ಚುನಾವಣಾ ಅಭ್ಯರ್ಥಿಗಳು ಎಲ್ಲಾ ಚರಾಸ್ತಿ ಘೋಷಿಸಬೇಕಾಗಿಲ್ಲ. ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳುವ ಮತದಾರರ ಹಕ್ಕನ್ನು ಮತ್ತಷ್ಟು ವಿಸ್ತರಿಸಲಾಗದು. ಅವರೂ ಕೂಡಾ ಖಾಸಗಿತನಕ್ಕೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕುಮಾರ್ ಅವರ ಪೀಠವು ಅರುಣಾಚಲ ಪ್ರದೇಶದ 44 ತೇಜು (ಎಸ್‌ಟಿ) ಅಸೆಂಬ್ಲಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಕರಿಖೋ ಕ್ರಿ ಅವರ ಏಪ್ರಿಲ್ 2019 ರ ಚುನಾವಣಾ ಗೆಲುವನ್ನು ಅಸಿಂಧುಗೊಳಿಸಿದ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ಹೈಕೋರ್ಟ್‌ಗಳ ತೀರ್ಪನ್ನು ರದ್ದುಗೊಳಿಸಿದೆ.
ಚುನಾವಣಾ ಅಭ್ಯರ್ಥಿಗಳ ಒಡೆತನದ ಪ್ರತಿಯೊಂದು ಆಸ್ತಿಯನ್ನು ಬಹಿರಂಗಪಡಿಸದಿರುವುದು ಅವರ ಚುನಾವಣೆಯನ್ನು ಅಸಿಂಧುಗೊಳಿಸುವಷ್ಟು ದೊಡ್ಡ ದೋಷ ಆಗಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಅಭ್ಯರ್ಥಿ
“ಮತದಾರನ ‘ಮಾಹಿತಿ ಹಕ್ಕು’ ಪ್ರಕಾರ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ತನ್ನ ಎಲ್ಲಾ ವಿವರಗಳ ಬಗ್ಗೆ ನೇರವಾಗಿರಬೇಕು ಎಂದು ನಮ್ಮ ಮುಂದೆ ತೀವ್ರವಾಗಿ ವಾದಿಸಲಾಗಿದೆ. ಆದರೂ ಅಭ್ಯರ್ಥಿ ಎಲ್ಲಾ ವಿವರಗಳನ್ನು ಬಹಿರಂಗಪಡಿಸಬೇಕು ಎಂಬುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಭ್ಯರ್ಥಿಗಳಿಗೂ ‘ಗೌಪ್ಯತೆಯ ಹಕ್ಕು’ ಇದೆ” ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಪೀಠ ಹೇಳಿದೆ.
“ಆ ನಿಟ್ಟಿನಲ್ಲಿ, ಅಭ್ಯರ್ಥಿಯ ಒಡೆತನದ ಪ್ರತಿಯೊಂದು ಆಸ್ತಿಯನ್ನು ಬಹಿರಂಗಪಡಿಸದಿರುವುದು ದೋಷಕ್ಕೆ ಸಮನಾಗುವುದಿಲ್ಲ. ಒಬ್ಬ ಅಭ್ಯರ್ಥಿಯು ತಾನು ಅಥವಾ ಅವನ ಅವಲಂಬಿತ ಕುಟುಂಬದ ಸದಸ್ಯರು ಹೊಂದಿರುವ ಪ್ರತಿಯೊಂದು ಚರಾಸ್ತಿಯನ್ನು ಘೋಷಿಸುವ ಅಗತ್ಯವಿಲ್ಲ. ಉದಾಹರಣೆಗೆ, ಬಟ್ಟೆ, ಬೂಟುಗಳು, ಪಾತ್ರೆಗಳು, ಲೇಖನ ಸಾಮಗ್ರಿಗಳು ಮತ್ತು ಪೀಠೋಪಕರಣಗಳು ಇತ್ಯಾದಿ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಹಾಸನ | ಪ್ರೀತಂ ಗೌಡ ಆಪ್ತರಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
ಹಾಗೆಯೇ “ಈ ವಸ್ತುಗಳು ಅಭ್ಯರ್ಥಿಯ ಆಸ್ತಿಯ ಗಮನಾರ್ಹ ಪಾಲನ್ನು ಹೊಂದಿದ್ದರೆ, ಅಧಿಕ ಮೌಲ್ಯವನ್ನು ಹೊಂದಿದ್ದರೆ ಮತ್ತು ಅಭ್ಯರ್ಥಿಯ ಜೀವನಶೈಲಿಯ ಪ್ರತಿಬಿಂಬವಾಗಿದ್ದರೆ ಮಾತ್ರ ಆ ಮಾಹಿತಿಯನ್ನು ಬಹಿರಂಗಪಡಿಸಬೇಕಾದ ಅಗತ್ಯವಿರುತ್ತದೆ” ಎಂದು ಸ್ಪಷ್ಟಪಡಿಸಿದೆ.
“ಉದಾಹರಣೆಗೆ, ಅಭ್ಯರ್ಥಿ ಮತ್ತು ಅವರ ಕುಟುಂಬವು ಹಲವಾರು ದುಬಾರಿ ವಾಚ್‌ಗಳನ್ನು ಹೊಂದಿದ್ದು ಇದರ ಒಟ್ಟು ಮೌಲ್ಯ ಅಧಿಕವಾಗಿದ್ದರೆ ಅವರು ಆ ಸ್ವತ್ತಿನ ಮಾಹಿತಿಯನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕಾಗುತ್ತದೆ. ಏಕೆಂದರೆ ಅದು ಹೆಚ್ಚಿನ ಮೌಲ್ಯವನ್ನು ಹೊಂದಿರುವ ಕಾರಣ ಅದ್ದೂರಿ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಪೀಠವು ವಿವರಿಸಿದೆ.
“ಇನ್ನು ಅಭ್ಯರ್ಥಿಯು ಸರಳವಾದ ಒಂದು ವಾಚ್ ಹೊಂದಿದ್ದರೆ, ಅದಕ್ಕೆ ಅತೀ ಅಧಿಕ ಮೌಲ್ಯ ಇಲ್ಲವೆಂದಾದರೆ ಆ ಮಾಹಿತಿಯನ್ನು ಬಹಿರಂಗಪಡಿಸದೆ ಇರುವುದು ದೋಷವಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಪ್ರಕರಣವು ಅದರ ಸ್ವಂತ ಸತ್ಯಗಳ ಮೇಲೆ ನಿರ್ಣಯಿಸಲ್ಪಡಬೇಕು” ಎಂದು ಪೀಠ ಅಭಿಪ್ರಾಯಿಸಿದೆ.