋಗಗಳ ಕುರಿತು ಮತ್ತು ಸಂಗೀತಗಾರರ ಸಮುದಾಯದ ಸದಸ್ಯರ ಕುರಿತು ಅವರಾಡುತ್ತಿದ್ದ ಮಾತುಗಳ ಕುರಿತು ಸಿಡಿಮಿಡಿಯಾಗದ್ದವರೆಲ್ಲಾ ಈಗ ಅವರ ಮೇಲೆ ದೊಡ್ಡ ಯುದ್ಧವನ್ನೇ ಸಾರಿದ್ದಾರೆ. ಸ್ವತಃ ಬ್ರಾಹ್ಮಣರಾಗಿರುವ ಕೃಷ್ಣರು ಬ್ರಾಹ್ಮಣರ ಮಾರಣಹೋಮಕ್ಕೆ ಕರೆ ನೀಡಿದ್ದ ಪೆರಿಯಾರ್‌ ಅವರನ್ನು ಹೊಗಳಿ ಸಂಗೀತ ಕಛೇರಿಯಲ್ಲಿ ಹಾಡಿದ್ದು ಅವರ ವಿರೋಧಿಗಳಿಗೆ ಬಹು ದೊಡ್ಡ ಅಪರಾಧವಾಗಿ ಕಂಡಿದೆ. ಅಲ್ಪಸಂಖ್ಯಾತ ಸಮುದಾಯವೊಂದನ್ನು ಅಪಾರವಾದ ಶಿಕ್ಷೆಗೆ ಒಳಪಡಿಸಲಾಗುತ್ತಿದೆ ಕೂಗುತ್ತಿರುವ ಬಲಪಂಥೀಯತೆಯ ಅನುಯಾಯಿಗಳ ಈ ನಡೆ ಸೂಕ್ಷ್ಮರಿಗೆ ಸೋಜಿಗದ ವಿಚಾರವಾಗದೇ ಇರದು.

ಕೃಷ್ಣರು ಪೆರಿಯಾರ್‌ ಅವರ ಕುರಿತು ತಳೆದಿರುವ ನಿಲುವನ್ನು ಅವರ ಬೆಂಬಲಿಗರು ಸ್ವಾಗತಿಸಿದ್ದಾರೆ. ಅವರ ಪರವಾಗಿ ಮುಖ್ಯಮಂತ್ರಿ ಸ್ಟಾಲಿನ್‌, ಸಂಸದೆ ಕನಿಮೋಳಿ ಕರುಣಾನಿಧಿ ಮತ್ತು ದ್ರಾವಿಡ ಕಳಗಂ ನಾಯಕ ಕೆ. ವೀರಮಣಿ ನಿಂತಿದ್ದಾರೆ. ”ತಮ್ಮ ಗುರಿ ಬ್ರಾಹ್ಮಣರನ್ನು ದೇಶದಿಂದ ಹೊರಹಾಕುವುದಲ್ಲ, ಬದಲಿಗೆ ಸಮಾನ ವ್ಯವಸ್ಥೆಯನ್ನು ನಿರ್ಮಿಸುವುದು” ಎನ್ನುವ ಪೆರಿಯಾರ್‌ ಅವರ ಹೇಳಿಕೆಯನ್ನು ವೀರಮಣಿ ನೆನಪಿಸಿದ್ದಾರೆ.

Advertisements

ಆದರೆ ಮೇಲೆ ಉಲ್ಲೇಖಿತವಾಗಿರುವ ಮಾತುಗಳಿಗೆ ಬಲಪಂಥೀಯರು ಕಿವಿಯಾಗುವ ಸಾಧ್ಯತೆ ಕ್ಷೀಣವಾಗಿದೆ. ಸದಾ ಕಾಲ ನೆಹರೂ ಅವರನ್ನು ಹೀಗೆಳೆಯುವ ಇವರಿಗೆ ಈ ವಿಚಾರದಲ್ಲಿ ಮಾತ್ರ ಅಚ್ಚರಿಯ ಆಘಾತವೊಂದು ಕಾದಿದೆ. ಅದೇನೆಂದರೆ ನೆಹರೂ ಅವರು ಕಾಮರಾಜರಿಗೆ 1957ರಲ್ಲಿ ಪತ್ರ ಬರೆದು ಪೆರಿಯಾರ್‌ ಬ್ರಾಹ್ಮಣರ ವಿರುದ್ಧದ ಮಾತುಗಳಿಂದಾಗಿ ಬ್ರಾಹ್ಮಣ ಸಮುದಾಯದ ಮೇಲೆ ಹಿಂಸಾಚಾರ ನಡೆಯುತ್ತಿರುವ ಆರೋಪದ ಕುರಿತು ಟೀಕಿಸುತ್ತಾರೆ. ಅದೇ ಸಮಯದಲ್ಲಿ, ಪೆರಿಯಾರ್‌ ಇಂತಹ ಕೃತ್ಯದಲ್ಲಿ ಪಾಲ್ಗೊಂಡಿರಲಿಲ್ಲವೆಂದು ಹೇಳಲು ಅವರ ಬೆಂಬಲಿಗರಿಗೆ ಅವಕಾಶವಿಲ್ಲ. ಏಕೆಂದರೆ, ‘ವಿಡುತಲೈ’ ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯುತ್ತ ಇಂತಹ ಹೇಳಿಕೆಗಳನ್ನು ತಾವು ನೀಡಿರುವುದಾಗಿ ಸ್ವತಃ ಪೆರಿಯಾರ್‌ ಒಪ್ಪಿಕೊಳ್ಳುತ್ತಾರೆ. ಇಂತಹ ಹೇಳಿಕೆಗಳ ಉದ್ದೇಶ ಕೆಳವರ್ಗದವರಲ್ಲಿ ಮತ್ತು ಶೋಷಿತರಲ್ಲಿ ತಮ್ಮ ಸ್ಥಾನಮಾನದ ಕುರಿತು ಅಸಹ್ಯ ಮೂಡಿಸುವುದು ಮಾತ್ರವಾಗಿತ್ತೆನ್ನುವ ಅವರು, ತಮ್ಮ ಹೇಳಿಕೆಯ ಕಾರಣದಿಂದ ಹಿಂಸಾಚಾರ ನಡೆದ ಯಾವುದೇ ಉದಾಹರಣೆಗಳಿಲ್ಲ ಎನ್ನುತ್ತಾರೆ.

