ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಮತ್ತು ಹೊಸ ವಿದ್ಯುತ್ ಸಂಪರ್ಕ ಪಡೆಯಲು ರಾಜ್ಯ ಸರ್ಕಾರವು ಖರ್ಚು ವೆಚ್ಚವನ್ನು ರೈತರೇ ಭರಿಸಿಕೊಳ್ಳಬೇಕೆಂದು ಮಾಡಿರುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, “ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯಿಲ್ಲ. ಬರಗಾಲದಲ್ಲಿ ರೈತರು ಕೊಳವೆ ಬಾವಿಗಳ ನೀರಾವರಿ ಮೂಲಕ ವ್ಯವಸಾಯ ಮಾಡಿ ಸಮಾಜಕ್ಕೆ ಹಣ್ಣು, ಹಂಪಲು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಬೆಳೆದುಕೊಡುತ್ತಿದ್ದಾರೆ” ಎಂದರು.
“ಸರ್ಕಾರ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಲು ಮತ್ತು ಹೊಸ ವಿದ್ಯುತ್ ಸಂಪರ್ಕವನ್ನು ಪಡೆಯಲು ದುಬಾರಿ ಶುಲ್ಕವನ್ನು ವಿಧಿಸಿದ್ದು, ಇದು ರೈತರಿಗೆ ಹೊರೆಯಾಗಲಿದೆ. ಹಾಗಾಗಿ ಸರ್ಕಾರ ಈ ನೀತಿಯನ್ನು ಕೂಡಲೇ ಕೈ ಬಿಡಬೇಕು” ಎಂದು ಒತ್ತಾಯಿಸಿದರು.
“ಸರ್ಕಾರ ಈ ನೀತಿಯನ್ನು ಕೂಡಲೇ ಕೈಬಿಟ್ಟು ಹಿಂದೆ ಇದ್ದ ನೀತಿಯನ್ನು ಮುಂದುವರೆಸಬೇಕು. ಇಲ್ಲದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಡಗಲಪುರ ನಾಗೇಂದ್ರ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ರಾಜ್ಯದ ಬರಪರಿಹಾರ ಹಣ ಬಿಡುಗಡೆಗೆ ಚುನಾವಣೆ ಆಯೋಗ ಅನುಮತಿಸಬೇಕು. ರಾಜ್ಯವು ಹಿಂದೆಂದೂ ಕಂಡರಿಯದಂತಹ ಬರಗಾಲಕ್ಕೆ ತುತ್ತಾಗಿದೆ. 223 ತಾಲೂಕುಗಳಲ್ಲಿ ಬರ ಉದ್ಭವವಾಗಿದ್ದು, 193 ತಾಲೂಕುಗಳು ಗಂಭೀರ ಬರವನ್ನು ಎದುರಿಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಎನ್‌ಡಿಆರ್‌ಎಫ್ ನೀತಿ ಅನ್ವಯ ₹18,171 ಕೋಟಿ ಬಿಡುಗಡೆ ಮಾಡದೆ ನಿರ್ಲಕ್ಷ್ಯ ಮಾಡಿ ಈಗ ಚುನಾವಣೆ ನೆಪ ಹೇಳುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಭೂಗುತ್ತಿಗೆ ನೀಡುವ ಆದೇಶ ರದ್ದು ಮಾಡಬೇಕು; ಬಡಜನರ ಆಕ್ರೋಶ
“ಚುನಾವಣಾ ಆಯೋಗ ಅನುದಾನ ಬಿಡುಗಡೆಗೆ ಕೂಡಲೇ ಅನುಮತಿಸಬೇಕು ಎಂದು ಒತ್ತಾಯಿಸಿದ್ದು, ಈ ಸಂಬಂಧ ಸುಪ್ರಿಂ ಕೋರ್ಟ್ ಮುಂದೆ ಕೇಂದ್ರದ ವಿರದ್ದ ರಾಜ್ಯ ಸರ್ಕಾರ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಸಂಘವು ಪಾರ್ಟಿಯಾಗಲು ಅರ್ಜಿ ಸಲ್ಲಿಸಿದ್ದು, ಸಂಘದ ಪರವಾಗಿ ಹೆಸರಾಂತ ವಕೀಲ ಪ್ರಶಾಂತ್ ಭೂಷಣ್ ಅವರು ವಕೀಲರಾಗಿ ಪ್ರತಿನಿಧಿಸಿದ್ದಾರೆ. ಈ ತಿಂಗಳ 8ರಂದು ಈ ಪ್ರಕರಣವು ವಿಚಾರಣಗೆ ಬಂದಿದ್ದು, ಕೇಂದ್ರ ಸರ್ಕಾರ 15 ದಿನಗಳ ಕಾಲಾವಕಾಶವನ್ನು ಕೋರಿರುತ್ತದೆ” ಎಂದು ಮಾಹಿತಿ ನೀಡಿದರು.
