ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು…
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಎಲ್ಲೆಡೆಯೂ ಅದ್ಧೂರಿ ಸಂಭ್ರಮಾಚರಣೆ. ಇತ್ತೀಚೆಗೆ ಅಂಬೇಡ್ಕರ್ ವಿಚಾರಗಳಿಗೆ ತೆರೆದುಕೊಳ್ಳುವವರ ಸಂಖ್ಯೆಯೂ ದ್ವಿಗುಣ. ನಗರ, ಪಟ್ಟಣ, ಹಳ್ಳಿಗಳೆಡೆಯಲ್ಲೂ ಅಂಬೇಡ್ಕರ್ ಹಬ್ಬದ ಉತ್ಸವ. ಇಂಥ ಉತ್ಸವಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ತೆರೆದುಕೊಂಡಿರುವ ಊರು ಚಿತ್ರದುರ್ಗ ಜಿಲ್ಲೆಯ ಕಡೇಹುಡೆ ಗ್ರಾಮ. ಇಲ್ಲಿ ದಲಿತರೆಲ್ಲ ಸೇರಿ ಆಚರಿಸುವ ಅಂಬೇಡ್ಕರ್ ಜಯಂತಿಯನ್ನು ಊರವರು ನಿಂತು ನೋಡುತ್ತಾರೆ. ದಲಿತರು ತಮ್ಮ ಅಸ್ಮಿತೆಯಾಗಿರುವ ನೀಲಿ ಬಾವುಟವನ್ನು ಊರ ಕೆಲವೆಡೆಗಳಲ್ಲಿ ಕಟ್ಟಿ ಕಂಗೊಳಿಸುವಂತೆ ಮಾಡಿರುತ್ತಾರೆ. ಇಂಥ ಅಂಬೇಡ್ಕರ್ ಭಾವಚಿತ್ರವಿರುವ ನೀಲಿ ಬಾವುಟ ಕೆಲವರ ಕಣ್ಣುಗಳ ಕೆಂಪಾಗಿಸಿರಬೇಕು. ಹಾಗಾಗಿ, ಅಂಥವರು ಸೌಹಾರ್ದತೆಯನ್ನು ಕದಡುವ, ಭಾವನೆಗಳನ್ನು ಕೆರಳಿಸುವ ಹುನ್ನಾರ ಹೂಡಿದ್ದರು.
ದಲಿತ ಕೇರಿಯ ಜನರು ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ತಮ್ಮ ತಮ್ಮ ಹೊಟ್ಟೆ ಪಾಡಿಗಾಗಿ ಎಲ್ಲೆಲ್ಲೋ ಹೋಗಿರುತ್ತಾರೆ. ಇತ್ತ, ಜನರಿಲ್ಲದ ಸಂದರ್ಭದಲ್ಲಿ ಪ್ರತ್ಯಕ್ಷರಾದ ಪಿಡಿಓ ಈಶ್ವರಪ್ಪ ತಮ್ಮ ಸಿಬ್ಬಂದಿಗಳಿಗೆ ಹೇಳಿ ಮುಂದೆ ನಿಂತು ಯಾವ ಸೂಚನೆಯನ್ನೂ ನೀಡದೆ ನೀಲಿ ಬಾವುಟಗಳನ್ನು ಅಕ್ಷರಶಃ ಕಿತ್ತು ಹಾಕಿಸಿದರು. ಯಾರ ಒತ್ತಡಕ್ಕೆ ಮಣಿದು ಪಿಡಿಓ ಈ ರೀತಿ ನಡೆದುಕೊಂಡರೋ ಗೊತ್ತಿಲ್ಲ. ಆದರೆ ಎಚ್ಚೆತ್ತ ದಲಿತ ಜನ ಮಾತ್ರ ಸುಮ್ಮನೆ ಕೂರಲಿಲ್ಲ. ಸಂಯಮದಿಂದಲೇ ಪಿಡಿಓ ಬಳಿ ಕೇಳಿ ನೋಡಿದರು. ಪಿಡಿಓ ಮಾತ್ರ ಚುನಾವಣಾ ನೀತಿ ಸಂಹಿತೆ ಪಾಠ ಮಾಡಿ ಮನೆಗೆ ಹೋದರು. ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಚುನಾವಣಾ ನೀತಿ ಸಂಹಿತೆಯೇನು ಅಡ್ಡಿಯಲ್ಲ. ಆದರೂ ಅವರಿಗೆ ಅದೇ ಊರಲ್ಲಿ ಹಾರಾಡುವ ಕೇಸರಿ ಬಾವುಟಗಳು ಮಾತ್ರ ಕಾಣಿಸಲಿಲ್ಲ.