ಪೆರಿಯಾರ್‌ ಅವರ ಬೆಂಬಲಿಗರು ರಾಜಾಜಿಯಂತಹ ಅನೇಕ ಬ್ರಾಹ್ಮಣ ಸಮುದಾಯದ ನಾಯಕರೊಂದಿಗೆ ಪೆರಿಯಾರ್‌ ಹೊಂದಿದ್ದ ಉತ್ತಮ ಸಂಬಂಧವನ್ನು ತಮ್ಮ ವಾದವನ್ನು ಸಮರ್ಥಿಸಲು ಉದಾಹರಣೆಯಾಗಿ ನೀಡುತ್ತಾರೆ. ಅಲ್ಲದೆ ”ನನ್ನ ವಿರೋಧ ಇರುವುದು ಬ್ರಾಹ್ಮಣ್ಯದೆಡೆಗೆ ಹೊರತು ಬ್ರಾಹ್ಮಣರ ಕುರಿತಲ್ಲ” ಎಂದಿದ್ದ ಪೆರಿಯಾರ್‌ ಅವರ ಹೇಳಿಕಗಳನ್ನು ಇವರು ಮಂಡಿಸುತ್ತಾರೆ.

ಪೆರಿಯಾರ್‌ ವಿರೋಧಿಗಳು ಅವರು ಬ್ರಾಹ್ಮಣರ ವಿರುದ್ಧ ನೀಡಿದ್ದ ಹೇಳಿಕೆಗಳಲ್ಲಿರುವ ಆಕ್ರಮಣಕಾರಿ ಮತ್ತು ಅಶ್ಲೀಲ ಪದಗಳೆಡೆಗೆ ಬೆಟ್ಟು ಮಾಡುತ್ತಾರೆ. ಇಂತಹ ಹೇಳಿಕೆಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

ಮೊದಲಿಗೆ, ಬ್ರಾಹ್ಮಣ ವಿರೋಧಿ ಆಲೋಚನೆಗಳು ಪೆರಿಯಾರ್‌ ಅವರಿಗಿಂತ ಮೊದಲಿನಿಂದಲೂ ತಮಿಳುನಾಡಿನ ರಾಜಕೀಯದಲ್ಲಿ ಇತ್ತೆನ್ನುವುದನ್ನು ಗುರುತಿಸಬೇಕು. ಶೈವ ಚಿಂತಕರಾದ ಮರೈಮಲೈ ಅಡಿಗಳ್‌ ಮತ್ತು ದಲಿತ-ಬೌದ್ಧ ಚಿಂತಕರಾದ ಸಿ. ಅಯೋತಿ ದಾಸ್‌ ಇಬ್ಬರು ಬ್ರಾಹ್ಮಣರು ಹೊಂದಿದ್ದ ಪುರೋಹಿತಶಾಹಿ ಹಿರಿಮೆಯನ್ನು ಬಲವಾಗಿ ವಿರೋಧಿಸಿದ್ದರು. ದಾಸ್‌ ಅವರಂತೂ ಬ್ರಾಹ್ಮಣರು ಸೋಗಲಾಡಿಗಳೆಂದು ಕರೆಯುವ ಹಂತಕ್ಕೆ ಹೋಗಿದ್ದರು. 19 ಮತ್ತು 20ನೇ ಶತಮಾನಗಳಲ್ಲಿ ಅನೇಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತಕರು, ಬರಹಗಾರರು ಮತ್ತು ರಾಜಕೀಯ ನಾಯಕರು ಬ್ರಾಹ್ಮಣರ ವಿಶೇಷ ಸ್ಥಾನಮಾನದ ಹಕ್ಕುಸ್ಥಾಪನೆಯನ್ನು ಪ್ರಶ್ನಿಸಿದ್ದರು ಮತ್ತು ವಿರೋಧಿಸಿದ್ದರು. ಇಂತಹ ಆಲೋಚನೆಗಳನ್ನು ಪೆರಿಯಾರ್‌ ತಾವು 1925ರಲ್ಲಿ ಆರಂಭಿಸಿದ ಆತ್ಮಗೌರವದ ಚಳುವಳಿಯ ಭಾಗವಾಗಿಸಿಕೊಂಡರು. ”ಬ್ರಾಹ್ಮಣರು ಅರೆ-ದೇವತೆಗಳು ಮತ್ತು ದೈವಾಂಶ ಸಂಭೂತರು” ಎನ್ನುತ್ತಾರೆ ಅಂಬೇಡ್ಕರ್‌. ಪೆರಿಯಾರ್‌ ದೇವರನ್ನು ಹೀನಾಮಾನವಾಗಿ ಬೈಯುವ ಓರ್ವ ನಾಸ್ತಿಕರಾಗಿದ್ದರು; ದೈವಾಂಶ ಸಂಭೂತರೆಂದು ತಮ್ಮನ್ನು ತಾವು ಪರಿಗಣಿಸಿಕೊಂಡ ಬ್ರಾಹ್ಮಣರನ್ನು ಹೀಗೆಳೆಯುವುದು ಪೆರಿಯಾರ್‌ ನಾಸ್ತಿಕವಾದದ ಸಹಜ ಮುಂದುವರಿಕೆಯಾಗಿತ್ತು.

