ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

Date:

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ, ಜೆಡಿಎಸ್ ನಿರ್ನಾಮವಾಗಲಿದೆ. ಆದರೂ ಮೋದಿಯವರ ‘ಮೋಡಿ’ಗೆ ಗೌಡರು ಮರುಳಾಗುವ, ದೇವೇಗೌಡರ ‘ದೈತ್ಯಶಕ್ತಿ’ಗೆ ಮೋದಿ ದಂಗಾಗುವ ಬಣ್ಣವಿಲ್ಲದ ಬೀದಿ ನಾಟಕ ನಡೆಯುತ್ತಲೇ ಇದೆ.

ಭಾನುವಾರ ಮೈಸೂರಿಗೆ ಪ್ರಧಾನಿ ಮೋದಿಯವರು ಬಂದಿದ್ದರು. ಏಪ್ರಿಲ್‌ನ ಬಿರು ಬಿಸಿಲಿನಲ್ಲಿಯೂ ಲಕ್ಷದ ಮೇಲೆ ಜನ ಜಮಾಯಿಸಿದ್ದರು. ವೇದಿಕೆಯ ಮೇಲೆ ವಿರಾಜಮಾನರಾದ ಯಡಿಯೂರಪ್ಪ-ದೇವೇಗೌಡ, ಕುಮಾರಸ್ವಾಮಿ-ಸುಮಲತಾ, ರೇವಣ್ಣ-ಸಿಟಿ ರವಿ, ಪ್ರಜ್ವಲ್-ಯದುವೀರ್, ಪ್ರತಾಪ್ ಸಿಂಹ-ಜಿ.ಟಿ.ದೇವೇಗೌಡ -ಈ ವಿಚಿತ್ರ ಹೊಂದಾಣಿಕೆಯ ನಾಯಕರನ್ನು ನೋಡಿ ಮೈಸೂರಿನ ಜನ ದಂಗಾಗಿದ್ದರು. ಜನಸ್ತೋಮ ನೋಡಿ, ಘೋಷಣೆಗಳನ್ನು ಕೇಳಿ ರಾಜಕೀಯ ನಾಯಕರು ಥ್ರಿಲ್ಲಾಗಿದ್ದರು.

ಆಧುನಿಕ ಪ್ರಭುಗಳ ಶಕ್ತಿಯೇ ಪ್ರಜೆಗಳು. ಅವರನ್ನು ಅಲ್ಲಿಗೆ ಕರೆದುಕೊಂಡು ಬರಲು ಎಷ್ಟು ಹಣ, ಶ್ರಮ, ಶಕ್ತಿ ಸುರಿಯಬೇಕಾಗುತ್ತದೆ ಎಂಬ ಸತ್ಯ ಗೊತ್ತಿದ್ದರೂ, ಅವರು ನೆರೆದರೆ ನಾಯಕರ ನರನಾಡಿಗಳಲ್ಲಿ ಶಕ್ತಿ ಸಂಚಯಿಸುತ್ತದೆ.

ಅದಕ್ಕಿಂತಲೂ ಮುಖ್ಯವಾಗಿ ಮೋದಿಯವರಿಗೆ ಮತ್ತು ನೆರೆದಿದ್ದ ಜನಸ್ತೋಮಕ್ಕೆ ದಂಗುಬಡಿಸಿದ್ದು- ಮಾಜಿ ಪ್ರದಾನಿ ಎಚ್.ಡಿ. ದೇವೇಗೌಡರ ಉಪಸ್ಥಿತಿ. ಹಾಗೂ ಅವರ ರಣೋತ್ಸಾಹ, ಆಂಗಿಕಾಭಿನಯ, ವಿರೋಧಿಗಳನ್ನು ಹಣಿಯಲು ಬಳಸುತ್ತಿದ್ದ ಮಾರ್ಮಿಕ ಮಾತುಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

