ವಿಚ್ಛೇದನ ಪಡೆಯಲು ಮುಂದಾಗಿದ್ದ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು ಪತಿ ಆಕೆಯ ಫೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿ ‘ಕಾಲ್ ಗರ್ಲ್ ಬೇಕೇ’? ಕರೆ ಮಾಡಿ ಎಂದು ಪೋಸ್ಟ್ ಹಾಕಿದ ವಿಲಕ್ಷಣ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಈ ಬಗ್ಗೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಪತ್ಯ ಕಲಹವೇ ಈ ಘಟನೆಗೆ ಮುಖ್ಯ ಕಾರಣ ಎಂಬುದು ಪ್ರಾಥಮಿಕ ಹಂತದ ತನಿಖೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸತ್ಯನಾರಾಯಣ ರೆಡ್ಡಿ ಎಂಬ ವ್ಯಕ್ತಿ ಕಲಾಶಶಿ ಎಂಬ ಫೇಸ್‌ಬುಕ್ ಪೇಜ್ ಅನ್ನು ಕ್ರಿಯೇಟ್ ಮಾಡಿದ್ದಾನೆ. ಅದರಲ್ಲಿ ವಿಚ್ಛೇದನ ನೀಡಲು ಹೊರಟಿರುವ ಪತ್ನಿ, ಆಕೆಯ ಸಹೋದರಿ ಹಾಗೂ ಸಹೋದರನ ನಂಬರ್ ಹಾಕಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ನಂದಿನಿ ಲೇಔಟ್ ವ್ಯಾಪ್ತಿಯ ಸತ್ಯನಾರಾಯಣ ರೆಡ್ಡಿ ಎಂಬುವವರ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
2019ರಲ್ಲಿ ವಿವಾಹವಾಗಿದ್ದ ಸತ್ಯನಾರಾಯಣ ರೆಡ್ಡಿ ಮತ್ತು ಆತನ ಪತ್ನಿ ವೈಯಕ್ತಿಕ ಕಲಹದ ಕಾರಣದಿಂದ ಒಂದು ವರ್ಷದ ಹಿಂದೆ ದೂರವಾಗಿದ್ದರು. ಕಳೆದ ಒಂದು ವರ್ಷದಿಂದ ಪತಿಯು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಕಾರಣ ಪತ್ನಿ ಆತನಿಂದ ದೂರವಾಗಿದ್ದಳು. ಹೀಗಾಗಿ, ಡಿವೊರ್ಸ್ ಕೂಡ ಪಡೆಯಲು ಮುಂದಾಗಿದ್ದಳು ಎಂದು ತಿಳಿದುಬಂದಿದೆ.
ಈ ವಿಚಾರದಲ್ಲಿ ಕೋಪಗೊಂಡಿದ್ದ ಸತ್ಯನಾರಾಯಣ ಡಿವೋರ್ಸ್ಗೆ ಅರ್ಜಿ ಹಾಕಿದ್ದನ್ನು ಸಹಿಸದೆ ತನ್ನ ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಎಸ್‌ಎಸ್‌ಎಲ್‌ಸಿ | ಮೇ ಮೊದಲ ವಾರದೊಳಗೆ ಫಲಿತಾಂಶ ಪ್ರಕಟ ಸಾಧ್ಯತೆ
ಸತ್ಯನಾರಾಯಣ ರೆಡ್ಡಿ ‘ಕಲಾ ಶಶಿ’ ಎಂಬ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿದ್ದನು. ಆರೋಪಿ ಅದರಲ್ಲಿ ಪತ್ನಿಯ ದೂರವಾಣಿ ಸಂಖ್ಯೆ, ಫೋಟೋ ಮತ್ತು ಆಕೆಯ ಸಹೋದರನ ಮೊಬೈಲ್ ಸಂಖ್ಯೆ ಕೂಡ ಪೋಸ್ಟ್ ಮಾಡಿದ್ದನು. ಇಷ್ಟೇ ಅಲ್ಲದೆ, ಕಾಲ್ ಗರ್ಲ್ ಬೇಕಿದ್ದಲ್ಲಿ ಸಂಪರ್ಕಿಸಿ ಎಂದು ಪೋಸ್ಟ್ ಹಾಕಿದ್ದನು. ಇದರಿಂದಾಗಿ ಸಂತ್ರಸ್ತೆ ಮತ್ತು ಆಕೆಯ ಸಹೋದರನಿಗೆ ಸಾಕಷ್ಟು ಕರೆಗಳು ಬಂದಿವೆ. ಇದರಿಂದ ಬೇಸತ್ತ ಮಹಿಳೆ ಹಾಗೂ ಆಕೆಯ ಸಹೋದರ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.