ಪೆರಿಯಾರ್‌ ನಿಧನರಾದಾಗ ನೀಡಿದ ಶೋಕ ಸಂದೇಶದಲ್ಲಿ ”ಅನೇಕ ವಿಶಿಷ್ಟತೆಗಳನ್ನು ಹೊಂದಿದ್ದ ಪೆರಿಯಾರ್‌ ಅವರು ತಮ್ಮ ಹೇಳಿಕೆಗಳಿಂದ ವಿವಾದಗಳಿಗೂ ಈಡಾಗುತ್ತಿದ್ದರು” ಎನ್ನುವ ಇಂದಿರಾಗಾಂಧಿ ”ಅವರು ಅನೇಕ ಒಪ್ಪಿತ ವಿಚಾರಗಳನ್ನು ಬದಲಿಸಿದರೆಂದು” ಹೇಳಿದ್ದಾರೆ(ಟೈಮ್ಸ್‌ ಆಫ್‌ ಇಂಡಿಯಾ, ಡಿಸೆಂಬರ್‌ 25, 1974). ಸಾರ್ವಜನಿಕ ಸೌಜನ್ಯ (ಪಬ್ಲಿಕ್‌ ಸಿವಿಲಿಟಿ) ಕುರಿತಾದ ಗ್ರಹಿಕೆಯನ್ನೇ ಬದಲಿಸಿದರು ಪೆರಿಯಾರ್‌.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಪಬ್ಲಿಕ್‌ ಸಿವಿಲಿಟಿ (ವಿನಯವಂತಿಕೆ/ಸೌಜನ್ಯ) ಕುರಿತಾಗಿ ವಿಶ್ವಮಾನ್ಯತೆ ಇರುವುದಾದರು, ವಿಶ್ವ ಮಾನ್ಯವಾದ ವ್ಯಾಖ್ಯಾನ ಇರುವುದಿಲ್ಲ. ಆಕ್ರಮಣರಹಿತ ವರ್ತನೆಯನ್ನು ಪಬ್ಲಿಕ್‌ ಸಿವಿಲಿಟಿ ಎಂದು ಅದರ ವಿಶಾಲಾರ್ಥದಲ್ಲಿ ಒಪ್ಪಬಹುದಾಗಿದೆ. ಒಂದು ಸಾರ್ವಜನಿಕ ಚರ್ಚೆಗೆ ಸಾಮಾನ್ಯವಾಗಿ ಸಾರ್ವಜನಿಕ ಭಾಷಾ ಬಳಕೆಯ ರೀತಿ ನೀತಿಗಳನ್ನು ಗೌರವಿಸುತ್ತಾ ಸಾರ್ವಜನಿಕರಲ್ಲಿ ಆಲೋಚಿಸುವ, ಗ್ರಹಿಸುವ ಮತ್ತು ವಿಮರ್ಶಿಸುವ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವಿರುತ್ತದೆ. ಉದಾರ ಸಮಾಜಗಳಲ್ಲಿ ವಿನಯಶೀಲ ನಡೆಯನ್ನು ಅಪೇಕ್ಷಿಸಲಾಗುತ್ತದೆ. ದ್ವೇಷದ ಭಾಷಣಗಳನ್ನು (ಹೇಟ್‌ ಸ್ಪೀಚ್‌) ಮತ್ತು ನೋಯಿಸುವ ಮಾತುಗಳನ್ನು (ಅಫೆನ್ಸಿವ್‌ ಸ್ಪೀಚ್‌) ಸಮಾಜದಲ್ಲಿ ಬಿರುಕು ಮೂಡಿಸುವ ಬಳಕೆಗಳೆಂದು ಪರಿಗಣಿಸಲಾಗುತ್ತದೆ. ಆದರೆ ಇವರೆಡು ಬೇರೆ ಬೇರೆಯೇ ಆಗಿರುತ್ತವೆ.