’91ನೇ ವಯಸ್ಸಿನ ಈ ದೇವೇಗೌಡ, ತಲೆಯಲ್ಲಿ ಬುದ್ಧಿ ಇಲ್ಲದೆಯೇ ಕುಮಾರಸ್ವಾಮಿಯನ್ನು ಮೋದಿ ಜೊತೆ ಹೋಗೆಂದು ಹೇಳಿಲ್ಲ. ರಾಜ್ಯವನ್ನು ಸೂರೆ ಮಾಡುತ್ತಿರುವುದನ್ನು ತಪ್ಪಿಸಲು ಹೋಗೆಂದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಆ ಮಹನೀಯರು ರಾಜ್ಯದ ಸಂಪತ್ತನ್ನು ಬೆಂಗಳೂರಿನ ಬಿಡಿಎ, ಪಾಲಿಕೆ, ನೀರಾವರಿ ಹಣವನ್ನು ಬಾಚಿ ಬಾಚಿ ನೀಡಿದ್ದಾರೆ’ ಎಂದು ಬಾಚಿಕೊಳ್ಳುವ ರೀತಿಯಲ್ಲಿ ಅಭಿನಯಿಸಿ ತೋರಿಸಿದರು.

ಕನ್ನಡಿಗರನ್ನು ಕನ್ನಡಿಗರೇ ಸಿಗಿದು ತೋರಣ ಕಟ್ಟುತ್ತಿರುವುದನ್ನು ಕಂಡ ಮೋದಿಯವರು ಖುಷಿಗೊಂಡಿದ್ದರು. ಅವರು ಖುಷಿಗೊಂಡಂತೆಲ್ಲ ಗೌಡರು, ‘ಆ ಇಬ್ಬರಿಗೂ ನಮೋ ನಮಃ’ ಎಂದು ವ್ಯಂಗ್ಯ, ವಿಡಂಬನೆಗಳ ಮೂಲಕ ವಿರೋಧಿಗಳ ಜನ್ಮ ಜಾಲಾಡುತ್ತಿದ್ದರು.

ಜಾಲಾಡಲಿ, ಜನರಿಗೂ ಅರ್ಥವಾಗಲಿ, ಕಾಂಗ್ರೆಸ್ಸಿಗರೇನು ಸಾಚಾಗಳಲ್ಲ. ಹಾಗೆಯೇ, ನಾಡಿನ ಜನತೆ ಇದನ್ನೂ ನೆನಪು ಮಾಡಿಕೊಳ್ಳಬೇಕಾದ ಅಗತ್ಯವಿದೆ- 2018-19ರ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅವಧಿಯನ್ನು ಹಾಗೂ 2020-21ರ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲವನ್ನು.

ದೇವೇಗೌಡರ ಪುತ್ರ ಕುಮಾರಸ್ವಾಮಿಯವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಮುಖ್ಯಮಂತ್ರಿಯಾಗಿದ್ದಾಗ, ಅವರ ಮತ್ತೊಬ್ಬ ಪುತ್ರ ಎಚ್.ಡಿ. ರೇವಣ್ಣ, ಲೋಕೋಪಯೋಗಿ ಸಚಿವರಾಗಿದ್ದರು. ಅವರ ಮೇಲೆ, ಬೇರೊಬ್ಬರ ಖಾತೆಯಲ್ಲಿ ಕೈಯಾಡಿಸುವ, ಕಮಿಷನ್ ಕೇಳುವ, ಕೊಡದಿದ್ದರೆ ಫೈಲಿಗೆ ಸಹಿ ಹಾಕದಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಆರೋಪಗಳಿದ್ದವು. ಸಹಿಸದ ಸಚಿವರು ರೇವಣ್ಣ-ಕುಮಾರಣ್ಣರ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದರು.

ಇದೇ ರೀತಿ, 2020-21ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಪುತ್ರ ವಿಜಯೇಂದ್ರರ ಮೇಲೂ ಆರೋಪವಿತ್ತು. ಅದನ್ನು ಸಚಿವರಾದ ಮಾಧುಸ್ವಾಮಿ, ಸೋಮಣ್ಣ, ಸಿ.ಟಿ.ರವಿ, ಆರ್. ಅಶೋಕ್ ಆರೆಸೆಸ್ಸಿನ ಸಂತೋಷ್‌ರಿಗೆ ತಿಳಿಸಿದ್ದರು, ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದರು, ಹೈಕಮಾಂಡಿಗೆ ದೂರು ನೀಡಿದ್ದರು.

