- ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿ, ಜೆಡಿಎಸ್ ಸೇರಿದ್ದಾರೆ
- ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು
ರಾಜ್ಯದಲ್ಲಿ ಹದಗೆಡುತ್ತಿರುವ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಕನಸು ಕಟ್ಟಿಕೊಂಡು ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಸುಭಾಶ್ಚಂದ್ರ ರಾಠೋಡ್, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಜಕೀಯಕ್ಕಿಳಿದಿದ್ದಾರೆ.
ಸುಭಾಶ್ಚಂದ್ರ ರಾಠೋಡ್ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸಂಕದಾಳ ಗ್ರಾಮದವರು. ಕಳೆದ 7 ವರ್ಷಗಳಿಂದ ಇವರು ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿ, ಜೆಡಿಎಸ್ ಸೇರಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಳೆಗಾಲಕ್ಕೂ ಮುನ್ನ ಕೆರೆಗಳ ಪುನಶ್ಚೇತನ ಕಾಮಗಾರಿ ಮಾಡಿ ; ಆಕ್ಷನ್ ಏಡ್ ಸಂಸ್ಥೆ
ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ‘ಭ್ರಷ್ಟಾಚಾರ ಮುಕ್ತ ನಾವು-ಸಮಾಜ’ ಎಂಬ ಸಂಘಟನೆ ಕಟ್ಟಿಕೊಂಡು ರಾಠೋಡ್ ಹೋರಾಟ ನಡೆಸುತ್ತಿದ್ದರು. ಅವರು ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ, ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಂದ ಸ್ಫೂರ್ತಿ ಪಡೆದಿದ್ದಾಗಿ ಹೇಳಿಕೊಂಡಿದ್ದರು. ಇದೀಗ, ನ್ಯಾಯಾಧೀಶ ಹುದ್ದೆ ತೊರೆದು, ರಾಜಕೀಯಕ್ಕೆ ಇಳಿದಿದ್ದಾರೆ.
ಈ ಬಗ್ಗೆ ಮಾತನಾಡಿದ ಚಿತ್ತಾಪುರದ ಜೆಡಿಎಸ್ ಅಭ್ಯರ್ಥಿ ಸುಭಾಶ್ಚಂದ್ರ ರಾಠೋಡ್, “ರಾಜಕೀಯದಲ್ಲಿ ಪ್ರಾಮಾಣಿಕರ ಸಂಖ್ಯೆ ಕುಗ್ಗುತ್ತಿದ್ದು, ಅಪ್ರಾಮಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಜಾಪ್ರಭುತ್ವದ ಪ್ರಮುಖ ಕಂಬ ಕುಗ್ಗುತ್ತಿರುವುದನ್ನು ಕುಳಿತು ನೋಡಲು ನನ್ನಿಂದ ಆಗಲಿಲ್ಲ. ಹಾಗಾಗಿ, ರಾಜಕೀಯ ಸೇರಿದೆ. ಇದರಿಂದಲಾದರೂ ಹೆಚ್ಚೆಚ್ಚು ಜನರಿಗೆ ಧ್ವನಿ, ನ್ಯಾಯ ಕೊಡಬಹುದು. ರಾಜಕೀಯ ರಂಗದಲ್ಲಿ ಸುಧಾರಣೆ ತರಬಹುದು ಎಂಬುದು ನನ್ನ ಬಲವಾದ ನಂಬಿಕೆ. ಆ ನಂಬಿಕೆಯಲ್ಲೇ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ” ಎಂದರು.