ಹೇಟ್‌ ಸ್ಪೀಚ್‌ ಕುರಿತು ಅಫೆಂಡ್‌, ಶಾಕ್‌ ಆರ್‌ ಡಿಸ್ಟರ್ಬ್‌ (2018) ಪುಸ್ತಕ ಬರೆದಿರುವ ಗೌತಮ್‌ ಭಾಟಿಯ ಒಂದು ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ: ಬಳಕೆಯಾದ ಪದಗಳು ಪರಿಣಾಮವನ್ನು ಬೀರುತ್ತವೆ ಎನ್ನುವ ಗ್ರಹಿಕೆಯ ಆಧಾರದ ಮೇಲೆ ಹೇಟ್‌ ಸ್ಪೀಚ್‌ ಕುರಿತಾದ ಮಸೂದೆ ರಚನೆಯಾಗಿದೆ. ಪದಗಳು ಈಗಾಗಲೇ ಸಮಾಜದಲ್ಲಿರುವ ಶೋಷಣೆ ಮತ್ತು ಅಸಮಾನತೆಯಿಂದ ಬೇರ್ಪಡುವುದಿಲ್ಲ. ಸಮಾನತೆಯನ್ನು ಅನುಭವಿಸುವ, ಲಭ್ಯವಿರುವ ಸಾಮಾಜಿಕ ಮತ್ತು ಭೌತಿಕ ಮೂಲಭೂತ ಸೌಕರ್ಯಗಳನ್ನು ಅನುಭವಿಸುವ ಅವಕಾಶವನ್ನು ಪದಗಳು ಕಿತ್ತುಕೊಳ್ಳುತ್ತವೆ ಎನ್ನುವುದನ್ನು ಕಾನೂನು ಗ್ರಹಿಸುತ್ತದೆ(ಪುಟ 164).

ಬಿಳಿಯರು ಜನಾಂಗೀಯವಾದಿಗಳು ಮತ್ತು ಕರಿಯರು ಅಪರಾಧಿ ಹಿನ್ನೆಲೆಯನ್ನು ಹೊಂದಿರುವವರು ಎನ್ನುವ ಹೇಳಿಕೆಗಳು ಸಾಮಾನ್ಯೀಕರಣದ ಹೇಳಿಕೆಗಳಾಗಿರುತ್ತವೆ. ಈ ಎರಡೂ ಹೇಳಿಕೆಗಳು ಅಫೆನ್ಸಿವ್‌ ಸ್ಪೀಚ್‌ಗಳಾಗಿವೆ. ಆದರೆ ಬಿಳಿಯರು ಅಸಮಾನ್ಯವಾದ ಅಧಿಕಾರ, ಅವಕಾಶ ಮತ್ತು ಸವಲತ್ತುಗಳನ್ನು ಹೊಂದಿರುವ ಶ್ರೇಣೀಕೃತ ಸಮಾಜದಲ್ಲಿ ಮೊದಲ ಹೇಳಿಕೆ ಅಪಾರವಾದ ಹಾನಿಯುಂಟು ಮಾಡುವ ಅವಕಾಶ ಇರುವುದಿಲ್ಲ. ಆದರೆ ಎರಡನೆ ಹೇಳಿಕೆ ಕರಿಯರ ಅಭಿವೃದ್ಧಿಗೆ ತೊಡಕಾಗುವುದಂತು ಖಚಿತವಾಗಿದೆ. ಎರಡನೇ ಹೇಳಿಕೆ ಹೇಟ್‌ ಸ್ಪೀಚ್ ಪಟ್ಟಿಗೆ ಸೇರಲು ಅರ್ಹವಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಚಳುವಳಿಗಳು ಸಮಾಜದಲ್ಲಿ ಸ್ಥಾಪಿತವಾಗಿರುವ ಶೋಷಣೆ ಮತ್ತು ಅಸಮಾನತೆಯನ್ನು ಪ್ರಶ್ನಿಸುವಾಗ ಪಬ್ಲಿಕ್‌ ಸಿವಿಲಿಟಿಯ ಆವರಣಕ್ಕೆ ಜೋತು ಬೀಳಲು ಅವಕಾಶವಿರುವುದಿಲ್ಲ. ಇಲ್ಲಿ ಅಫೆನ್ಸಿವ್‌ ಸ್ಪೀಚ್‌ ಎನ್ನುವುದು ಪ್ರತಿರೋಧದ ಭಾಷಣವಾಗುತ್ತದೆ.

ಮಾಲ್ಕಂ ಎಕ್ಸ್
ಮಾಲ್ಕಂ ಎಕ್ಸ್

ಒಬ್ಬ ಕ್ರಾಂತಿಕಾರಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ: ಮಾಲ್ಕಂ ಎಕ್ಸ್‌ ಬಿಳಿಯರನ್ನು ಸೈತಾನರೆಂದು ಕರೆಯುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಅವರು ಆಫ್ರಿಕನ್‌ ಅಮೇರಿಕನ್ನರನ್ನು ಹಿಂಸಾತ್ಮಕವಾದರೂ ಸರಿಯೇ ಪ್ರಬಲ ಹೋರಾಟ ಮಾಡಿರೆಂದು ಪ್ರೇರೇಪಿಸುತ್ತಿದ್ದರು. ಈ ಕುರಿತು ತಮ್ಮನ್ನು ಟೀಕಿಸುತ್ತಿದ್ದ ಮಾಧ್ಯಮದವರನ್ನು ಅವರು ಯಾವಾಗಲೂ ಅಣಕಿಸುತ್ತಿದ್ದರು: ”ಮಾಧ್ಯಮದವರು ನಮ್ಮನ್ನು ಹಿಂಸೆಯನ್ನು ವಿರುದ್ಧ ದಿಕ್ಕಿನಲ್ಲಿ ಬಳಸುವ ಜನಾಂಗೀಯವಾದಿಗಳೆಂದು ಕರೆಯುತ್ತಾರೆ. ನಮ್ಮ ವಿರುದ್ಧ ಹಿಂಸೆಯಲ್ಲಿ ತೊಡಗುವ ಕುಕ್ಸು ಕ್ಲಾನ್‌ನ ಹಿಂಸೆಯನ್ನು ತಡೆಯುವ ನಮ್ಮ ಕ್ರಮಗಳನ್ನು ಇವರು ಪ್ರತಿ ಹಿಂಸೆಯೆನ್ನುತ್ತಾರೆ (ಮಾಲ್ಕಂ ಎಕ್ಸ್‌ ಸ್ಪೀಕ್ಸ್‌, ಪುಟ 165).” ಇವರು ಬಳಸುತ್ತಿದ್ದ ಭಾಷೆ ನೋಯಿಸುವ(ಅಫೆನ್ಸಿವ್‌), ಪ್ರೇರೇಪಿಸುವ(ಪ್ರವೊಕೇಟಿವ್‌) ಮತ್ತು ಉದ್ದೀಪಿಸುವ (ಇನ್‌ಫ್ಲಮೇಟರಿ) ಮಾತುಗಳಾಗಿದ್ದವು ಮತ್ತು ಕರಿಯರ ಉಗ್ರ ಹೋರಾಟಕ್ಕೆ ಶಕ್ತಿ ನೀಡುತ್ತಿದ್ದದು ಸತ್ಯವಾದರೂ, ಬಿಳಿಯರಿಗಾಗಲೀ ಅವರ ಆಸ್ತಿಪಾಸ್ತಿಗಳಿಗಾಗಲೀ ಯಾವುದೇ ನಷ್ಟವನ್ನು ಉಂಟು ಮಾಡಿರಲಿಲ್ಲ ಎನ್ನುವುದು ಸಹಾ ಸತ್ಯವಾಗಿದೆ.