ಎಚ್.ಡಿ. ರೇವಣ್ಣ ಮತ್ತು ಬಿ.ವೈ. ವಿಜಯೇಂದ್ರರ ಮೇಲೆ ಇದ್ದ ಈ ಆರೋಪಗಳೆಲ್ಲವೂ, ಇಂದು ದೇವೇಗೌಡರು ಹೇಳಿದ ‘ಬಾಚಿ ಬಾಚಿ’ ಬಳಿದ ಆರೋಪಗಳೇ. ವಿಪರ್ಯಾಸವೆಂದರೆ, ಅವರು ಅದೇ ವೇದಿಕೆಯಲ್ಲಿ ಆಸೀನರಾಗಿದ್ದರು. ಅದೆಲ್ಲವನ್ನು ನೆರೆದಿದ್ದ ಜನರೂ ನೋಡುತ್ತಿದ್ದರು.

ಗೌಡರು ಮುಂದುವರೆದು, ‘ಕೇವಲ 6 ಕೋಟಿ ಜನತೆಯ ಮುಖ್ಯಮಂತ್ರಿ 150 ಕೋಟಿ ಜನತೆಯ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು. ಯಡಿಯೂರಪ್ಪನವರೇ, ಈ ಇಳಿವಯಸ್ಸಿನಲ್ಲಿ ನೀವು ಎಲ್ಲಿಗೆ ಕರೆದರೂ ಬರುತ್ತೇನೆ’ ಎಂದರು.

ದೇವೇಗೌಡರ ಮಾತುಗಳಿಂದ ಯಾರಿಗೆ ಎಷ್ಟು ಧೈರ್ಯ ಸಿಕ್ಕಿತೋ, ಮೋದಿಯವರಂತೂ ಆನಂದತುಂದಿಲರಾಗಿದ್ದರು. ಬಿಜೆಪಿಗರನ್ನು ಬಿಟ್ಟು ಅಪ್ಪ-ಮಕ್ಕಳನ್ನು ಅಪ್ಪಿ ಮುದ್ದಾಡಿದರು.

ಮೋದಿ ಮತ್ತು ಗೌಡರ ಸಮಯ ಸಾಧಕ ರಾಜಕಾರಣ ಮತ್ತು ಸೋಗಲಾಡಿತನ ಜನರಿಗೆ ಅರ್ಥವಾಗದ್ದಲ್ಲ. ಆದರೂ, ಜನ ಅವರ ಮಾತಿಗೆ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿದ್ದರು.

ಸರ್ಕಾರಿ ಏಜೆನ್ಸಿಗಳಾದ ಐಟಿ, ಇಡಿ, ಸಿಬಿಐಗಳನ್ನು ದುರುಪಯೋಗಪಡಿಸಿಕೊಂಡ ಪ್ರಧಾನಿ ಮೋದಿಯವರು, ವಿರೋಧ ಪಕ್ಷಗಳ ನಾಯಕರನ್ನು ಕಳ್ಳರು, ಲೂಟಿಕೋರರಂತೆ ಚಿತ್ರಿಸುತ್ತಿರುವುದು ಹಾಗೂ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಕಪ್ಪು ಹಣವನ್ನು ಬಾಚಿ ಬಾಚಿ ಬಳಿದಿರುವುದು- ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಗೊತ್ತಿದ್ದೂ ಕೈ ಜೋಡಿಸಿದ್ದಾರೆ. ಮಗ ಅಥವಾ ಅಳಿಯ ಗೆದ್ದು ಕೇಂದ್ರದಲ್ಲಿ ಮಂತ್ರಿಯಾದರೆ, ಕುಟುಂಬ ಸುರಕ್ಷಿತ ಎಂದು ಭಾವಿಸಿದ್ದಾರೆ.

