ಅಬಕಾರಿ ನೀತಿ ಪ್ರಕರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾ.21 ರಂದು ಬಂಧಿಸಿದ್ದ ಕ್ರಮವನ್ನು ಪ್ರಶ್ನಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿ ವಿಚಾರಣೆಯನ್ನು ಏ.29ರ ನಂತರ ಪುರಸ್ಕರಿಸುವುದಾಗಿ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ಏ.09 ರಂದು ವಜಾಗೊಳಿಸಿತ್ತು.
ಎಎಪಿ ಮುಖ್ಯಸ್ಥರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದೆ.
“ಏ.29ರಂದು ಆರಂಭವಾಗುವ ವಾರದಲ್ಲಿ ನೋಟಿಸ್ ನೀಡಿ ಹಿಂತಿರುಗಿಸಬಹುದು” ಎಂದು ದ್ವಿಸದಸ್ಯ ನ್ಯಾಯಮೂರ್ತಿಗಳ ಪೀಠವು ಅರ್ಜಿದಾರರಿಗೆ ಸೂಚನೆ ನೀಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ವಿಚಾರಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ಪ್ರಕರಣದಲ್ಲಿ ಆಯ್ದೆ ಸೋರಿಕೆಗಳಿರುವ ಕಾರಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗನೆ ದಿನಾಂಕವನ್ನು ನಿಗದಿ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಾವು ನಿಮಗೆ ಬೇಗನೆ ದಿನಾಂಕವನ್ನು ನೀಡುತ್ತೇವೆ. ಆದರೆ ನೀವು ಸೂಚಿಸಿದ ದಿನಾಂಕವನ್ನು ನೀಡಲು ಸಾಧ್ಯವಿಲ್ಲ ಎಂದರು.
ಕೋರ್ಟ್‌ಗೆ ಮತ್ತೆ ಮಾಹಿತಿ ನೀಡಿದ ಸಿಂಘ್ವಿ, 15 ಹೇಳಿಕೆಗಳಿದ್ದರೂ ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ಕೇಜ್ರಿವಾಲ್ ಅವರ ಹೆಸರಿಲ್ಲ ಎಂದು ತಿಳಿಸಿದರು.
ಈ ನಡುವೆ ದೆಹಲಿ ಹೈಕೋರ್ಟ್ ಕೇಜ್ರಿವಾಲ್ ನ್ಯಾಯಾಂಗ ಬಂಧನದ ಅವಧಿಯನ್ನು ಏ.23ರವರೆಗೂ ವಿಸ್ತರಿಸಿದೆ.