ದಲಿತ್‌ ಪ್ಯಾಂಥರ್‌ ನಾಯಕ ನಾಮದೇವ್ ಧಸಾಲ್‌ ಅವರ ಕಾವ್ಯ ಮರಾಠಿ ಭಾಷೆಯ ರೂಢಿಗಳನ್ನು ಮೂಲೆಗೆ ತಳ್ಳಿ ಪ್ರಖರವಾದ ಮತ್ತು ಹರಿತವಾದ ಪದಗಳಿಂದ ಜಾತಿಯನ್ನು ದಿಕ್ಕರಿಸಿತ್ತು. ”ಹೇ ಮಾನವ ನೀನು ಸಿಡಿಯಬೇಕು / ಪುರೋಹಿತರೆಲ್ಲರಿಗೂ ಫಿರಂಗಿಯಿಂದ ಗುಂಡಿಡಬೇಕು / ಅವರ ರಕ್ತದಿಂದಲೇ ತೋಯ್ದಿರುವ ಬಟ್ಟೆಯಿಂದವರ ಚರಮಗೀತೆ ಬರೆಯಬೇಕು (ವೇಲಿವಾಡ, ಜನವರಿ 15, 2016).” ವಿಡುತಲೈ ಚಿರುತೈಗಲ್‌ ಕಚ್ಚಿಯ ನಾಯಕರಾದ ತೋಲ್‌. ತಿರುಮಾವಲನ್‌ ಅವರು ದಲಿತ ಉಗ್ರವಾದಕ್ಕೆ ಮತ್ತು ಪ್ರಖರ ಘೋಷಣೆಗಳಿಗೆ ಹೆಸರಾದವರು. 1990ರ ಕಾಲಘಟ್ಟದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ಪೊಲೀಸರ ದಬ್ಬಾಳಿಕೆಯನ್ನು ವಿರೋಧಿಸಿ  ”ತಲೆಬಾಗದಿರು! ಹಿಂತಿರುಗಿ ಬಾರಿಸು! ಅಡೆತಡೆಗಳನ್ನು ಚಚ್ಚಿ ಹಾಕು!” ಎನ್ನುವ ಘೋಷವಾಕ್ಯಗಳನ್ನು ಅವರು ನೀಡಿದ್ದರು. ಈ ಯಾವುದೇ ಮಾತುಗಳು ಹೇಟ್‌ ಸ್ಪೀಚ್‌ಗಳಲ್ಲ. ಬದಲಿಗೆ ಇಂತಹ ಅನ್ಯಾಯಗಳಿಗೆ ಕುರುಡಾಗಿರುವ ನಾಗರಿಕ ಸಮಾಜವನ್ನು ಚುಚ್ಚಿ ಎಚ್ಚರಿಸಲು ಬಳಕೆಯಾಗುವ ಮಾತುಗಳು.