ಹರದನಹಳ್ಳಿಯ ಬಡ ಕೃಷಿ ಕುಟುಂಬದಿಂದ ಬಂದ ದೇವೇಗೌಡರು ಪಿಎಲ್‌ಡಿ ಬ್ಯಾಂಕ್ ಮೆಂಬರ್‍‌ನಿಂದ ಹಿಡಿದು ಪ್ರಧಾನಿಯವರೆಗಿನ ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಮಕ್ಕಳು, ಮೊಮ್ಮಕ್ಕಳನ್ನೂ ಅಧಿಕಾರದ ಸ್ಥಾನಕ್ಕೇರಿಸಿದ್ದಾರೆ. ಸಣ್ಮನೆಯನ್ನು ದೊಡ್ಮನೆ ಮಾಡಿದ್ದಾರೆ. ದೊಡ್ಮನೆ ಕಣ್ಣಿಗೆ ಕಾಣಿಸುವುದಿಲ್ಲವೇ, ದೊಡ್ಮನೆ ಮೇಲೆ ಮೋದಿ ದಾಳಿ ಮಾಡಿಸುವುದಿಲ್ಲವೇ? ಮಾಡಿಸುವವರೊಂದಿಗೇ ಮೈತ್ರಿ ಮಾಡಿಕೊಂಡರೆ ಬಚಾವಾಗಿ ಮಾನ-ಮರ್ಯಾದೆ ಉಳಿಸಿಕೊಳ್ಳಬಹುದೆಂದು ಗೌಡರು ಭಾವಿಸಿದ್ದಾರೆ. ಮೈತ್ರಿ ಮಾಡಿಕೊಂಡಿದ್ದಾರೆ.

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ, ಜೆಡಿಎಸ್ ನಿರ್ನಾಮವಾಗಲಿದೆ. ಜೆಡಿಎಸ್‌ಗೆ ಬಲವಿರುವುದೇ ಹಳೇ ಮೈಸೂರು ಭಾಗದಲ್ಲಿ, ಒಕ್ಕಲಿಗರ ಬಲದಲ್ಲಿ. ಅದನ್ನು ಉಳಿಸಿಕೊಳ್ಳಲು ಗೌಡರು ಹೆಣಗಾಡುತ್ತಿದ್ದಾರೆ. ಆದರೆ ಪಕ್ಕದ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಮೋದಿ, ಪ್ರಾದೇಶಿಕ ಪಕ್ಷಗಳನ್ನು ಪಲ್ಟಿ ಹೊಡೆಸುತ್ತಲೇ ಸಾಗಿದ್ದಾರೆ.

ಆದರೂ ಮೋದಿಯವರ ‘ಮೋಡಿ’ಗೆ ಗೌಡರು ಮರುಳಾಗುವ, ದೇವೇಗೌಡರ ‘ದೈತ್ಯಶಕ್ತಿ’ಗೆ ಮೋದಿ ದಂಗಾಗುವ ಬಣ್ಣವಿಲ್ಲದ ಬೀದಿ ನಾಟಕ ನಡೆಯುತ್ತಲೇ ಇದೆ. ಇವರ ಸ್ವಾರ್ಥ ರಾಜಕಾರಣವನ್ನು ಜನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ, ಎಚ್ಚೆತ್ತು ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ರಾಜಕಾರಣವನ್ನು ನಿಜಕ್ಕೂ ಬಲ್ಲವರಿಗೆ, ಇತ್ತೀಚಿನ ಈ ರಾಕಾರಣಿಗಳ ನಡೆಗಳು, ಹೊಸತೇನು ಅನಿಸದು. ಸ್ವಜನ ಪಕ್ಷಪಾತ, ಭ್ರಷ್ಟಾಚಾರ.ಅಧಿಕಾರದ ದುರುಪಯೋಗದಲ್ಲೆ ಮುಳುಗಿರುವ ರಾಜಕಾರಣಿಗಳದು ಸಮಯಸಾಧಕ ನಡೆ ಅಂತ ಸ್ಪಷ್ಟವಾಗಿ ತಿಳಿದಿದೆ. ಈ ನಿಟ್ಟಿನಲ್ಲಿ ಸಂಪಾದಕೀಯ ಸರಿಯಾಗಿ ವಿಶ್ಲೇಷಿಸಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ...

ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!

ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕ 'ದಿ ಎಕಾನಮಿಸ್ಟ್‌'ನ 2022ರ ಏಪ್ರಿಲ್ ಸಂಚಿಕೆಯೊಂದರ ಬರೆಹವೊಂದರ...

ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

'ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು' ಎನ್ನುವುದು ಕೇವಲ ಒಂದು ಪೊಲಿಟಿಕಲ್...