ದಲಿತರು ಹಸಿವನ್ನೂ ಸಹಿಸಿಕೊಳ್ಳುತ್ತಾರೆ, ಆದರೆ ತಮ್ಮ ಅಸ್ಮಿತೆಗೆ ಧಕ್ಕೆ ಉಂಟಾದರೆ ಮಾತ್ರ ಸಹಿಸುವುದಿಲ್ಲ. ಹಾಗಾಗಿ, ಸಂಜೆ ಹೊತ್ತಿಗೆ ವಿಷಯ ದಲಿತ ಸಮುದಾಯದ ಎಲ್ಲ ಜನರಿಗೆ ಮುಟ್ಟಿ ತಮ್ಮ ಗೂಡಿನಂತಹ ಮನೆಗಳಿಂದ ಹೊರಬಂದು ಒಂದು ಕಡೆ ಸೇರಿದರು. ಮನೆಯಲ್ಲಿದ್ದೇ ಗಂಭೀರತೆಯನ್ನು ತಿಳಿದ ಪಿಡಿಓ, ಸಿಬ್ಬಂದಿಗಳನ್ನು ಕಳಿಸಿ ಬಾವುಟಗಳನ್ನು ಕಟ್ಟಿಕೊಡುವುದಾಗಿ ಹೇಳುತ್ತಾರೆ. ಆದರೆ ದಲಿತರು ಮಾತ್ರ ಇದಕ್ಕೆ ಒಪ್ಪಲಿಲ್ಲ. ಸ್ವತಃ ಪಿಡಿಓ ಅವರೇ ಇಲ್ಲಿಗೆ ಬಂದು ಕಿತ್ತು ಹಾಕಿರುವ ಧ್ವಜವನ್ನು ಕಟ್ಟಿಸಿಕೊಡಬೇಕೆಂದು ಒತ್ತಾಯಿಸಿದರು. ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಕಿವಿಗೆ ಅಪ್ಪಳಿಸಿದವು. ಹಾಗಾಗಿ ಅವರು ಸರ್ಕಲ್ ಇನ್‌ಸ್ಪೆಕ್ಟರ್ ರಾಜಣ್ಣ ಅವರೊಂದಿಗೆ ಸ್ಥಳಕ್ಕೆ ದೌಡಾಯಿಸುತ್ತಾರೆ. ಸರ್ಕಲ್ ಇನ್‌ಸ್ಪೆಕ್ಟರ್ ಸಮಯ ಪ್ರಜ್ಞೆಯಿಂದಾಗಿ ಮತ್ತು ದಲಿತರ ಸಂಯಮ ಗುಣದಿಂದಾಗಿ, ಇನ್‌ಸ್ಪೆಕ್ಟರ್ ಮತ್ತು ಪಿಡಿಓ ಅವರು ತಪ್ಪನ್ನು ಒಪ್ಪಿಕೊಡು ಜನರ ಒತ್ತಾಯದಂತೆ ನೀಲಿ ಬಾವುಟವನ್ನು ಕಟ್ಟಿ ಹಾರಿಸಿದರು. ಆ ಕ್ಷಣ ಆ ಜನರಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡ ಭಾವ ಮೂಡಿತ್ತು. ಒಂದು ವೇಳೆ ಈ ಘಟನೆಯನ್ನು ಅವರು ಒಂದಾಗಿ ಪ್ರಶ್ನಿಸದೇ ಹೋಗಿದ್ದರೆ ಮುಂದೆ ಕಳೆದುಕೊಳ್ಳುವುದು ತುಂಬಾ ಇತ್ತು.
ಎಲ್ಲೆಲ್ಲೂ ದಾಂಗುಡಿಯಿಡುತ್ತಿರುವ ಕೇಸರಿ, ಚಿತ್ರದುರ್ಗ ಜಿಲ್ಲೆಗೂ ಹರಡಿ ನಮ್ಮ ಹಳ್ಳಿಗೂ ಪ್ರವೇಶ ಪಡೆದು ನಮ್ಮದೇ ಹುಡುಗರ ಹೆಗಲ ಮೇಲೂ ಕೆಲ ಕಾಲ ನೇತಾಡುತ್ತಿತ್ತು. ಇತ್ತೀಚೆಗಷ್ಟೆ ಅದರಿಂದ ಬಿಡುಗಡೆ ಹೊಂದಿ ಅಕ್ಷರ, ವಿಚಾರಗಳಿಗೆ ಆದ್ಯತೆ ತೋರುವ ದಾರಿಯಲ್ಲಿ ಅವರು ನೀಲಿ ಬಾವುಟವನ್ನು ಹಾರಿಸುತ್ತಿದ್ದಾರೆ.
ಅಕ್ಷರ ಕಲಿತ ಪ್ರತಿಯೊಬ್ಬರೂ ತುಳಿತಕ್ಕೆ ಒಳಗಾದ ತಮ್ಮ ಸಮುದಾಯಗಳ ಜನರನ್ನು ಆತುಕೊಳ್ಳಬೇಕಿದೆ. ಆ ಮೂಲಕ ಜಾಗೃತ ಬೆಳಕೊಂದು ಮೂಡುವುದನ್ನು ಕಾಣಬಹುದು. ಅದರ ಸೂಚನೆಯನ್ನು ನಾವು ನಿಜಕ್ಕೂ ಕಾಣುತ್ತಿದ್ದೇವೆ.
“ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದಲೇ ಮಾಡಿದ ಇಂತಹ ಕುಕೃತ್ಯಗಳ ಹಿಂದಿನ ಷಡ್ಯಂತ್ರದ ಬಗ್ಗೆ ಸೂಕ್ತ ತನಿಖೆಯಾಗಬೇಕು, ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮವಹಿಸಬೇಕು, ದಲಿತರು ಮುಕ್ತವಾಗಿ ಬದುಕಲು ಬಿಡಬೇಕು” ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ನೊಂದ ಜನರು ಆಗ್ರಹಿಸುತ್ತಿದ್ದಾರೆ.