ಪಬ್ಲಿಕ್‌ ಸಿವಿಲಿಟಿಯ ಅನುಕೂಲಗಳು ಸಾಕಷ್ಟಿವೆ. ಏಕೆಂದರೆ ಇದಕ್ಕೆ ಹಾನಿಯಾಯಿತೆಂದು ದೂರುತ್ತಾ ಅದರ ಅನುಕೂಲ ಪಡೆಯುವುದು ಬಲಪಂಥೀಯರ ನಡೆಯಾಗಿದೆ. ಸಮಾಜದಲ್ಲಿ ಸೌಹಾರ್ದತೆಯಿರಬೇಕೆಂದು ಒತ್ತಾಯಿಸುವುದು ನಮ್ಮ ಸಹಜವಾದ ಕ್ರಮವಾಗಬೇಕು. ಆದರೆ ಸಮಾಜದ ಪ್ರಬಲ ಗುಂಪೊಂದು ಮಾಡುವ ಪಬ್ಲಿಕ್‌ ಸಿವಿಲಿಟಿ ರಹಿತ ಭಾಷಣಕ್ಕೂ ಮತ್ತು ಶೋಷಿತ ಗುಂಪೊಂದು ಮಾಡುವ ಪಬ್ಲಿಕ್‌ ಸಿವಿಲಿಟಿ ರಹಿತ ಭಾಷಣಕ್ಕೂ ಒಂದೇ ಮಾನದಂಡ ಅನ್ವಯಿಸಬಾರದು. ಪ್ರಬಲ ವರ್ಗದ ಮಾತುಗಳು ಸಮಾಜದಲ್ಲಿ ಹಿಂಸೆಯನ್ನು ಸೃಜಿಸುವುದೇ ಅಲ್ಲದೆ ಅದರ ಮುಂದುವರಿಕೆಗೂ ಕಾರಣವಾದರೆ, ಶೋಷಿತ ವರ್ಗದ ಮಾತುಗಳು ಚಾಲ್ತಿಯಲ್ಲಿರುವ ಅಸಮಾನತೆಯನ್ನು ಪ್ರಶ್ನಿಸುವ ಯತ್ನವಾಗಿರುತ್ತದೆ. ಸಾಮಾಜಿಕ ನ್ಯಾಯ ಚಳುವಳಿಗಳಲ್ಲಿ ಬಳಕೆಯಾಗುವ ಮಾತುಗಳು ನೋವನ್ನುಂಟು ಮಾಡುವುದು ಸತ್ಯವಾದರೂ, ಅವುಗಳ ಗುರಿ ಒಂದು ಹೊಸ ಆಲೋಚನೆಯನ್ನು ಹುಟ್ಟುಹಾಕುವುದು ಮಾತ್ರವಾಗಿರುತ್ತದೆ. ಆದರೆ ಸಾಮಾಜಿಕವಾಗಿ ಪ್ರಬಲವಾಗಿರುವ ಗುಂಪಿನ ಭಾಷಣದ ಪದಗಳು ಆಲೋಚನೆಗಳನ್ನು ಚಿವುಟಿ ಹಾಕುವ, ನಾಗರಿಕ ಚರ್ಚೆಗಳನ್ನು ಹೊಸಕಿಹಾಕುವ ಉದ್ದೇಶವನ್ನು ಹೊಂದಿರುತ್ತವೆ. ಗೌರಿ ಲಂಕೇಶ್‌ ಮತ್ತು ಗೋವಿಂದ ಪನ್ಸಾರೆ ಅವರುಗಳು ಜಾತಿ ವ್ಯವಸ್ಥೆಯನ್ನು ಪೋಷಿಸುವ ಸನಾತನ ವ್ಯವಸ್ಥೆಯನ್ನು ಪ್ರಶ್ನಿಸುವಾಗ ಸೌಜನ್ಯದ ಪರಿಧಿಯೊಳಗೆ ಇರುತ್ತಿದ್ದವರು. ಆದರೆ ಅವರ ಈ ವರ್ತನೆ ಅವರನ್ನು ಕೊಲೆಪಾತಕಿಗಳ ಗುಂಡಿನಿಂದ ರಕ್ಷಿಸಲಿಲ್ಲ.

ಇದನ್ನು ಓದಿದ್ದೀರಾ?: ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪೆರಿಯಾರ್‌ ಅವರು ಬ್ರಾಹ್ಮಣರ ಮಾರಣಹೋಮಕ್ಕೆ ಕರೆನೀಡಿದ್ದರೆಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಅಷ್ಟೇ ಅಲ್ಲದೆ, ತಪ್ಪು ಜಾತಿಯಲ್ಲಿ ಇಲ್ಲವೇ ವರ್ಗದಲ್ಲಿ ಹುಟ್ಟಿದ ಕಾರಣಕ್ಕೆ ಶೋಷಣೆಗೆ ಒಳಗಾದ ಮತ್ತು ಮರಣಕ್ಕೆ ಈಡಾದ ವಿಶ್ವದಾದ್ಯಂತ ಇರುವ ಲಕ್ಷಾಂತರ ಶೋಷಿತರಿಗೆ ಮಾಡುವ ಅವಮಾನವಾಗಿದೆ. ಪೆರಿಯಾರ್‌ ಅವರ ಮಾತುಗಳಿಂದ ಪ್ರಚೋದಿತರಾದವರು ಬ್ರಾಹ್ಮಣರ ಮೇಲೆ ಆಕ್ರಮಣ ನಡೆಸಿದ್ದಾರೆಂದು ಹೇಳುವ ದುರಂತದ ಘಟನೆಗಳನ್ನು ಪರಿಗಣಿಸಿದಾಗ ಸಿಗುವ ವಾಸ್ತವಾಂಶ ಹೀಗಿದೆ: ಕೆಲವೇ ಕೆಲವು ವ್ಯಕ್ತಿಗಳ ಜನಿವಾರವನ್ನು ಕಿತ್ತು ಹಾಕಿರುವುದು. ಇಂತಹ ಚಟುವಟಿಕೆಯನ್ನು ನಡೆಸಿದವರ ವಿರುದ್ಧ ಕಾನೂನು ಯಶಸ್ವಿಯಾಗಿ ಕ್ರಮ ಜರುಗಿಸಿರುವುದು.

