ಅಂತರ್ಜಲ ಕೊರತೆಯಿಂದ ಆಗಿರುವ ನೀರಿನ ಅಭಾವ ಮೇ ತಿಂಗಳಲ್ಲಿ ಹೆಚ್ಚಾದಲ್ಲಿ ಅದನ್ನ ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಿನಿಂದಲೇ ಸಜ್ಜಾಗುತ್ತಿದೆ.
ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ಅವರು ಇಂದು ಮಂಡಳಿಯ ನಾನಾ ಕೆರೆಗಳು ಹಾಗೂ ನೀರು ಸರಬರಾಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವಂತಹ ಹೆಸರುಘಟ್ಟ ಕೆರೆಗೆ ಭೇಟಿ ನೀಡಿದ ಅಧ್ಯಕ್ಷರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪ್ರಸ್ತುತ ಕೆರೆಯಲ್ಲಿ 0.3 ಟಿಎಂಸಿಗಳಷ್ಟು ನೀರಿನ ಲಭ್ಯತೆಯಿದೆ. ಅಲ್ಲದೇ, ಈ ಪ್ರದೇಶದಲ್ಲಿರುವಂತಹ ಕೊಳವೆ ಬಾವಿಗಳಲ್ಲೂ ಉತ್ತಮ ನೀರಿದೆ. ಜಲಮಂಡಳಿಯ ಹೆಸರುಘಟ್ಟ ನೀರು ಸರಬರಾಜು ಕೇಂದ್ರದ ಮೂಲಕ ನಗರಕ್ಕೆ ಪ್ರತಿ ದಿನ 10 ಎಂಎಲ್‌ಡಿ ನೀರನ್ನ ಸರಬರಾಜು ಮಾಡಬಹುದಾಗಿದೆ. ಮೇ ತಿಂಗಳಲ್ಲಿ ನೀರಿನ ಕೊರತೆ ಕಂಡು ಬಂದಲ್ಲಿ ಜಲಮಂಡಳಿಯ ನೀರು ಸರಬರಾಜು ವ್ಯವಸ್ಥೆಯ ಮೂಲಕ ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ.
ಕೆರೆಯಿಂದ ಲಭ್ಯವಾಗುವಂತಹ ನೀರನ್ನ ಶುದ್ದೀಕರಿಸಲು ಹೆಸರುಘಟ್ಟ ಜಲಮಂಡಳಿ ನೀರು ಸರಬರಾಜು ಕೇಂದ್ರವನ್ನು ಸಜ್ಜುಗೊಳಿಸಬೇಕು. ಯಾವ ಪ್ರದೇಶದವರೆಗೆ ಈ ನೀರನ್ನ ಪೈಪ್‌ಲೈನ್‌ಗಳ ಮೂಲಕ ತಗೆದುಕೊಂಡು ಹೋಗಬಹುದೋ ಆಯಾ ಪ್ರದೇಶಗಳವರೆಗೆ ನೀರನ್ನು ಸರಬರಾಜು ಮಾಡಬೇಕು. ಯಾವ ಪ್ರದೇಶದಲ್ಲಿ ಪೈಪ್‌ಲೈನ್ ವ್ಯವಸ್ಥೆ ಇಲ್ಲವೋ ಆ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಹೆಸರುಘಟ್ಟ ಕೆರೆ ನೀರನ್ನ ಸರಬರಾಜು ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವಂತಹ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೇಸ್‌ಬುಕ್‌ನಲ್ಲಿ ಕಾಲ್ ಗರ್ಲ್ ಎಂದು ತನ್ನ ಪತ್ನಿಯ ಫೋಟೋ ಹಾಕಿದ ವಿಕೃತ ಪತಿ
ಈ ಸಂಧರ್ಭದಲ್ಲಿ ಜಲಮಂಡಳಿಯ ಮುಖ್ಯ ಎಂಜಿನಿಯರ್ ಕಾವೇರಿ ಕಾರ್ಯಾಚರಣೆ ರಾಜಶೇಖರ್, ಮುಖ್ಯ ಅಭಿಯಂತರರಾದ ಗಂಗಾಧರ್ ಮತ್ತು ದೇವರಾಜ್, ಸುಪರಿಂಟೆಂಡ್ ಎಂಜಿನಿಯರ್‌ಗಳಾದ ನಾರಾಯಣಸ್ವಾಮಿ, ಬಿಂದು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.