ತಮ್ಮ ಮೇಲೆ ನಡೆಯುವ ದೈಹಿಕ ಹಲ್ಲೆಯನ್ನು ಅನುಭವಿಸುತ್ತಲೇ ಬಂದಿರುವ ತಮಿಳುನಾಡಿನ ಶೋಷಿತ ಜಾತಿಯ ಜನರು ಸಹಾ ಇಂತಹ ಯಾವುದೇ ಆರೋಪವನ್ನು ಮಾಡಿಲ್ಲವೆನ್ನುವುದು ಕೂಡ ಗಮನಾರ್ಹವಾಗಿದೆ. 1968ರ ಕಿಲ್ಲವೇನ್‌ಮಣಿ ಮಾರಣಹೋಮದ ಬಲಿಪಶುಗಳಾದ ದೇವೇಂದ್ರ ಕುಲ ವೇಳರಾಗಲೀ, ಇಲ್ಲವೇ 1987ರಲ್ಲಿ ಮೀಸಲಾತಿಗೆ ಒತ್ತಾಯಿಸಿ ಪೊಲೀಸರ ಗುಂಡಿಗೆ ಬಲಿಯಾದ ವಣ್ಣಿಯಾರ್‌ಗಳಾಗಲೀ ಮಾರಣಹೋಮದ ಆರೋಪವನ್ನು ದ್ರಾವಿಡ ರಾಜಕೀಯದ ಮೇಲೆ ಮಾಡಿರುವುದು ನನ್ನ ಗ್ರಹಿಕೆಯ ಮಿತಿಯೊಳಗೆ ದೊರೆತಿಲ್ಲ. ಆದರೆ ಇವರು ನಿರಂತರವಾಗಿ ದ್ರಾವಿಡ ರಾಜಕೀಯವನ್ನು ಟೀಕಿಸುತ್ತಲೇ ಬಂದಿರುವವರಾಗಿದ್ದಾರೆ.

ಪೆರಿಯಾರ್‌ ಬ್ರಾಹ್ಮಣ ವಿರುದ್ಧ ಸೌಜನ್ಯರಹಿತ ಮಾತುಗಳನ್ನು ಆಡಿದ್ದಾರೆ ಮತ್ತು ಅಫೆನ್ಸಿವ್‌ ಸ್ಪೀಚ್ ಮಾಡಿದ್ದಾರೆಂದು ಖಂಡಿತ ದೂರಬಹುದು. ಆದರೆ ಅವರ ಭಾಷಣಗಳು ಹೇಟ್‌ ಸ್ಪೀಚ್‌ಗಳೆಂದು ಕರೆಯುವುದು ಮತ್ತು ಅದರಿಂದಾಗಿ ಮಾರಣಹೋಮ ನಡೆಯುತ್ತದೆನ್ನುವುದು ದುರುದ್ದೇಶಪೂರಿತ ನಡೆಯಾಗಿವೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಬ್ರಾಹ್ಮಣರು ಹೊಂದಿದ್ದ ಏಕಸ್ವಾಮ್ಯತೆಯನ್ನು ನಿವಾರಿಸಿ, ಅಲ್ಲಿ ಬಹುತ್ವವನ್ನು ಸ್ಥಾಪಿಸಿದ್ದು ದ್ರಾವಿಡ ಚಳುವಳಿಯ ಯಶಸ್ಸಾಗಿದೆ.

ಹೀಗಿದ್ದರೂ, ಬ್ರಾಹ್ಮಣರು ಸಮಾಜದಲ್ಲಿ ಈಗಲೂ ಉತ್ತಮ ಚಲನಶೀಲತೆಯನ್ನು ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಹೊಂದಿದ್ದಾರೆಂದು ತಮಿಳ್‌ ಬ್ರಾಹ್ಮಿಣ್ಸ್‌ (2014) ಪುಸ್ತಕದಲ್ಲಿ ಅದರ ಕರ್ತೃಗಳಾದ ಸಿ.ಜೆ. ಫುಲ್ಲರ್‌ ಮತ್ತು ಹರಿಪ್ರಿಯ ವಾದ ಮಂಡಿಸುತ್ತಾರೆ. ಜೊತೆಗೆ ಅವರಲ್ಲಿ ಮೇಲರಿಮೆಯ ಭಾವ ಹಾಗೇ ಮುಂದುವರಿದಿದೆ ಎನ್ನುವುದನ್ನು ಸಹಾ ಅವರು ದಾಖಲಿಸುತ್ತಾರೆ. ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ ಬ್ರಾಹ್ಮಣರು ಪೆರಿಯಾರ್‌ ಅವರ ಚಿಂತನೆಗಳಿಗೆ ಬೆಂಬಲ ನೀಡುತ್ತಿರುವ ಬೆಳವಣಿಗೆ ಮೇಲರಿಮೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಬ್ರಾಹ್ಮಣರಲ್ಲಿ ದುಃಖವನ್ನುಂಟು ಮಾಡಿದೆ ಎನ್ನುವುದು ಸತ್ಯವಾಗಿದೆ.

ಪೆರಿಯಾರ್
ಪೆರಿಯಾರ್

ಮಾಲ್ಕಂ ಎಕ್ಸ್‌ ಅವರು ಮೊನಚು ಮಾತುಗಳು ಮತ್ತು ನಾಮದೇವ್ ಧಸಾಲ್‌ ಅವರ ಸ್ಪೋಟಕ ಕಾವ್ಯದ ಮುಂದೆ ಪೆರಿಯಾರ್‌ ಅವರ ಮಾತುಗಳು ಸ್ವಯಂದ ಮಾತುಗಳಾಗುತ್ತವೆ. ಆಫ್ರಿಕನ್‌-ಅಮೇರಿಕನ್‌ ಮತ್ತು ಮರಾಠಿ ಬುದ್ಧಿಜೀವಿಗಳ ನಿಲುವುಗಳನ್ನು ಅವರ ಅನುಯಾಯಿಗಳು ಬಲವಾಗಿ ಸರ್ಮಥಿಸಿಕೊಂಡು ಬಂದಿದ್ದರೆ, ಪೆರಿಯಾರ್‌ ಕುರಿತಾದ ಕಟು ಟೀಕೆಗಳಿಗೆ ದ್ರಾವಿಡ ಚಳುವಳಿಗಾರರು ಪ್ರತಿಕ್ರಿಯಿಸುವುದು ಯಾವಾಗಲೂ ನಿಧಾನಗತಿಯನ್ನು ಹೊಂದಿರುತ್ತದೆ. ಈ ಪರಿಸ್ಥಿತಿ ಕಳೆದ ಕೆಲವು ವರ್ಷಗಳಿಂದ ಸ್ವಲ್ಪಮಟ್ಟಿಗೆ ಬದಲಾಗಿರುವುದನ್ನು ಕಾಣಬಹುದು. ಜೊತೆಗೆ ಪ್ರಗತಿಪರ ಬ್ರಾಹ್ಮಣರೊಂದಿಗೆ ಸಂಪರ್ಕವನ್ನು ಹೊಂದುವ ಪೆರಿಯಾರ್‌ವಾದಿಗಳ ಯತ್ನಗಳು ಆಶಾದಾಯಕ ಬೆಳವಣಿಗಳಾಗಿವೆ. ಇದೊಂದು ಐತಿಹಾಸಿಕ ನಡೆಯಾಗಿದೆ.

ಪೆರಿಯಾರ್‌ ಅವರ ಚಿಂತನೆಗಳ ಕುರಿತು ಇದುವರೆಗೆ ಬಂದಿರುವ ಪುಸ್ತಕಗಳಲ್ಲಿ 1974ರಲ್ಲಿ ಪ್ರಕಟವಾದ ‘ಪಗುತರವಿನ್‌ ಸಿಗರಂ: ಪೆರಿಯಾರ್‌ ಇ.ವಿ.ಆರ್‌’ (ವೈಚಾರಿಕತೆಯ ಶಿಖರ: ಪೆರಿಯಾರ್‌ ಎ.ವಿ.ಆರ್‌) ಅತ್ಯುತ್ತಮವಾದ ಪುಸ್ತಕವಾಗಿದೆ. ಇದರ ಲೇಖಕರು ಪೆರಿಯಾರ್‌ ಕೇವಲ ನಾಸ್ತಿಕವಾದಿಯಷ್ಟೇ ಅಲ್ಲದೆ, ಭಾರತದ ಪ್ರಮುಖ ವೈಚಾರಿಕ ಮತ್ತು ಭೌತಿಕವಾದಿ ಚಿಂತಕರಲ್ಲಿ ಒಬ್ಬರೆಂದು ವಾದಿಸುತ್ತಾರೆ. ಪೆರಿಯಾರ್‌ ಅವರನ್ನು ಬ್ರಾಹ್ಮಣ ವಿರೋಧಿ ಎಂಬ ಆರೋಪವನ್ನು ಪುಸ್ತಕದ ಮುನ್ನುಡಿಯಲ್ಲಿ ಪ್ರಬಲವಾಗಿ ನಿರಾಕರಿಸುವ ಲೇಖಕರು, ಪೆರಿಯಾರ್‌ ಅವರ ನಾಸ್ತಿಕವಾದದಲ್ಲಿನ ನಂಬಿಕೆ ಬ್ರಾಹ್ಮಣ್ಯವನ್ನು ವಿರೋಧಿಸಲು ಕಾರಣವಾಯಿತು ಎನ್ನುತ್ತಾರೆ. ಈ ಕೃತಿಯ ಲೇಖಕರು ಎ.ಎಸ್‌. ಕೃಷ್ಣಾಮಾಚಾರಿಯಾಗಿದ್ದರು. ಎ.ಎಸ್‌.ಕೆ ಎಂದೇ ಗುರುತಿಸಲ್ಪಡುತ್ತಿದ್ದ ಈ ಲೇಖಕರು, ಕಮ್ಯುನಿಸ್ಟ್ ರಾಜಕಾರಣದಲ್ಲಿ ತೊಡಗಿಸಿಕೊಂಡವರಾಗಿದ್ದರು. 1937ರಲ್ಲಿ ಪೆರಿಯಾರ್‌ ಚಿಂತನೆಗಳಿಗೆ ಆಕರ್ಷಿತರಾದ ಇವರು, ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕ ಐಯ್ಯಂಗಾರ್‌ ಪದ ಬಳಕೆಯನ್ನು ಕೈಬಿಟ್ಟಿದ್ದರು. ತನ್ಮೂಲಕ ಆತ್ಮಗೌರವದ ಚಳುವಳಿಯ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿದ್ದರು.

(ಮೂಲ ಲೇಖನ: ಕಾರ್ತಿಕ್‌ ರಾಮ ಮನೋಹರನ್‌. ಸಹಾಯಕ ಪ್ರಾಧ್ಯಾಪಕರು, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು. ಫ್ರಂಟ್‌ಲೈನ್‌ ಏಪ್ರಿಲ್‌ 6-19, 2024ರಲ್ಲಿ ಪ್ರಕಟ. ಕನ್ನಡಕ್ಕೆ: ಸದಾನಂದ ಆರ್‌)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X